ಬೆಂಗಳೂರು : ನಗರದ ಡಿಜೆ ಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯ ಕನಕನಗರದಲ್ಲಿ ಯುವತಿ ಹಾಗೂ ಇಬ್ಬರು ಯುವಕರ ಮೇಲೆ ಗುಂಪೊಂದು ಹಿಗ್ಗಾಮುಗ್ಗಾ ಥಳಿಸಿರುವ ಘಟನೆ ಬೆಳಕಿಗೆ ಬಂದಿದೆ. ಅಂಗಡಿ ಮುಂಭಾಗದಲ್ಲಿ ನಿಂತು ಸಿಗರೇಟ್ ಸೇದುತ್ತಿದ್ದ ವೇಳೆ ಈ ಘಟನೆ ನಡೆದಿದೆ.
ಎರಡು ದಿನಗಳ ಹಿಂದೆ ನಡೆದಿರುವ ಈ ಘಟನೆ ತಡವಾಗಿ ಬೆಳಕಿಗೆ ಬಂದಿದೆ. ಯುವತಿ ಹಾಗೂ ಇಬ್ಬರು ಯುವಕರು ಅಂಗಡಿ ಮುಂದೆ ನಿಂತಿದ್ದರು. ಇದೇ ವೇಳೆ ಸ್ಥಳೀಯವಾಗಿ ಇದ್ದ ಏಳೆಂಟು ಯುವಕರು ಕೂಡ ಅಲ್ಲೇ ನಿಂತಿದ್ದು, ಕ್ಷುಲ್ಲಕ ಕಾರಣಕ್ಕೆ ಎರಡು ಗುಂಪುಗಳ ನಡುವೆ ಗಲಾಟೆ ಶುರುವಾಗಿದೆ.
ಈ ಗಲಾಟೆ ಕ್ಷಣಾರ್ಧದಲ್ಲಿ ತೀವ್ರಗೊಂಡಿದ್ದು, ಯುವಕರ ಗುಂಪು ಏಕಾಏಕಿ ರಸ್ತೆಯಲ್ಲೇ ಅಟ್ಟಾಡಿಸಿ ಮೂವರ ಮೇಲೆ ಹಲ್ಲೆ ನಡೆಸಿದೆ. ಘಟನೆ ವೇಳೆ ಸ್ಥಳದಲ್ಲಿದ್ದವರು ಇದನ್ನು ವಿಡಿಯೋ ಮಾಡಿ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದಾರೆ.
ಹಲ್ಲೆ ವಿಡಿಯೋ ವೈರಲ್ ಆಗುತ್ತಿದ್ದಂತೆ ಪೊಲೀಸರು ತನಿಖೆ ಆರಂಭಿಸಿದ್ದಾರೆ. ಸುಮೋಟೋ ಪ್ರಕರಣ ದಾಖಲಿಸಿಕೊಂಡಿರುವ ಡಿಜೆ ಹಳ್ಳಿ ಪೊಲೀಸರು, ಹಲ್ಲೆಗೆ ಕಾರಣ ಏನು, ಹಲ್ಲೆಗೊಳಗಾದವರು ಯಾರು ಮತ್ತು ಹಲ್ಲೆ ನಡೆಸಿದವರು ಯಾರು ಎಂಬುದರ ಪತ್ತೆಗೆ ಮುಂದಾಗಿದ್ದಾರೆ.
ಇದನ್ನೂ ಓದಿ : ಮಾರಕಾಸ್ತ್ರ ಹಿಡಿದು ಮನೆಗೆ ನುಗ್ಗಲು ಯತ್ನಿಸಿದ ಪುಡಿ ರೌಡಿಗಳು.. ವ್ಯಕ್ತಿಯ ಸಮಯ ಪ್ರಜ್ಞೆಯಿಂದ ತಪ್ಪಿತು ದೊಡ್ಡ ಅನಾಹುತ!


















