ಕರಾಚಿ : ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಕೇವಲ ಭಾರತದ ಮಟ್ಟಿಗೆ ಮಾತ್ರವಲ್ಲದೆ ಇಡೀ ಜಗತ್ತಿನ ಅತಿ ದೊಡ್ಡ ಮತ್ತು ಶ್ರೀಮಂತ ಕ್ರಿಕೆಟ್ ಟೂರ್ನಿಯಾಗಿ ಬೆಳೆದು ನಿಂತಿದೆ. ಆದರೆ, ಪಾಕಿಸ್ತಾನ ಕ್ರಿಕೆಟ್ ಮಂಡಳಿಯ (ಪಿಸಿಬಿ) ನೂತನ ಅಧ್ಯಕ್ಷ ಮೊಹ್ಸಿನ್ ನಖ್ವಿ ಅವರು ನೀಡಿರುವ ಹೇಳಿಕೆಯೊಂದು ಈಗ ವಿಶ್ವಾದ್ಯಂತ ಕ್ರಿಕೆಟ್ ವಲಯದಲ್ಲಿ ಹೊಸ ಚರ್ಚೆಗೆ ನಾಂದಿ ಹಾಡಿದೆ.
ಪಾಕಿಸ್ತಾನ್ ಸೂಪರ್ ಲೀಗ್ (ಪಿಎಸ್‌ಎಲ್) ಶೀಘ್ರದಲ್ಲೇ ಭಾರತದ ಐಪಿಎಲ್ ಟೂರ್ನಿಯನ್ನು ಹಿಂದಿಕ್ಕಿ ವಿಶ್ವದ ಅತ್ಯಂತ ಜನಪ್ರಿಯ ಹಾಗೂ ನಂಬರ್ ಒನ್ ಟಿ20 ಲೀಗ್ ಆಗಿ ಹೊರಹೊಮ್ಮಲಿದೆ ಎಂದು ನಖ್ವಿ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಭಾನುವಾರ ಲಾಹೋರ್‌ನ ಗದ್ದಾಫಿ ಕ್ರೀಡಾಂಗಣದಲ್ಲಿ ನಡೆದ ಆಡಳಿತ ಮಂಡಳಿಯ 82ನೇ ಸಭೆಯಲ್ಲಿ ಮಾತನಾಡಿದ ಅವರು, ಈ ಲೀಗ್‌ನ ವಾಣಿಜ್ಯ ಮೌಲ್ಯ ಮತ್ತು ಸ್ಪರ್ಧಾತ್ಮಕ ಗುಣಮಟ್ಟದ ಬಗ್ಗೆ ಅತೀವ ನಂಬಿಕೆ ವ್ಯಕ್ತಪಡಿಸಿದ್ದಾರೆ. ಹೂಡಿಕೆಗೆ ಪಿಎಸ್‌ಎಲ್ ಈಗ ಅತ್ಯುತ್ತಮ ಮಾರುಕಟ್ಟೆಯಾಗಿ ಮಾರ್ಪಟ್ಟಿದೆ ಎಂದಿರುವ ಅವರು, ಈ ಟೂರ್ನಿಯು ಜಾಗತಿಕ ಮಟ್ಟದಲ್ಲಿ ಅಗ್ರಸ್ಥಾನಕ್ಕೇರುವ ದಿನಗಳು ದೂರವಿಲ್ಲ ಎಂದು ಭವಿಷ್ಯ ನುಡಿದಿದ್ದಾರೆ.
ಆದರೆ, ನಖ್ವಿ ಅವರ ಈ ಮಹತ್ವಾಕಾಂಕ್ಷೆಯ ಹೇಳಿಕೆಗಳು ಮತ್ತು ಮಾರುಕಟ್ಟೆಯ ನೈಜ ಅಂಕಿ-ಅಂಶಗಳ ನಡುವೆ ಅಜಗಜಾಂತರ.
