ಬೆಂಗಳೂರು: ಡಾ. ಮನಮೋಹನ್ ಸಿಂಗ್ ಬೆಂಗಳೂರು ನಗರ ವಿಶ್ವವಿದ್ಯಾಲಯದಲ್ಲಿ ನಡೆದ 5ನೇ ಘಟಿಕೋತ್ಸವದಲ್ಲಿ ಭಾರತದ ಮಾಜಿ ಪ್ರಧಾನಮಂತ್ರಿ ಡಾ. ಮನಮೋಹನ್ ಸಿಂಗ್ ಅವರಿಗೆ ಅವಮಾನ ಮಾಡಲಾಗಿದೆ ಎಂದು ರಾಷ್ಟ್ರೀಯ ಅಂಬೇಡ್ಕರ್ ಸೇನೆ ಅಧ್ಯಕ್ಷ ಅರ್ಜುನ್ ಗೋಪಾಲಯ್ಯ ಆರೋಪಿಸಿದ್ದಾರೆ.

ಡಾ. ಮನಮೋಹನ್ ಸಿಂಗ್ ಬೆಂಗಳೂರು ನಗರ ವಿಶ್ವವಿದ್ಯಾಲಯದಲ್ಲಿ ಇತ್ತೀಚೆಗೆ ನಡೆದ 5ನೇ ಘಟಿಕೋತ್ಸವ ಕಾರ್ಯಕ್ರಮದಲ್ಲಿ, ಭಾರತದ ಮಾಜಿ ಪ್ರಧಾನಮಂತ್ರಿ ಡಾ. ಮನಮೋಹನ್ ಸಿಂಗ್ ಅವರ ಹೆಸರನ್ನು ಹೊತ್ತಿರುವ ಸಂಸ್ಥೆಯೇ ಅವರ ಭಾವಚಿತ್ರವನ್ನು ಕಾರ್ಯಕ್ರಮದಲ್ಲಿ ಇರಿಸದೇ ಇರುವ ಅತ್ಯಂತ ಗಂಭೀರ ಮತ್ತು ಖಂಡನೀಯ ಘಟನೆ ಎಂದು ದೂರಿದ್ದಾರೆ.

ವಿಶೇಷವಾಗಿ, ವಿಶ್ವವಿದ್ಯಾಲಯವು ಅವರ ಹೆಸರನ್ನು ಧರಿಸಿಕೊಂಡಿರುವ ಸಂದರ್ಭದಲ್ಲಿಯೇ, ಅವರಿಗೆ ಸಲ್ಲಬೇಕಾದ ಮೂಲಭೂತ ಗೌರವವನ್ನು ತೋರಿಸದೇ ಇರುವುದು ಕೇವಲ ನಿರ್ಲಕ್ಷ್ಯವಲ್ಲ, ಅದು ಸಂಸ್ಥೆಯ ಮೌಲ್ಯಗಳಿಗೆ ವಿರುದ್ಧವಾಗಿದ್ದು ಸಾರ್ವಜನಿಕ ಭಾವನೆಗಳಿಗೆ ಧಕ್ಕೆ ತರುವಂತಹ ಘಟನೆ ಆಗಿದೆ. ಈ ವಿಷಯವು ರಾಜ್ಯದ ಜನತೆ ಹಾಗೂ ಬೌದ್ಧಿಕ ವಲಯದಲ್ಲಿ ತೀವ್ರ ಅಸಮಾಧಾನ ಮತ್ತು ಆಕ್ರೋಶಕ್ಕೆ ಕಾರಣವಾಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಶಿಕ್ಷಣ ಸಂಸ್ಥೆಯಾಗಿ ಸಮಾಜಕ್ಕೆ ಆದರ್ಶವಾಗಬೇಕಾದ ವಿಶ್ವವಿದ್ಯಾಲಯದಲ್ಲೇ ಇಂತಹ ಘಟನೆ ನಡೆದಿರುವುದು ವಿಷಾದನೀಯವಾಗಿದೆ. ಆದ್ದರಿಂದ, ಈ ವಿಷಯವನ್ನು ಸಂಬಂಧಪಟ್ಟ ಅಧಿಕಾರಿಗಳು ಗಂಭೀರವಾಗಿ ಪರಿಗಣಿಸಿ ಇಂತಹ ಘಟನೆಗಳು ಮರುಕಳಿಸದಂತೆ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದ್ದಾರೆ.
ಇದನ್ನೂ ಓದಿ : ಹಾವೇರಿ ವಿವಿ ನೀಡಲಿರುವ ಗೌರವ ಡಾಕ್ಟರೇಟ್ ಸ್ವೀಕರಿಸಲ್ಲ ಎಂದ ಬಸವರಾಜ ಬೊಮ್ಮಾಯಿ!



















