ಟೆಹ್ರಾನ್/ಜೆರುಸಲೇಂ : ಅಮೆರಿಕ-ಇರಾನ್ ನಡುವೆ ಬುಧವಾರ ಏರ್ಪಟ್ಟಿದ್ದ ಕದನ ವಿರಾಮವು ಘೋಷಣೆಯಾದ ಕೆಲವೇ ಗಂಟೆಗಳಲ್ಲಿ ಹಳಿ ತಪ್ಪಿದೆ. ಲೆಬನಾನ್ ಮೇಲೆ ಇಸ್ರೇಲ್ ನಡೆಸಿದ ಭೀಕರ ಕ್ಷಿಪಣಿ ದಾಳಿ ಮತ್ತು ಅದಕ್ಕೆ ಪ್ರತಿಯಾಗಿ ಇರಾನ್ ನಡೆಸಿದ ಪ್ರತಿದಾಳಿಯಿಂದಾಗಿ ಪಶ್ಚಿಮ ಏಷ್ಯಾದಲ್ಲಿ ಮತ್ತೆ ಯುದ್ಧದ ಕಾರ್ಮೋಡ ಕವಿದಿದೆ. ಈ ಬೆಳವಣಿಗೆಯು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಪಾಲಿಗೆ ನುಂಗಲಾರದ ತುತ್ತಾಗಿ ಪರಿಣಮಿಸಿದ್ದು, ಜಾಗತಿಕ ರಾಜತಾಂತ್ರಿಕ ವಲಯದಲ್ಲಿ ತೀವ್ರ ಆತಂಕಕ್ಕೂ ಕಾರಣವಾಗಿದೆ.
ಕದನ ವಿರಾಮ ಒಪ್ಪಂದದ ಲೆಬನಾನ್‌ಗೆ ಅನ್ವಯವಾಗುವುದಿಲ್ಲ ಎಂದು ಆರಂಭದಲ್ಲೇ ಹೇಳಿದ್ದ ಇಸ್ರೇಲ್, ಬುಧವಾರ ಲೆಬನಾನ್ ಮೇಲೆ ಅನಿರೀಕ್ಷಿತವಾಗಿ 100ಕ್ಕೂ ಹೆಚ್ಚು ಕ್ಷಿಪಣಿಗಳ ಸುರಿಮಳೆಗೈದಿದೆ. ಈ ಭೀಕರ ದಾಳಿಯಲ್ಲಿ ಸುಮಾರು 254 ಮಂದಿ ಸಾವನ್ನಪ್ಪಿದ್ದಾರೆ ಎಂದು ವರದಿಯಾಗಿದೆ.
ಅಮೆರಿಕ ಮತ್ತು ಇರಾನ್ ನಡುವೆ ಕದನ ವಿರಾಮ ಏರ್ಪಟ್ಟ ಕೆಲವೇ ಗಂಟೆಗಳಲ್ಲಿ ಈ ದಾಳಿ ನಡೆದಿರುವುದು ಶಾಂತಿ ಮಾತುಕತೆಗೆ ದೊಡ್ಡ ಹಿನ್ನಡೆ ತಂದಿದೆ. ಆದರೆ, ಲೆಬನಾನ್ ಮೇಲಿನ ದಾಳಿಯನ್ನು ಟ್ರಂಪ್ ಅವರು “ಪ್ರತ್ಯೇಕ ಸಂಘರ್ಷ” ಎಂದು ಬಣ್ಣಿಸಿದ್ದಾರೆ. ಹೆಜ್ಬುಲ್ಲಾ ಸಂಘಟನೆಯ ಕಾರಣಕ್ಕೆ ಲೆಬನಾನ್ ಈ ಒಪ್ಪಂದದ ವ್ಯಾಪ್ತಿಗೆ ಬರುವುದಿಲ್ಲ ಎಂಬುದು ಅಮೆರಿಕ ಮತ್ತು ಇಸ್ರೇಲ್ ನಿಲುವಾಗಿದೆ.
