ಬೆಂಗಳೂರು : ತನ್ನ ವಿಭಿನ್ನ ಶೈಲಿಯ ಫೋನ್‌ಗಳ ಮೂಲಕ ಗ್ರಾಹಕರನ್ನು ಸೆಳೆಯುವ ಮೊಟೊರೊಲಾ ಸಂಸ್ಥೆಯು, ಇದೀಗ ಸ್ಟೈಲಸ್ ಪೆನ್ ಸೌಲಭ್ಯವಿರುವ ತನ್ನ ಜನಪ್ರಿಯ ಸರಣಿಯ ಅಪ್‌ಡೇಟೆಡ್ ಆವೃತ್ತಿ ‘ಮೊಟೊ ಜಿ ಸ್ಟೈಲಸ್ (2026)’ ಅನ್ನು ಅಧಿಕೃತವಾಗಿ ಮಾರುಕಟ್ಟೆಗೆ ಪರಿಚಯಿಸಿದೆ.
2025ರ ಮಾಡೆಲ್‌ಗಿಂತಲೂ ಹೆಚ್ಚಿನ ಸುಧಾರಣೆಗಳೊಂದಿಗೆ ಬಂದಿರುವ ಈ ಫೋನ್, ಗ್ಯಾಜೆಟ್ಸ್ ಲೋಕದಲ್ಲಿ ಹೊಸ ಸಂಚಲನ ಮೂಡಿಸಿದೆ. ಮುಖ್ಯವಾಗಿ ಬರಹಗಾರರು, ಕಲಾವಿದರು ಮತ್ತು ಕಚೇರಿ ಕೆಲಸಗಾರರಿಗೆ ಪೂರಕವಾದ ಹಲವು ಸ್ಮಾರ್ಟ್ ಫೀಚರ್‌ಗಳನ್ನು ಇದು ಒಳಗೊಂಡಿದೆ.
ಈ ಹೊಸ ಸ್ಮಾರ್ಟ್‌ಫೋನ್ 6.7 ಇಂಚಿನ 1.5K pOLED ಸ್ಕ್ರೀನ್ ಹೊಂದಿದ್ದು, 120Hz ರಿಫ್ರೆಶ್ ರೇಟ್ ಬೆಂಬಲಿಸುತ್ತದೆ. ಇದರ ಅತ್ಯಂತ ಆಕರ್ಷಕ ಅಂಶವೆಂದರೆ ಇದರ 5,000 ನಿಟ್ಸ್ ಪೀಕ್ ಬ್ರೈಟ್‌ನೆಸ್. ಅಂದರೆ ಅತಿ ಹೆಚ್ಚಿನ ಬಿಸಿಲಲ್ಲೂ ಪರದೆಯ ಮೇಲಿನ ಅಕ್ಷರಗಳು ಮತ್ತು ಚಿತ್ರಗಳು ಅತ್ಯಂತ ಸ್ಪಷ್ಟವಾಗಿ ಗೋಚರಿಸುತ್ತವೆ. ಭದ್ರತೆಗಾಗಿ ಕಾರ್ನಿಂಗ್ ಗೊರಿಲ್ಲಾ ಗ್ಲಾಸ್ 3 ನೀಡಲಾಗಿದ್ದು, ಮಳೆಯಲ್ಲೂ ಫೋನ್ ಬಳಸಲು ಪೂರಕವಾದ ‘ವಾಟರ್ ಟಚ್’ ತಂತ್ರಜ್ಞಾನ ಹಾಗೂ ಧೂಳು ಮತ್ತು ನೀರಿನಿಂದ ರಕ್ಷಣೆ ನೀಡುವ IP68 ಮತ್ತು IP69 ರೇಟಿಂಗ್‌ಗಳನ್ನು ಈ ಸಾಧನ ಹೊಂದಿದೆ.
ಸ್ಟೈಲಸ್ ಪೆನ್ನಿನ ಹೊಸ ಮ್ಯಾಜಿಕ್
ಹೆಸರೇ ಸೂಚಿಸುವಂತೆ ಈ ಫೋನಿನ ಪ್ರಮುಖ ಆಕರ್ಷಣೆ ಅದರ ಒಳಗಡೆ ಇರುವ ‘ಆಕ್ಟಿವ್ ಸ್ಟೈಲಸ್’. ಇದು ಕೇವಲ ಬರೆಯಲು ಮಾತ್ರವಲ್ಲದೆ, ಒತ್ತಡ ಮತ್ತು ಇಳಿಜಾರು (Tilt and Pressure) ಸಂವೇದನೆಗೆ ಸ್ಪಂದಿಸುತ್ತದೆ. ಅಂದರೆ ನೀವು ಪೆನ್ಸಿಲ್‌ನಲ್ಲಿ ಚಿತ್ರ ಬಿಡಿಸುವಂತೆಯೇ ಇಲ್ಲಿ ಶೇಡಿಂಗ್ ಮತ್ತು ಫೈನ್ ಲೈನ್‌ಗಳನ್ನು ಎಳೆಯಬಹುದು. ಇದರ ಜೊತೆಗೆ ಎಐ (AI) ತಂತ್ರಜ್ಞಾನದ ಸಹಾಯದಿಂದ ನೀವು ಬರೆದ ಗಣಿತದ ಸಮೀಕರಣಗಳನ್ನು ತಕ್ಷಣವೇ ಪರಿಹರಿಸುವ ‘ಹ್ಯಾಂಡ್ ರೈಟಿಂಗ್ ಕ್ಯಾಲ್ಕುಲೇಟರ್’ ಮತ್ತು ನೀವು ಬಿಡಿಸಿದ ಚಿತ್ರಗಳನ್ನು ಸುಂದರ ಚಿತ್ರಗಳನ್ನಾಗಿ ಬದಲಿಸುವ ‘ಸ್ಕೆಚ್ ಟು ಇಮೇಜ್’ ಫೀಚರ್‌ಗಳನ್ನು ನೀಡಲಾಗಿದೆ.
