ಮುಂಬೈ: ಐಪಿಎಲ್ 2026ರ 20ನೇ ಪಂದ್ಯದಲ್ಲಿ ಮುಂಬೈನ ವಾಂಖೆಡೆ ಮೈದಾನದಲ್ಲಿ ನಡೆದ ಹೈವೋಲ್ಟೇಜ್ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ಮುಂಬೈ ಇಂಡಿಯನ್ಸ್ ವಿರುದ್ಧ 18 ರನ್‌ಗಳ ಅಂತರದಿಂದ ಗೆಲುವು ಸಾಧಿಸಿದೆ. ಈ ಮೂಲಕ ಕಳೆದ ಪಂದ್ಯದಲ್ಲಿ ಸೋಲು ಕಂಡಿದ್ದ ಆರ್‌ಸಿಬಿ ಮತ್ತೆ ಗೆಲುವಿನ ಹಾದಿಗೆ ಮರಳಿದರೆ, ಮುಂಬೈ ತಂಡಕ್ಕೆ ಇದು ಸತತ ಮೂರನೇ ಸೋಲಾಗಿದೆ.
ಮೊದಲು ಬ್ಯಾಟಿಂಗ್ ಮಾಡಿದ ಆರ್‌ಸಿಬಿ ತಂಡ ಬಿರುಸಿನ ಆರಂಭ ಪಡೆದುಕೊಂಡಿತು. ಫಿಲ್ ಸಾಲ್ಟ್ ಕೇವಲ 36 ಎಸೆತಗಳಲ್ಲಿ 78 ರನ್ ಬಾರಿಸಿ ಮಿಂಚಿದರು. ಅವರಿಗೆ ಜೊತೆಯಾದ ವಿರಾಟ್ ಕೊಹ್ಲಿ 38 ಎಸೆತಗಳಲ್ಲಿ ಅರ್ಧಶತಕ ಪೂರೈಸಿದರು. ಈ ಜೋಡಿ ಮೊದಲ ವಿಕೆಟ್‌ಗೆ 120 ರನ್‌ಗಳ ಭರ್ಜರಿ ಜೊತೆಯಾಟ ನೀಡಿತು.
ನಂತರ ನಾಯಕ ರಜತ್ ಪಾಟಿದಾರ್ ವೇಗದ ಇನ್ನಿಂಗ್ಸ್ ಆಡಿದರು. ಅವರು ಕೇವಲ 20 ಎಸೆತಗಳಲ್ಲಿ 53 ರನ್ ಸಿಡಿಸಿ ತಂಡದ ಮೊತ್ತವನ್ನು ಮತ್ತಷ್ಟು ಬಲಪಡಿಸಿದರು. ಕೊನೆಯಲ್ಲಿ ಟಿಮ್ ಡೇವಿಡ್ ಅಜೇಯ 34 ರನ್ ಗಳಿಸಿ ಆರ್‌ಸಿಬಿಯನ್ನು 241 ರನ್‌ಗಳ ಭರ್ಜರಿ ಮೊತ್ತಕ್ಕೆ ಕೊಂಡೊಯ್ದರು. ಮುಂಬೈ ಪರ ಶಾರ್ದೂಲ್ ಠಾಕೂರ್, ಹಾರ್ದಿಕ್ ಪಾಂಡ್ಯ, ಮಿಚೆಲ್ ಸ್ಯಾಂಟ್ನರ್ ಹಾಗೂ ಟ್ರೆಂಟ್ ಬೌಲ್ಟ್ ತಲಾ ಒಂದು ವಿಕೆಟ್ ಪಡೆದರೂ, ಆರ್‌ಸಿಬಿ ಬ್ಯಾಟರ್‌ಗಳ ದಾಳಿ ನಿಯಂತ್ರಿಸಲು ವಿಫಲರಾದರು.
ಗುರಿ ಬೆನ್ನಟ್ಟಿದ ಮುಂಬೈ ಇಂಡಿಯನ್ಸ್ ಉತ್ತಮ ಆರಂಭ ಪಡೆದರೂ ಮಧ್ಯದಲ್ಲಿ ಸಂಕಷ್ಟಕ್ಕೆ ಸಿಲುಕಿತು. ರೋಹಿತ್ ಶರ್ಮಾ ಗಾಯಗೊಂಡು ನಿವೃತ್ತರಾಗಿದ್ದು ತಂಡಕ್ಕೆ ದೊಡ್ಡ ಹಿನ್ನಡೆಯಾಯಿತು. ರಯಾನ್ ರಿಕಲ್ಟನ್ 37 ರನ್, ಸೂರ್ಯಕುಮಾರ್ ಯಾದವ್ 33 ರನ್ ಮತ್ತು ಹಾರ್ದಿಕ್ ಪಾಂಡ್ಯ 40 ರನ್ ಗಳಿಸಿ ಹೋರಾಟ ನಡೆಸಿದರು.
ಕೊನೆಯಲ್ಲಿ ಶೆರ್ಫೇನ್ ರುದರ್ಫೋರ್ಡ್ ಅಜೇಯ 71 ರನ್ ಗಳಿಸಿ ಅದ್ಭುತ ಪ್ರದರ್ಶನ ನೀಡಿದರೂ, ತಂಡವನ್ನು ಗೆಲುವಿನ ದಡ ಮುಟ್ಟಿಸಲು ಸಾಧ್ಯವಾಗಲಿಲ್ಲ. ಮುಂಬೈ 222 ರನ್ ಗಳಿಸಿ 18 ರನ್‌ಗಳ ಸೋಲು ಅನುಭವಿಸಿತು. ಆರ್‌ಸಿಬಿ ಪರ ಸುಯಾಶ್ ಶರ್ಮಾ ಎರಡು ವಿಕೆಟ್ ಪಡೆದರೆ, ಕೃನಾಲ್ ಪಾಂಡ್ಯ ಮತ್ತು ರಸಿಕ್ ಸಲಾಂ ತಲಾ ಒಂದು ವಿಕೆಟ್ ಪಡೆದು ತಂಡದ ಗೆಲುವಿಗೆ ಕೈಜೋಡಿಸಿದರು.



















