ಬೆಂಗಳೂರು : ಭಾರತದಲ್ಲಿ ತಯಾರಾಗುವ (Made in India) ಎಷ್ಟೋ ಕಾರುಗಳು ದೇಶೀಯ ಮಾರುಕಟ್ಟೆಯಲ್ಲಿ ಹೇಳಿಕೊಳ್ಳುವಂತಹ ಯಶಸ್ಸು ಕಂಡಿಲ್ಲ. ಆದರೆ, ಇವೇ ಕಾರುಗಳು ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಗ್ರಾಹಕರ ಮನಗೆಲ್ಲುವಲ್ಲಿ ಯಶಸ್ವಿಯಾಗಿವೆ. ಭಾರತೀಯರು ಹೆಚ್ಚಾಗಿ ಒಲವು ತೋರದಿದ್ದರೂ, ವಿದೇಶಿಗರು ಮುಗಿಬಿದ್ದು ಖರೀದಿಸುತ್ತಿರುವ, ಭಾರತದಲ್ಲಿ ಉತ್ಪಾದನೆಯಾಗುವ 4 ಪ್ರಮುಖ ಕಾರುಗಳ ವಿವರ ಇಲ್ಲಿದೆ.
ಮಾರುತಿ ಸುಜುಕಿ ಜಿಮ್ನಿ: ರಫ್ತಿನಲ್ಲಿ ಭರ್ಜರಿ ಸಾಧನೆ
ವಿದೇಶಿ ಮಾರುಕಟ್ಟೆಗೆ ಅತಿ ಹೆಚ್ಚು ರಫ್ತಾಗುತ್ತಿರುವ ಹಾಗೂ ಜನಪ್ರಿಯವಾಗಿರುವ ಕಾರುಗಳ ಪಟ್ಟಿಯಲ್ಲಿ ಮಾರುತಿ ಸುಜುಕಿ ಜಿಮ್ನಿ ಮೊದಲ ಸ್ಥಾನದಲ್ಲಿದೆ. ಭಾರತದಲ್ಲಿ ಮಹೀಂದ್ರಾ ಥಾರ್‌ನಂತಹ ದೊಡ್ಡ ಎಸ್‌ಯುವಿಗಳ ಪೈಪೋಟಿಯಿಂದಾಗಿ ಜಿಮ್ನಿ ಹೆಚ್ಚು ಮಾರಾಟವಾಗುತ್ತಿಲ್ಲ. ಭಾರತದಲ್ಲಿ ಸರಾಸರಿ ತಿಂಗಳಿಗೆ ಕೇವಲ 500 ರಿಂದ 600 ಜಿಮ್ನಿ ಕಾರುಗಳು ಮಾರಾಟವಾಗುತ್ತಿವೆ.
ಆದರೆ, 2025-26ನೇ ಆರ್ಥಿಕ ವರ್ಷದಲ್ಲಿ (FY26) ಮಾರುತಿ ಸುಜುಕಿ ಕಂಪನಿಯು ಜಪಾನ್, ಯುಎಇ ಸೇರಿದಂತೆ ವಿವಿಧ ದೇಶಗಳಿಗೆ ಬರೋಬ್ಬರಿ 72,209 ಜಿಮ್ನಿ ಕಾರುಗಳನ್ನು ರಫ್ತು ಮಾಡಿದೆ. ಹಿಂದಿನ ವರ್ಷಕ್ಕೆ (FY25) ಹೋಲಿಸಿದರೆ ರಫ್ತು ಪ್ರಮಾಣದಲ್ಲಿ ಶೇ. 50.5 ರಷ್ಟು ಏರಿಕೆಯಾಗಿದೆ. ದೇಶೀಯ ಮಾರಾಟಕ್ಕೆ ಹೋಲಿಸಿದರೆ ಜಿಮ್ನಿಯ ರಫ್ತು ಪ್ರಮಾಣ 10 ಪಟ್ಟು ಹೆಚ್ಚಾಗಿದೆ.
ಹುಂಡೈ ವೆರ್ನಾ: ಅಂತರರಾಷ್ಟ್ರೀಯ ಮಟ್ಟದಲ್ಲಿ ಬೇಡಿಕೆ ಕಾಯ್ದುಕೊಂಡ ಸೆಡಾನ್
ಭಾರತೀಯ ಮಾರುಕಟ್ಟೆಯಲ್ಲಿ ಸೆಡಾನ್ ಕಾರುಗಳ ಕ್ರೇಜ್ ಕಡಿಮೆಯಾಗಿದ್ದರೂ, ಅಂತರರಾಷ್ಟ್ರೀಯ ಮಟ್ಟದಲ್ಲಿ ಇವುಗಳ ಬೇಡಿಕೆ ಇನ್ನೂ ಕುಗ್ಗಿಲ್ಲ ಎಂಬುದಕ್ಕೆ ಹುಂಡೈ ವೆರ್ನಾ ಉತ್ತಮ ಉದಾಹರಣೆಯಾಗಿದೆ. FY26 ರಲ್ಲಿ ಹುಂಡೈ ಕಂಪನಿಯು 63,044 ವೆರ್ನಾ ಕಾರುಗಳನ್ನು ರಫ್ತು ಮಾಡುವ ಮೂಲಕ, FY25 ಕ್ಕಿಂತ ಶೇ. 19.8 ರಷ್ಟು ಪ್ರಗತಿ ಸಾಧಿಸಿದೆ. ಭಾರತದಿಂದ ಅತಿ ಹೆಚ್ಚು ರಫ್ತಾಗುವ ಕಾರುಗಳ ಪೈಕಿ ವೆರ್ನಾ ಮೂರನೇ ಸ್ಥಾನದಲ್ಲಿದೆ. ಆದರೆ, ಭಾರತದಲ್ಲಿ ಇದರ ಮಾರಾಟ ತಿಂಗಳಿಗೆ ಸರಾಸರಿ 800 ರಿಂದ 900 ರ ಆಸುಪಾಸಿನಲ್ಲಿದೆ. ವಾರ್ಷಿಕ 63 ಸಾವಿರಕ್ಕೂ ಅಧಿಕ ರಫ್ತು ಪ್ರಮಾಣವನ್ನು ಗಮನಿಸಿದರೆ, ವೆರ್ನಾ ಕಾರಿಗೆ ಭಾರತಕ್ಕಿಂತ ವಿದೇಶಗಳಲ್ಲೇ ಹೆಚ್ಚಿನ ಮಾರುಕಟ್ಟೆ ಇದೆ ಎಂಬುದು ಸ್ಪಷ್ಟವಾಗುತ್ತದೆ.