ಇರಾನ್ ಪ್ರತಿದಾಳಿಯಿಂದ ಹೊಸ ತೈಲ ಸಂಕಟ
ಇಸ್ರೇಲ್ ಕ್ರಮಕ್ಕೆ ಕೆರಳಿದ ಇರಾನ್, ಲೆಬನಾನ್ ಮೇಲಿನ ದಾಳಿಗೆ ಪ್ರತಿಯಾಗಿ ಇಸ್ರೇಲ್ ಮತ್ತು ಇತರ ಗಲ್ಫ್ ರಾಷ್ಟ್ರಗಳ ಮೇಲೆ ಕ್ಷಿಪಣಿ ದಾಳಿ ಆರಂಭಿಸಿದೆ. ಅಷ್ಟೇ ಅಲ್ಲದೆ, ಜಾಗತಿಕ ತೈಲ ಮಾರುಕಟ್ಟೆಯ ಜೀವನಾಡಿಯಾಗಿರುವ ‘ಹೊರ್ಮುಜ್ ಜಲಸಂಧಿ’ಯನ್ನು ಇರಾನ್ ಮತ್ತೆ ಬಂದ್ ಮಾಡಿದೆ. ವಿಶ್ವದ ಶೇ.20ರಷ್ಟು ತೈಲ ಸಾರಿಗೆ ಈ ಮಾರ್ಗದ ಮೂಲಕವೇ ನಡೆಯುವುದರಿಂದ, ಈ ದಿಗ್ಬಂಧನವು ಜಾಗತಿಕ ಆರ್ಥಿಕತೆಯ ಮೇಲೆ ಗಂಭೀರ ಪರಿಣಾಮ ಬೀರುವ ಭೀತಿ ಎದುರಾಗಿದೆ. ಕದನ ವಿರಾಮದ ಘೋಷಣೆಯ ನಂತರ 100 ಡಾಲರ್ ಆಸುಪಾಸಿಗೆ ಕುಸಿದಿದ್ದ ಕಚ್ಚಾ ತೈಲ ಬೆಲೆ ಈಗ ಮತ್ತೆ ಏರಿಕೆಯಾಗುವ ಲಕ್ಷಣಗಳು ಕಂಡುಬರುತ್ತಿವೆ.
ಟ್ರಂಪ್ ಮುಂದಿರುವ ಮೂರು ಕಠಿಣ ದಾರಿಗಳು
ಈ ಬಿಕ್ಕಟ್ಟನ್ನು ಶಮನಗೊಳಿಸಲು ಅಧ್ಯಕ್ಷ ಟ್ರಂಪ್ ಮುಂದೆ ಈಗ ಮೂರು ಆಯ್ಕೆಗಳಿವೆ. ಮೊದಲನೆಯದಾಗಿ, ಕದನ ವಿರಾಮವನ್ನು ಬದಿಗಿಟ್ಟು ಮತ್ತೆ ಪೂರ್ಣ ಪ್ರಮಾಣದ ಯುದ್ಧಕ್ಕೆ ಇಳಿಯುವುದು. ಆದರೆ, ಅಮೆರಿಕದ ಕ್ಷಿಪಣಿ ದಾಸ್ತಾನು ಕುಸಿಯುತ್ತಿರುವುದು ಮತ್ತು ಮುಂಬರುವ ಮಧ್ಯಂತರ ಚುನಾವಣೆಗಳು ಟ್ರಂಪ್‌ಗೆ ಈ ನಿರ್ಧಾರ ತೆಗೆದುಕೊಳ್ಳಲು ಅಡ್ಡಿಯಾಗಿವೆ.