ಆರ್ಥಿಕ ಮೌಲ್ಯಮಾಪನದ ದೃಷ್ಟಿಯಿಂದ ನೋಡಿದರೆ, ಈ ಎರಡು ದಕ್ಷಿಣ ಏಷ್ಯಾದ ನೆರೆಹೊರೆಯ ರಾಷ್ಟ್ರಗಳ ಲೀಗ್‌ಗಳ ನಡುವೆ ಬೃಹತ್ ಕಂದಕವೇ ನಿರ್ಮಾಣವಾಗಿದೆ. ಐಪಿಎಲ್ ಪ್ರಸ್ತುತ ಜಾಗತಿಕ ಮಟ್ಟದಲ್ಲಿ ಬೃಹದಾಕಾರವಾಗಿ ಬೆಳೆದಿದ್ದು, ಟೂರ್ನಿಯ ಒಟ್ಟು ಮೌಲ್ಯವು ಸರಿಸುಮಾರು 18.5 ಬಿಲಿಯನ್ ಡಾಲರ್‌ಗಳಷ್ಟಿದೆ. ಇದಕ್ಕೆ ತದ್ವಿರುದ್ಧವಾಗಿ, ಪಾಕಿಸ್ತಾನ್ ಸೂಪರ್ ಲೀಗ್‌ನ ಎಲ್ಲಾ ಎಂಟು ಫ್ರಾಂಚೈಸಿಗಳ ಒಟ್ಟು ಮೌಲ್ಯವು ಕೇವಲ 260 ಮಿಲಿಯನ್ ಡಾಲರ್‌ಗಳ ಆಸುಪಾಸಿನಲ್ಲಿದೆ.
ಫ್ರಾಂಚೈಸಿಗಳ ಮಾರಾಟದ ಅಂಕಿ-ಅಂಶಗಳನ್ನು ಗಮನಿಸಿದರೆ ಈ ಅಂತರ ಮತ್ತಷ್ಟು ಸ್ಪಷ್ಟವಾಗುತ್ತದೆ. ಮಾರ್ಚ್ 2026ರಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ತಂಡವು 1..78 ಬಿಲಿಯನ್ ಡಾಲರ್‌ಗಳಿಗೆ ಮಾರಾಟವಾಗುವ ಮೂಲಕ ಇತಿಹಾಸದಲ್ಲೇ ಅತ್ಯಂತ ಮೌಲ್ಯಯುತ ಕ್ರಿಕೆಟ್ ಫ್ರಾಂಚೈಸಿ ಎಂಬ ಹೆಗ್ಗಳಿಕೆಗೆ ಪಾತ್ರವಾಯಿತು. ಕೇವಲ ಒಂದು ಐಪಿಎಲ್ ತಂಡದ ಮೌಲ್ಯವೇ ಇಡೀ ಪಿಎಸ್‌ಎಲ್ ಟೂರ್ನಿಯ ಮೌಲ್ಯಕ್ಕಿಂತ ಸುಮಾರು ಏಳು ಪಟ್ಟು ಹೆಚ್ಚಾಗಿದೆ. ಇನ್ನು, ಪಿಎಸ್‌ಎಲ್‌ನ ಹೊಸ ತಂಡಗಳಾದ ಹೈದರಾಬಾದ್ ಮತ್ತು ಸಿಯಾಲ್ಕೋಟ್ ಈ ವರ್ಷದ ಜನವರಿಯಲ್ಲಿ ತಲಾ 6.25 ಮಿಲಿಯನ್ ಮತ್ತು 6.61 ಮಿಲಿಯನ್ ಡಾಲರ್‌ಗಳಿಗೆ ಬಿಕರಿಯಾಗಿವೆ. ಆದರೆ, ೨೦೨೧ರಲ್ಲಿ ಐಪಿಎಲ್‌ನ ಹೊಸ ತಂಡಗಳು ೭೦೦ ಮಿಲಿಯನ್ ಡಾಲರ್‌ಗೂ ಅಧಿಕ ಮೊತ್ತಕ್ಕೆ ಮಾರಾಟವಾಗಿದ್ದವು ಎಂಬುದನ್ನು ಇಲ್ಲಿ ಸ್ಮರಿಸಬಹುದು.