ವೇಗದ ಕಾರ್ಯಕ್ಷಮತೆ ಮತ್ತು ಶಕ್ತಿಶಾಲಿ ಬ್ಯಾಟರಿ
ಫೋನಿನ ಒಳಗಡೆ ಕ್ವಾಲ್ಕಾಮ್ ಸ್ನಾಪ್‌ಡ್ರಾಗನ್ 6 ಜೆನ್ 3 (Snapdragon 6 Gen 3) ಪ್ರೊಸೆಸರ್ ಅಳವಡಿಸಲಾಗಿದ್ದು, 8GB RAM ಮತ್ತು 128GB ಸಂಗ್ರಹಣಾ ಸಾಮರ್ಥ್ಯವಿದೆ. ರಾಮ್ ಬೂಸ್ಟ್ ಫೀಚರ್ ಮೂಲಕ ಇದನ್ನು 24GB ವರೆಗೆ ಹೆಚ್ಚಿಸಬಹುದು. ಆಂಡ್ರಾಯ್ಡ್ 16 ಆಧಾರಿತ ‘ಹೆಲೋ ಯುಎಕ್ಸ್’ (Hello UX) ಮೂಲಕ ಇದು ಕಾರ್ಯನಿರ್ವಹಿಸುತ್ತದೆ. 5,200mAh ಸಾಮರ್ಥ್ಯದ ಬ್ಯಾಟರಿ ಹೊಂದಿರುವ ಈ ಫೋನ್‌ಗೆ 68W ವೈರ್ಡ್ ಮತ್ತು 15W ವೈರ್‌ಲೆಸ್ ಚಾರ್ಜಿಂಗ್ ಸೌಲಭ್ಯವಿದೆ, ಇದು ಬಳಕೆದಾರರಿಗೆ ಇಡೀ ದಿನದ ಬ್ಯಾಟರಿ ಬ್ಯಾಕಪ್ ಭರವಸೆ ನೀಡುತ್ತದೆ.
ಬೆಲೆ ಮತ್ತು ಲಭ್ಯತೆಯ ಮಾಹಿತಿ
ಮೊಟೊ ಜಿ ಸ್ಟೈಲಸ್ (2026) ಪ್ರಸ್ತುತ ಅಮೆರಿಕ ಮತ್ತು ಕೆನಡಾ ಮಾರುಕಟ್ಟೆಗಳಲ್ಲಿ ಬಿಡುಗಡೆಯಾಗಿದೆ. ಇದರ ಬೆಲೆ 499 ಡಾಲರ್ (ಅಂದರೆ ಭಾರತೀಯ ರೂಪಾಯಿಗಳಲ್ಲಿ ಸುಮಾರು 46,200 ರೂ ಎಂದು ನಿಗದಿಪಡಿಸಲಾಗಿದೆ. ಇದು ‘ಕೋಲ್ ಸ್ಮೋಕ್’ ಮತ್ತು ‘ಲಾವೆಂಡರ್ ಮಿಸ್ಟ್’ ಎಂಬ ಆಕರ್ಷಕ ಬಣ್ಣಗಳಲ್ಲಿ ಲಭ್ಯವಿದ್ದು, ಏಪ್ರಿಲ್ 16 ರಿಂದ ಜಾಗತಿಕವಾಗಿ ಮಾರಾಟ ಆರಂಭವಾಗಲಿದೆ. ಭಾರತದ ಮಾರುಕಟ್ಟೆಗೆ ಇದು ಯಾವಾಗ ಬರಲಿದೆ ಎಂಬುದರ ಬಗ್ಗೆ ಸದ್ಯದಲ್ಲೇ ಮಾಹಿತಿ ಲಭ್ಯವಾಗುವ ನಿರೀಕ್ಷೆಯಿದೆ.
ಇದನ್ನೂ ಓದಿ ; ಟಾಟಾ ಮೋಟಾರ್ಸ್ ಹೊಸ ಸಾಹಸ.. ದೇಶದ ಮೊದಲ ಎಲೆಕ್ಟ್ರಿಕ್ ಪಿಕಪ್ ‘ಇಂಟ್ರಾ EV’ ಬಿಡುಗಡೆ!



