ಎರಡನೇ ಆಯ್ಕೆಯಾಗಿ, ರಾಜತಾಂತ್ರಿಕತೆಗೆ ಮನ್ನಣೆ ನೀಡುವುದು. ಉಪಾಧ್ಯಕ್ಷ ಜೆ.ಡಿ. ವ್ಯಾನ್ಸ್ ಅವರು ಪಾಕಿಸ್ತಾನದ ಇಸ್ಲಾಮಾಬಾದ್‌ನಲ್ಲಿ ಇರಾನ್ ಪ್ರತಿನಿಧಿಗಳೊಂದಿಗೆ ಮಾತುಕತೆ ನಡೆಸಲು ಸಿದ್ಧರಾಗಿದ್ದಾರೆ. ಇರಾನ್ ನಾಯಕರು ವ್ಯಾನ್ಸ್ ಅವರ ಮೇಲೆ ಹೆಚ್ಚಿನ ವಿಶ್ವಾಸ ಹೊಂದಿರುವುದು ಈ ಆಯ್ಕೆಗೆ ಪುಷ್ಟಿ ನೀಡಿದೆ. ಆದರೆ, ಇಸ್ರೇಲ್ ತನ್ನ ದಾಳಿಯನ್ನು ಮುಂದುವರಿಸಿದರೆ ಈ ಮಾತುಕತೆ ಯಶಸ್ವಿಯಾಗುವುದು ಕಷ್ಟ.
ಇನ್ನು ಮೂರನೇ ಮತ್ತು ಪ್ರಮುಖ ಆಯ್ಕೆಯೆಂದರೆ, ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಅವರ ಮೇಲೆ ಒತ್ತಡ ಹೇರಿ ದಾಳಿಯನ್ನು ನಿಲ್ಲಿಸುವುದು. ಕಳೆದ ವರ್ಷ ಜೂನ್‌ನಲ್ಲಿ ನೆತನ್ಯಾಹು ಕದನ ವಿರಾಮ ಉಲ್ಲಂಘಿಸಿದಾಗ ಟ್ರಂಪ್ ಕಠಿಣ ಸಂದೇಶ ರವಾನಿಸಿ ದಾಳಿ ತಡೆದಿದ್ದರು. ಅದೇ ಮಾದರಿಯನ್ನು ಈಗಲೂ ಅನುಸರಿಸಬೇಕಾದ ಅನಿವಾರ್ಯತೆ ಟ್ರಂಪ್‌ಗಿದೆ.
ಶಾಂತಿ ಮಾತುಕತೆಗೆ ‘ಲೆಬನಾನ್’ ಅಡ್ಡಿ
ಇರಾನ್ ಮತ್ತು ಅಮೆರಿಕ ನಡುವಿನ ಒಪ್ಪಂದದಲ್ಲಿ ಲೆಬನಾನ್ ವಿಷಯವೇ ದೊಡ್ಡ ವಿವಾದದ ಕೇಂದ್ರಬಿಂದುವಾಗಿದೆ. ಯಾವುದೇ ಒಪ್ಪಂದವು ಲೆಬನಾನ್ ಅನ್ನು ಒಳಗೊಂಡಿರಬೇಕು ಎಂದು ಇರಾನ್ ಪಟ್ಟು ಹಿಡಿದಿದ್ದರೆ, ಇಸ್ರೇಲ್ ಮಾತ್ರ ಹೆಜ್ಬುಲ್ಲಾವನ್ನು ಸಂಪೂರ್ಣವಾಗಿ ನಿರ್ನಾಮ ಮಾಡುವವರೆಗೂ ದಾಳಿ ನಿಲ್ಲಿಸುವುದಿಲ್ಲ ಎಂದು ಪಣ ತೊಟ್ಟಿದೆ. ಈ ಭಿನ್ನಾಭಿಪ್ರಾಯಗಳ ನಡುವೆ ಪಶ್ಚಿಮ ಏಷ್ಯಾದಲ್ಲಿ ಶಾಂತಿ ನೆಲೆಸುತ್ತದೆಯೇ ಅಥವಾ ಮತ್ತೊಂದು ಮಹಾಯುದ್ಧಕ್ಕೆ ನಾಂದಿಯಾಗಲಿದೆಯೇ ಎಂಬುದು ಮುಂದಿನ ದಿನಗಳಲ್ಲಿ ನಿರ್ಧಾರವಾಗಲಿದೆ
ಇದನ್ನೂ ಓದಿ : CSKಗೆ ಮತ್ತೊಂದು ಆಘಾತ : ಡೆಲ್ಲಿ ವಿರುದ್ಧದ ಪಂದ್ಯದಿಂದಲೂ ಹೊರಗುಳಿಯಲಿರುವ ‘ಮಹಿ’!



















