ಸಿಡ್ನಿ | ಆಸ್ಟ್ರೇಲಿಯಾ ಕ್ರಿಕೆಟ್ ತಂಡದ ಲೆಜೆಂಡರಿ ಓಪನರ್ ಡೇವಿಡ್ ವಾರ್ನರ್ ಅವರನ್ನು ಆಸ್ಟ್ರೇಲಿಯನ್ ಪೊಲೀಸರು ಬಂಧಿಸಿದ್ದಾರೆ. ಸಿಡ್ನಿಯಲ್ಲಿ ಮದ್ಯಪಾನ ಮಾಡಿ ವಾಹನ ಚಲಾಯಿಸಿದ ಆರೋಪದ ಮೇಲೆ ವಾರ್ನರ್ ಅವರನ್ನು ಅರೆಸ್ಟ್ ಮಾಡಲಾಗಿದೆ. ಪ್ರಸ್ತುತ ಪಾಕಿಸ್ತಾನ ಸೂಪರ್ ಲೀಗ್ (PSL 2026) ನಡೆಯುತ್ತಿದ್ದು, ಅದರ ನಡುವೆಯೇ ಈ ಘಟನೆ ಸಂಭವಿಸಿದೆ.
ಪಾಕಿಸ್ತಾನ್ ಸೂಪರ್ ಲೀಗ್ ನಡುವೆ ತವರಿಗೆ ತೆರಳಿದ್ದ ಡೇವಿಡ್ ವಾರ್ನರ್, ಏಪ್ರಿಲ್ 7ರಂದು ಸಿಡ್ನಿಯ ಮರೂಬ್ರಾದಲ್ಲಿ ವೇಗದಲ್ಲಿ ವಾಹನ ಚಲಾಯಿಸಿದ್ದರು. ಇದನ್ನು ಗಮನಿಸಿದ ಪೋಲೀಸರು ಇವರನ್ನು ತಪಾಸಣೆಗಾಗಿ ತಡೆದಿದ್ದರು. ಈ ವೇಳೆ ಡೇವಿಡ್ ವಾರ್ನರ್ ಕುಡಿದು ಗಾಡಿ ಓಡಿಸುತ್ತಿರುವುದು ಗೊತ್ತಾಗಿದೆ.
ತಕ್ಷಣವೇ ವಾರ್ನರ್ ಅವರನ್ನು ವಶಕ್ಕೆ ಪಡೆದ ಪೊಲೀಸರು ಅವರನ್ನು ಪರೀಕ್ಷೆಗೆ ಒಳಪಡಿಸಿದ್ದಾರೆ. ಈ ವೇಳೆ ಅವರ ರಕ್ತದಲ್ಲಿನ ಮದ್ಯದ ಪ್ರಮಾಣ 0.104 ಇರುವುದು ಕಂಡುಬಂದಿದೆ. ಇದು ಆಸ್ಟ್ರೇಲಿಯಾದ ಕಾನೂನುಬದ್ಧ ಮಿತಿಗಿಂತ (0.05) ಎರಡು ಪಟ್ಟು ಹೆಚ್ಚು. ಹೀಗಾಗಿ ಅವರನ್ನು ಕೂಡಲೇ ಬಂಧಿಸಲಾಗಿತ್ತು.
ಇತ್ತ ಮದ್ಯಪಾನ ಮಾಡಿ ಬಂಧನಕ್ಕೆ ಒಳಗಾದ ಡೇವಿಡ್ ವಾರ್ನರ್ ಇದೀಗ ವಕೀಲರ ನೆರವಿನೊಂದಿಗೆ ಬಿಡುಗಡೆಯಾಗಿದ್ದಾರೆ. ಇದಾಗ್ಯೂ ಅವರು ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಮುಂದಿನ ತಿಂಗಳು ಆಸ್ಟ್ರೇಲಿಯಾದ ನ್ಯಾಯಾಲಯಕ್ಕೆ ಹಾಜರಾಗಬೇಕಿದೆ ಎಂದು ವರದಿಯಾಗಿದೆ.
ಇದನ್ನೂ ಓದಿ : ಟೆಸ್ಟ್ ಕ್ರಿಕೆಟ್‌ಗೆ ವಿದಾಯ ಹೇಳಿದ ಬಳಿಕ ವಿರಾಟ್ ಕೊಹ್ಲಿಯಲ್ಲಿನ ಟಿ20 ಅಬ್ಬರ ಜಾಗೃತ


















