ಹಾಸನ : ಕೆರೆಯಲ್ಲಿ ಕುರಿ ಮೈತೊಳೆಯಲು ತೆರಳಿದ್ದ ಇಬ್ಬರು ಸಹೋದರರು ನೀರಿನಲ್ಲಿ ಮುಳುಗಿ ಸಾವನ್ನಪ್ಪಿರುವ ದಾರುಣ ಘಟನೆ ಜಿಲ್ಲೆಯ ಅರಸೀಕೆರೆ ತಾಲೂಕಿನ ಜಾವಗಲ್ ಗ್ರಾಮದಲ್ಲಿ ನಡೆದಿದೆ. ಇಮ್ರಾನ್ (15) ಮತ್ತು ಯಾಸಿನ್ (13) ಮೃತ ದುರ್ದೈವಿಗಳು.
ಜಾವಗಲ್ ಗ್ರಾಮದ ಇಮ್ರಾನ್ 10ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿದ್ದರೆ, ಯಾಸಿನ್ 8ನೇ ತರಗತಿಯ ವಿದ್ಯಾರ್ಥಿಯಾಗಿದ್ದ. ಬೇಸಿಗೆ ರಜೆ ಹಿನ್ನೆಲೆ ಮನೆಯಲ್ಲಿದ್ದ ಇಬ್ಬರು, ತಾವು ಸಾಕಿದ್ದ ಕುರಿಗಳ ಮೈತೊಳೆಯಲೆಂದು ನಿನ್ನೆ ಸಂಜೆ ಗ್ರಾಮದ ಸಮೀಪವಿರುವ ಜಾವಗಲ್ ದೊಡ್ಡಕೆರೆಗೆ ತೆರಳಿದ್ದರು.
ಈ ವೇಳೆ ಆಕಸ್ಮಿಕವಾಗಿ ಕಾಲು ಜಾರಿ ಕೆರೆಯ ಆಳದ ಸ್ಥಳಕ್ಕೆ ಬಿದ್ದಿದ್ದಾರೆ. ಒಬ್ಬರನ್ನು ರಕ್ಷಿಸಲು ಹೋಗಿ ಮತ್ತೊಬ್ಬರು ನೀರಿನಲ್ಲಿ ಮುಳುಗಿದ್ದಾರೆ ಎನ್ನಲಾಗಿದೆ. ಅಗ್ನಿಶಾಮಕ ಸಿಬ್ಬಂದಿ ಹಾಗೂ ಸ್ಥಳೀಯರ ಸತತ ಕಾರ್ಯಾಚರಣೆಯ ಮೂಲಕ ಬಾಲಕರ ಶವಗಳನ್ನು ಕೆರೆಯಿಂದ ಹೊರತೆಗೆಯಲಾಗಿದೆ.
ಸದ್ಯ ಜಾವಗಲ್ ಗ್ರಾಮದಲ್ಲಿ ಮೌನ ಆವರಿಸಿದ್ದು, ಮಕ್ಕಳನ್ನು ಕಳೆದುಕೊಂಡ ಹೆತ್ತವರ ಆಕ್ರಂದನ ಮುಗಿಲು ಮುಟ್ಟಿದೆ. ಘಟನಾ ಸಂಬಂಧ ಜಾವಗಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಕೈಗೊಂಡಿದ್ದಾರೆ.
ಇದನ್ನೂ ಓದಿ : ‘ಮಕ್ಕಳಾಗಬೇಕಿದ್ದರೆ ನಿನ್ನ ಹೆಂಡ್ತಿನ ನನ್ನ ಜತೆ ಕಳ್ಸು’ : ಭೀಕರ ಅನುಭವ ಬಿಚ್ಚಿಟ್ಟ ನಾಸಿಕ್ TCS ಉದ್ಯೋಗಿ!


















