ಕೋಲಾರ: ಅರಣ್ಯ ಭೂಮಿ ಒತ್ತುವರಿ ವಿಚಾರಕ್ಕೆ ಸಂಬಂಧಿಸಿದಂತೆ ಅರಣ್ಯ ಇಲಾಖೆಗೆ ಭೂಮಿಯನ್ನು ಬಿಟ್ಟುಕೊಡುವಂತೆ ಮೇಲ್ಮನವಿ ಪ್ರಾಧಿಕಾರ ಮತ್ತು ಅರಣ್ಯ ಸಂರಕ್ಷಣಾಧಿಕಾರಿಗಳ ನ್ಯಾಯಾಲಯ ಶುಕ್ರವಾರ ಆದೇಶ ಹೊರಡಿಸಿದೆ. ಆ ಮೂಲಕ ಮಾಜಿ ಸ್ಪೀಕರ್ ಕೆ.ಆರ್.ರಮೇಶ್ ಕುಮಾರ್‌ಗೆ ಹಿನ್ನಡೆಯಾಗಿದೆ. ಜೊತೆಗೆ ಅವರು ಸಲ್ಲಿಸಿದ ಮೇಲ್ಮನವಿಗೆ ಅರ್ಹತೆ ಇಲ್ಲವೆಂದು ವಜಾಗೊಳಿಸಲಾಗಿದೆ.
ಪ್ರಕರಣಕ್ಕೆ ಸಂಬಂಧಿಸಿದಂತೆ ರಮೇಶ್‌ಕುಮಾರ್ ಸಲ್ಲಿಸಿದ ಮೇಲ್ಮನವಿ ಅರ್ಜಿ ವಿಚಾರಣೆ ಮಾಡಿದ ನ್ಯಾಯಾಲಯ, ಅರಣ್ಯ ಇಲಾಖೆಗೆ ಭೂಮಿ ಬಿಟ್ಟುಕೊಡುವಂತೆ ಆದೇಶಿಸಿದೆ. ಈ ಹಿನ್ನೆಲೆಯಲ್ಲಿ ಅರಣ್ಯ ಕಾಯ್ದೆಯ 64(A) ವಿಧಿಯಡಿ ಒತ್ತುವರಿ ತೆರವುಗೊಳಿಸಲು ನ್ಯಾಯಾಲಯ ನಿರ್ದೇಶನ ನೀಡಿದೆ. 2025ರ ಜನವರಿ 15 ಮತ್ತು 16ರಂದು ನಡೆಸಿದ ಜಂಟಿ ಸಮೀಕ್ಷೆಯ ವರದಿ ಆಧರಿಸಿ ಈ ಆದೇಶ ನೀಡಲಾಗಿದೆ.
ಆದೇಶವನ್ನು ಸ್ವೀಕರಿಸಿದ ದಿನಾಂಕದಿಂದ 30 ದಿನಗಳೊಳಗೆ ಅತಿಕ್ರಮಣ ಮಾಡಲಾದ ಭೂಮಿಯನ್ನು ಶಾಂತಿಯುತವಾಗಿ ಅರಣ್ಯ ಇಲಾಖೆಗೆ ಹಸ್ತಾಂತರಿಸಲು ಸೂಚಿಸಲಾಗಿದೆ. ನಿಗದಿತ ಅವಧಿಯಲ್ಲಿ ಆದೇಶ ಪಾಲನೆ ಮಾಡದಿದ್ದಲ್ಲಿ, ಕೋಲಾರದ ಉಪ ಅರಣ್ಯ ಸಂರಕ್ಷಣಾಧಿಕಾರಿಗಳಿಗೆ ಭೂಮಿ ತೆರವುಗೊಳಿಸುವಂತೆ ಸೂಚಿಸಲಾಗಿದೆ.
ಏನಿದು ಪ್ರಕರಣ?
ಕೋಲಾರ ಜಿಲ್ಲೆಯ ಶ್ರೀನಿವಾಸಪುರ ತಾಲೂಕಿನ ಜಿನಗಲಕುಂಟೆ ಗ್ರಾಮದ ಸರ್ವೇ ನಂ 1 ಮತ್ತು 2 ರಲ್ಲಿ 60.23 ಗುಂಟೆ ಒತ್ತುವರಿ ಆರೋಪ ಕೇಳಿಬಂದಿತ್ತು. ಈ ಬಗ್ಗೆ ಸುದೀರ್ಘ ಕಾನೂನು ಹೋರಾಟ ನಡೆದಿತ್ತು. 2011 ರಲ್ಲಿ ರಮೇಶ್ ಕುಮಾರ್ ಸಲ್ಲಿಸಿದ್ದ ಅರ್ಜಿಯನ್ನು ಕನ್ಸರ್ವೇಟರ್ ಕೋರ್ಟ್ ವಜಾಗೊಳಿಸಿ ಉಪ ಅರಣ್ಯ ಸಂರಕ್ಷಣಾಧಿಕಾರಿಯ ಒತ್ತುವರಿ ತೀರ್ಪು ಎತ್ತಿಹಿಡಿದಿತ್ತು.
ಪ್ರಕರಣ ಇತ್ಯರ್ಥಕ್ಕೆ ಫಾರೆಸ್ಟ್ ಕನ್ಸರ್ವೇಟರ್‌ಗೆ ಹೈ ಕೋರ್ಟ್ ಆದೇಶಿಸಿತ್ತು. ಕನ್ಸರ್ವೇಟರ್ ಕೋರ್ಟ್‌ನಲ್ಲಿ ಈ ಬಗ್ಗೆ ರಮೇಶ್ ಕುಮಾರ್ ಹಾಗೂ ಜಿಲ್ಲಾ ಅರಣ್ಯ ಇಲಾಖೆ ಅಧಿಕಾರಿಗಳ, ವಾದಿ, ಪ್ರತಿವಾದಿಗಳ ವಾದ ಪ್ರತಿವಾದ ಆಲಿಸಿದ್ದ ಬೆಂಗಳೂರು ವೃತ್ತದ ಅರಣ್ಯ ಸಂರಕ್ಷಣಾಧಿಕಾರಿ, 30 ದಿನದಲ್ಲಿ ರಮೇಶ್ ಕುಮಾರ್ ಒಡೆತನದ 60.23 ಎಕರೆ ಜಮೀನು ವಾಪಸ್ ನೀಡಲು ಆದೇಶ ಹೊರಡಿಸಿದೆ. ಜಮೀನು ವಾಪಸ್ ನೀಡದೆ ಹೋದಲ್ಲಿ, ಜಿಲ್ಲಾ ಅರಣ್ಯ ಇಲಾಖೆ ಕ್ರಮಕ್ಕೆ ಸೂಚನೆ ನೀಡಲಾಗಿದೆ. 2006 ರಲ್ಲಿ ಬೆಳಕಿಗೆ ಬಂದಿದ್ದ ಅರಣ್ಯ ಜಮೀನು ಒತ್ತುವರಿ ಕೇಸ್ ಬರೋಬ್ಬರಿ 20 ವರ್ಷಗಳ ನಂತರ ಒತ್ತುವರಿ ಆರೋಪದ ಪ್ರಕರಣ ಇತ್ಯರ್ಥಗೊಂಡಿತ್ತು.
ಇದನ್ನೂ ಓದಿ : ಧಾರವಾಡದಲ್ಲಿ ಯೂತ್ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿಯ ಬರ್ಬರ ಹತ್ಯೆ!


















