ಚಿಕ್ಕಮಗಳೂರು : ಮಡಿಕೇರಿಯ ತಡಿಯಂಡಮೋಳ್ ಪರ್ವತ ಚಾರಣದ ವೇಳೆ ಕೇರಳದ ಯುವತಿ ಶರಣ್ಯ ನಾಪತ್ತೆ ಪ್ರಕರಣ ಸುಖಾಂತ್ಯ ಕಂಡಿದೆ. ನಾಲ್ಕು ದಿನಗಳ ಬಳಿಕ ಶರಣ್ಯ ಪತ್ತೆಯಾಗಿ ಸುರಕ್ಷಿತವಾಗಿ ಕುಟುಂಬ ಸೇರಿಕೊಂಡಿದ್ದಾಳೆ. ಈ ಪ್ರಕರಣದ ಚರ್ಚೆ ನಡೆಯುತ್ತಿರುವಾಗಲೇ ಇದೀಗ ಚಿಕ್ಕಮಗಳೂರಿನಲ್ಲಿ ಮತ್ತೋರ್ವ ಯುವತಿ ನಾಪತ್ತೆ ಪ್ರಕರಣ ವರದಿಯಾಗಿದೆ.
ಚಿಕ್ಕಮಗಳೂರಿನ ಚಂದ್ರದ್ರೋಣ ಪರ್ವತ ಶ್ರೇಣಿಯಲ್ಲಿ ಯುವತಿ ನಿಗೂಢವಾಗಿ ನಾಪತ್ತೆಯಾಗಿದ್ದಾಳೆ. ಈಕೆ ಕೂಡ ಕೇರಳ ಮೂಲದವಳು. ಕುಟುಂಬದ ಜೊತೆ ಪ್ರವಾಸಕ್ಕೆ ಬಂದ ಯುವತಿ ನಾಪತ್ತೆಯಾಗಿದ್ದು, ಹುಡುಕಾಟ ತೀವ್ರಗೊಂಡಿದೆ.
ಕೇರಳ ರಾಜ್ಯದ ಪಾಲಕ್ಕಾಡ್ ಮೂಲದ ಯುವತಿ ಪೋಷಕರೊಂದಿಗೆ ಸುಮಾರು 40 ಜನರ ತಂಡದೊಂದಿಗೆ ಪ್ರವಾಸಕ್ಕೆ ಬಂದಿದ್ದಳು. ಈ ವೇಳೆ ಚಂದ್ರದ್ರೋಣ ಪರ್ವತ ಸರಣಿಯ ಮಾಣಿಕ್ಯಧಾರಾ ಸಮೀಪದಲ್ಲಿ ಕಾಣೆಯಾಗಿರುವುದು ತಿಳಿದುಬಂದಿದೆ. ಯುವತಿ ಕಾಣೆಯಾಗುತ್ತಿದ್ದಂತೆಯೇ ಸ್ಥಳೀಯರು ಹಾಗೂ ಪ್ರವಾಸಿಗರು ಹುಡುಕಾಟ ಆರಂಭಿಸಿದರೂ ಯಾವುದೇ ಸುಳಿವು ಸಿಗಲಿಲ್ಲ.
ರಾತ್ರಿ ಪೂರ್ತಿ ಅಗ್ನಿಶಾಮಕ ದಳ, ಅರಣ್ಯ ಇಲಾಖೆ ಹಾಗೂ ಪೊಲೀಸ್ ಸಿಬ್ಬಂದಿ ಸಂಯುಕ್ತವಾಗಿ ಶೋಧ ಕಾರ್ಯ ನಡೆಸಿದರು. ಇಂದೂ ಡ್ರೋನ್ ಸಹಾಯದಿಂದ ಹುಡುಕಾಟ ಮುಂದುವರಿದಿದ್ದು, ಸಂಪೂರ್ಣ ಹುಲ್ಲುಗಾವಲು ಹಾಗೂ ಇಳಿಜಾರು ಪ್ರದೇಶಗಳಿಂದ ಕೂಡಿರುವ ಈ ಪ್ರದೇಶದಲ್ಲಿ ಕಾರ್ಯಾಚರಣೆ ಸವಾಲಿನದ್ದಾಗಿದೆ. ಈ ಘಟನೆ ಚಿಕ್ಕಮಗಳೂರು ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಯುವತಿ ನಾಪತ್ತೆಯಾಗಿರುವ ಹಿನ್ನೆಲೆ ಹಲವು ಅನುಮಾನಗಳು ವ್ಯಕ್ತವಾಗುತ್ತಿವೆ.
ಇದನ್ನೂ ಓದಿ : ಬೆಂಗಳೂರಲ್ಲಿ ಭೀಕರ ಅಪಘಾತ.. ಸಿಗ್ನಲಲ್ಲಿ ನಿಂತಿದ್ದ ಲಾರಿಗೆ ಹಿಂಬದಿಯಿಂದ ಗುದ್ದಿದ ಮತ್ತೊಂದು ಲಾರಿ.. ಚಾಲಕ ಸಾವು!



















