ಬೆಂಗಳೂರು: ರಾಜ್ಯದಲ್ಲಿ ಅನರ್ಹರು ಬಿಪಿಎಲ್ ರೇಷನ್ ಕಾರ್ಡ್ ಹೊಂದಿದ್ದರೆ, ಅಂತಹವರಿಗೆ ಕಹಿ ಸುದ್ದಿ ಕಾದಿದೆ. ರಾಜ್ಯದಲ್ಲಿರುವ 14 ಲಕ್ಷ ಬಿಪಿಎಲ್ ಕಾರ್ಡ್ ಗಳನ್ನು ರದ್ದುಗೊಳಿಸಿ, ಅವುಗಳನ್ನು ಎಪಿಎಲ್ ಕಾರ್ಡ್ ಗಳನ್ನಾಗಿ ಮಾರ್ಪಡಿಸಲು ರಾಜ್ಯ ಸರ್ಕಾರ ತೀರ್ಮಾನಿಸಿದೆ. ಹಾಗಾಗಿ, ಮುಂದಿನ ದಿನಗಳಲ್ಲಿ ಅನರ್ಹರ ಬಿಪಿಎಲ್ ಕಾರ್ಡ್ ಗಳು ರದ್ದಾಗಲಿವೆ. ಆ ಮೂಲಕ ಅರ್ಹರಿಗೆ ಮಾತ್ರ ಸರ್ಕಾರದ ಸವಲತ್ತು, ಪಡಿತರ ನೀಡಲು ರಾಜ್ಯ ಸರ್ಕಾರ ತೀರ್ಮಾನಿಸಿದೆ.
ಯಾರೆಲ್ಲ ಬಿಪಿಎಲ್ ಕಾರ್ಡ್ ಹೊಂದಲು ಅರ್ಹರಲ್ಲ?
ಕುಟುಂಬದಲ್ಲಿ ಯಾರಾದರೂ ಇನ್ ಕಮ್ ಟ್ಯಾಕ್ಸ್ ಪಾವತಿಸುತ್ತಿದ್ದರೆ, ಸರ್ಕಾರಿ ಉದ್ಯೋಗ ಪಡೆದಿದ್ದರೆ ಅಂತಹವರು ಬಿಪಿಎಲ್ ಕಾರ್ಡ್ ಹೊಂದುವಂತಿಲ್ಲ. ಹಾಗೆಯೇ, ಕುಟುಂಬದ ವಾರ್ಷಿಕ ಆದಾಯ 1.20 ಲಕ್ಷ ರೂಪಾಯಿಗಿಂತ ಹೆಚ್ಚಿದ್ದರೆ, ಕಾರು ಸೇರಿ ಯಾವುದೇ ನಾಲ್ಕು ಚಕ್ರಗಳ ವಾಹನವನ್ನು ಹೊಂದಿದ್ದರೆ, ಅಂತಹವರ ಕಾರ್ಡ್ ಗಳನ್ನು ರದ್ದುಗೊಳಿಸಲು ತೀರ್ಮಾನಿಸಲಾಗಿದೆ.
ಅರ್ಹರಿಗೆ ತೊಂದರೆ ಇಲ್ಲ
ಬಿಪಿಎಲ್ ಕಾರ್ಡ್ ಹೊಂದಲು ಅರ್ಹರಿದ್ದರೂ ಯಾವುದಾದರೂ ಕಾರ್ಡ್ ಗಳು ಎಪಿಎಲ್ ಆಗಿ ಬದಲಾಗಿದ್ದರೆ, ಅವರು ಚಿಂತಿಸಬೇಕಿಲ್ಲ. ತಹಶೀಲ್ದಾರ್ ಕಚೇರಿ ಅಥವಾ ಆಹಾರ ಇಲಾಖೆಯ ಕಚೇರಿಗೆ ಅಗತ್ಯ ದಾಖಲೆಗಳೊಂದಿಗೆ (ಆದಾಯ ಪ್ರಮಾಣ ಪತ್ರ ಇತ್ಯಾದಿ) ಭೇಟಿ ನೀಡಿ ಮನವಿ ಸಲ್ಲಿಸಬಹುದು. ನಿಮ್ಮ ಆದಾಯದ ದಾಖಲೆಗಳು ಸರಿಯಾಗಿದ್ದರೆ, ಅಧಿಕಾರಿಗಳು ಮರುಪರಿಶೀಲನೆ ನಡೆಸಿ ಮತ್ತೆ ಬಿಪಿಎಲ್ ಕಾರ್ಡ್ ನೀಡುತ್ತಾರೆ.
ಸ್ಟೇಟಸ್ ತಿಳಿಯುವುದು ಹೇಗೆ?
ನಿಮ್ಮ ಕಾರ್ಡ್ ಈಗ ಏನಾಗಿದೆ? ರದ್ದಾಗಿದೆಯೋ, ಎಪಿಎಲ್ ಕಾರ್ಡ್ ಆಗಿ ಬದಲಾವಣೆ ಹೊಂದಿದೆ ಎಂಬುದನ್ನು ಸಾರ್ವಜನಿಕರು ಆನ್ ಲೈನ್ ಮೂಲಕವೇ ತಿಳಿಯಬಹುದಾಗಿದೆ. ರಾಜ್ಯ ಸರ್ಕಾರದ https://ahara.karnataka.gov.in/FCS_VERIFY_MSER/ ವೆಬ್ ಸೈಟ್ ಗೆ ಭೇಟಿ ನೀಡುವ ಮೂಲಕ ನಿಮ್ಮ ಕಾರ್ಡಿನ ಸ್ಥಿತಿಗತಿಯನ್ನು ಪರಿಶೀಲನೆ ಮಾಡಬಹುದಾಗಿದೆ.



