ಪ್ರಸಾರ ಹಕ್ಕುಗಳ ವಿಷಯದಲ್ಲಿ ಐಪಿಎಲ್‌ನ ಪಾರುಪತ್ಯವಂತೂ ಮುಗಿಲೆತ್ತರದಲ್ಲಿದೆ. 2023-2027ರ ಅವಧಿಯ ಐಪಿಎಲ್ ಮಾಧ್ಯಮ ಹಕ್ಕುಗಳು ಬರೋಬ್ಬರಿ 6.8 ಬಿಲಿಯನ್ ಡಾಲರ್‌ಗಳಿಗೆ ಮಾರಾಟವಾಗಿವೆ. ಇದರ ಮೂಲಕ ಪ್ರತಿ ಪಂದ್ಯದ ಆದಾಯದ ಲೆಕ್ಕಾಚಾರದಲ್ಲಿ ಐಪಿಎಲ್, ಅಮೆರಿಕದ ಎನ್‌ಎಫ್‌ಎಲ್ (ನ್ಯಾಷನಲ್ ಫುಟ್ಬಾಲ್ ಲೀಗ್) ನಂತರದ ಜಗತ್ತಿನ ಎರಡನೇ ಅತಿ ಶ್ರೀಮಂತ ಕ್ರೀಡಾ ಟೂರ್ನಿಯಾಗಿ ಹೊರಹೊಮ್ಮಿದೆ. ಐಪಿಎಲ್‌ನ ಒಂದೇ ಒಂದು ಪಂದ್ಯವು ಪ್ರಸಾರ ಹಕ್ಕುಗಳಿಂದ ಸರಿಸುಮಾರು 13.4 ಮಿಲಿಯನ್ ಡಾಲರ್ ಆದಾಯವನ್ನು ತಂದುಕೊಡುತ್ತದೆ. ಇತ್ತೀಚೆಗಷ್ಟೇ ಪಿಎಸ್‌ಎಲ್, 2026-2029ರ ಅವಧಿಗಾಗಿ ದೇಶೀಯ ಪ್ರಸಾರ ಹಕ್ಕುಗಳನ್ನು ವಾಲಿ ಟೆಕ್ನಾಲಜೀಸ್ ಸಂಸ್ಥೆಗೆ ಸುಮಾರು 93 ಮಿಲಿಯನ್ ಡಾಲರ್‌ಗಳಿಗೆ ಮಾರಾಟ ಮಾಡಿದೆ. ಸರಳವಾಗಿ ಹೇಳಬೇಕೆಂದರೆ, ಪಿಎಸ್‌ಎಲ್‌ನ ಇಡೀ ಸೀಸನ್‌ನಿಂದ ಬರುವ ಮಾಧ್ಯಮ ಆದಾಯಕ್ಕಿಂತ ಐಪಿಎಲ್‌ನ ಒಂದೇ ಒಂದು ಪಂದ್ಯದ ಆದಾಯವೇ ಅಧಿಕವಾಗಿದೆ.
ಪಾಕಿಸ್ತಾನದ ಆರ್ಥಿಕ ದುಸ್ಥಿತಿ
ಪಾಕಿಸ್ತಾನದ ಆಂತರಿಕ ಆರ್ಥಿಕತೆಯ ದುಸ್ಥಿತಿ ಕೂಡ ಪಿಎಸ್‌ಎಲ್ ಮೇಲೆ ನೇರ ಪರಿಣಾಮ ಬೀರುತ್ತಿದೆ. ಭದ್ರತಾ ಕಾರಣಗಳು ಮತ್ತು ದೇಶದಲ್ಲಿ ಎದುರಾಗಿರುವ ಇಂಧನ ಬಿಕ್ಕಟ್ಟಿನ ಹಿನ್ನೆಲೆಯಲ್ಲಿ 2026ರ ಟೂರ್ನಿಯನ್ನು ಕೇವಲ ಲಾಹೋರ್ ಮತ್ತು ಕರಾಚಿ ಎಂಬ ಎರಡು ಕ್ರೀಡಾಂಗಣಗಳಿಗೆ ಮಾತ್ರ ಸೀಮಿತಗೊಳಿಸುವ ಅನಿವಾರ್ಯತೆ ಪಿಸಿಬಿಗೆ ಎದುರಾಗಿತ್ತು. ಪಾಕಿಸ್ತಾನದ ಮಾಜಿ ಫ್ರಾಂಚೈಸಿ ಮಾಲೀಕರು ಮತ್ತು ವಿಮರ್ಶಕರು ಕೂಡ ನಖ್ವಿ ಅವರ ಅತಿಯಾದ ಭರವಸೆಯನ್ನು ಪ್ರಶ್ನಿಸಿದ್ದಾರೆ.
ಇದನ್ನೂ ಓದಿ : ತೋಟಗಾರಿಕಾ ಬೆಳೆಗಳ ಸಂಶೋಧನಾ ಸಂಸ್ಥೆಯಲ್ಲಿ ನೇಮಕಾತಿ.. ಸಂದರ್ಶನದ ದಿನಾಂಕ ಇಲ್ಲಿದೆ


