ನಿಸ್ಸಾನ್ ಮ್ಯಾಗ್ನೈಟ್: ನಿಸ್ಸಾನ್ ಬ್ರ್ಯಾಂಡ್‌ನ ಜೀವನಾಡಿ
ಭಾರತದಲ್ಲಿ ನಿಸ್ಸಾನ್ ಬ್ರ್ಯಾಂಡ್ ಅನ್ನು ಜೀವಂತವಾಗಿರಿಸಿರುವ ಏಕೈಕ ಕಾರು ಎಂದರೆ ಅದು ಸಬ್-ಕಾಂಪ್ಯಾಕ್ಟ್ ಎಸ್‌ಯುವಿ ‘ಮ್ಯಾಗ್ನೈಟ್’. ದೇಶೀಯ ಮಾರುಕಟ್ಟೆಯಲ್ಲಿ ಸ್ಥಿರ ಮಾರಾಟವನ್ನು ಕಾಯ್ದುಕೊಂಡಿದ್ದರೂ, ಇದರ ರಫ್ತು ಪ್ರಮಾಣದಲ್ಲಿ ಭಾರೀ ಜಿಗಿತ ಕಂಡಿದೆ. FY26 ರಲ್ಲಿ ನಿಸ್ಸಾನ್ ಕಂಪನಿಯು 56,704 ಮ್ಯಾಗ್ನೈಟ್ ಕಾರುಗಳನ್ನು ರಫ್ತು ಮಾಡಿದ್ದು, FY25 ಕ್ಕೆ ಹೋಲಿಸಿದರೆ ಶೇ. 94.5 ರಷ್ಟು ಭಾರೀ ಏರಿಕೆ ದಾಖಲಿಸಿದೆ. ಭಾರತದಲ್ಲಿ ತಿಂಗಳಿಗೆ ಸುಮಾರು 1,800 ರಿಂದ 2,000 ಮ್ಯಾಗ್ನೈಟ್ ಕಾರುಗಳು ಮಾರಾಟವಾಗುತ್ತಿದ್ದು, ದೇಶೀಯ ಮಾರಾಟಕ್ಕಿಂತ ಇದರ ರಫ್ತು ಪ್ರಮಾಣ ಎರಡು ಪಟ್ಟು ಹೆಚ್ಚಿರುವುದು ವಿಶೇಷ.
ಮಾರುತಿ ಸುಜುಕಿ ಎಸ್-ಪ್ರೆಸ್ಸೊ: ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಉತ್ತಮ ಪ್ರದರ್ಶನ
ಈ ಪಟ್ಟಿಯಲ್ಲಿರುವ ಕೊನೆಯ ಕಾರು ಮಾರುತಿ ಸುಜುಕಿ ಎಸ್-ಪ್ರೆಸ್ಸೊ (S-Presso). ನಿರ್ಮಾಣ ಗುಣಮಟ್ಟದ (build quality) ಕಾರಣದಿಂದಾಗಿ ಭಾರತದಲ್ಲಿ ಇದು ಅಷ್ಟಾಗಿ ಜನಪ್ರಿಯವಾಗಿಲ್ಲ. ಭಾರತದಲ್ಲಿ ಇದರ ಮಾರಾಟವು ತೀವ್ರ ಏರಿಳಿತಗಳಿಂದ ಕೂಡಿದೆ. ಆದರೆ, ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಎಸ್-ಪ್ರೆಸ್ಸೊ ಉತ್ತಮ ಪ್ರದರ್ಶನ ನೀಡುತ್ತಿದೆ. FY26 ರಲ್ಲಿ ಮಾರುತಿ ಸುಜುಕಿ ಕಂಪನಿಯು 40,210 ಎಸ್-ಪ್ರೆಸ್ಸೊ ಕಾರುಗಳನ್ನು ರಫ್ತು ಮಾಡಿದೆ. FY25 ಕ್ಕೆ ಹೋಲಿಸಿದರೆ ಇದು ಶೇ. 61 ರಷ್ಟು ಪ್ರಗತಿ ಸಾಧಿಸಿದೆ. ಭಾರತೀಯರಿಗಿಂತ ವಿದೇಶಿಗರೇ ಈ ಕಾರನ್ನು ಹೆಚ್ಚು ಇಷ್ಟಪಟ್ಟಿದ್ದಾರೆ ಎಂಬುದನ್ನು ಈ ಅಂಕಿ-ಅಂಶಗಳು ಸಾಬೀತುಪಡಿಸುತ್ತವೆ.
ಇದನ್ನೂ ಓದಿ : ಸೋಲಿನ ಸುಳಿಯಿಂದ ಹೊರಬರಲು ಲಕ್ನೋ ಯತ್ನ.. ವೈಭವ್ ಸೂರ್ಯವಂಶಿ ಮೇಲೆ ಎಲ್ಲರ ಕಣ್ಣು!



















