ಬೆಂಗಳೂರು: ಕದ್ದ ಮೊಬೈಲ್‌ನಲ್ಲಿ ರ‍್ಯಾಪಿಡೋ ಬುಕ್ ಮಾಡಿ ಆಟೋ ಚಾಲಕನ ಮೇಲೆ ಹಲ್ಲೆ ನಡೆಸಿ ಸುಲಿಗೆ ಮಾಡಿದ್ದ ಇಬ್ಬರು ಯುವಕರನ್ನು ಪೊಲೀಸರು ಬಂಧಿಸಿರುವ ಘಟನೆ ಬೆಂಗಳೂರಿನ ಜೋಹಳ್ಳಿ KIADB ಇಂಡಸ್ಟ್ರೀಯಲ್ ಏರಿಯಾ ಬಳಿ ನಡೆದಿದೆ.
ಪೊಲೀಸರ ಮಾಹಿತಿ ಪ್ರಕಾರ, ಎಲೆಕ್ಟ್ರಾನಿಕ್ ಸಿಟಿಯಲ್ಲಿರುವ ರಿಹ್ಯಾಬಿಲಿಟೇಷನ್ ಸೆಂಟರ್‌ನಿಂದ ತಪ್ಪಿಸಿಕೊಂಡಿದ್ದ ಇಬ್ಬರು ಯುವಕರು ಈ ಕೃತ್ಯ ಎಸಗಿದ್ದಾರೆ. ಮಾದಕ ವಸ್ತುಗಳ ಚಟಕ್ಕೆ ಒಳಗಾಗಿದ್ದ ಇವರನ್ನು ಕುಟುಂಬಸ್ಥರು ರಿಹ್ಯಾಬ್‌ಗೆ ಸೇರಿಸಿದ್ದರು. ಆದರೆ ಅಲ್ಲಿ ಮಾದಕ ವಸ್ತುಗಳು ಸಿಗದೇ ಬೇಸರಗೊಂಡು, ತಪ್ಪಿಸಿಕೊಳ್ಳಲು ಸಂಚು ರೂಪಿಸಿ ಪರಾರಿಯಾಗಿದ್ದರು.
ತಪ್ಪಿಸಿಕೊಂಡ ಬಳಿಕ, ರಿಹ್ಯಾಬ್ ಸೆಂಟರ್ ಮಾಲೀಕನ ಮೊಬೈಲ್ ಕದ್ದು, ಅದರಿಂದಲೇ ರ್ಯಾಪಿಡೋ ಸೇವೆ ಬುಕ್ ಮಾಡಿದ್ದಾರೆ. ಹುಸ್ಕೂರು ಬಳಿ ಆಟೋ ಬುಕ್ ಮಾಡಿಕೊಂಡು, ಚಾಲಕನನ್ನು ಜೋಹಳ್ಳಿ KIADB ಇಂಡಸ್ಟ್ರೀಯಲ್ ಏರಿಯಾ ಕಡೆಗೆ ಕರೆದೊಯ್ದಿದ್ದಾರೆ. ಗಮ್ಯಸ್ಥಾನ ತಲುಪಿದ ನಂತರ ಹಣ ಕೇಳಿದ ಆಟೋ ಚಾಲಕನ ಮೇಲೆ ಹಲ್ಲೆ ನಡೆಸಿ, ಅವನ ನಾಲ್ಕು ಹಲ್ಲುಗಳನ್ನು ಮುರಿದು ಗಾಯಗೊಳಿಸಿದ್ದಾರೆ. ಭಯಗೊಂಡ ಚಾಲಕ ಸ್ಥಳದಿಂದ ಓಡಿಹೋಗಿದ್ದಾನೆ. ಬಳಿಕ ಆರೋಪಿಗಳು ಮೊಬೈಲ್ ಹಾಗೂ ಆಟೋ ಸಮೇತ ಪರಾರಿಯಾಗಿದ್ದಾರೆ.
ಆ ಬಳಿಕ ಅವರು ಮಾಲೂರು ಕಡೆಗೆ ತೆರಳಿ, “ತಂದೆಗೆ ಆರೋಗ್ಯ ಸಮಸ್ಯೆ” ಎಂದು ಸುಳ್ಳು ಹೇಳಿ ಆಟೋವನ್ನು ಅಡ ಇಟ್ಟು ಹಣ ಪಡೆದಿದ್ದಾರೆ. ನಂತರ ಮತ್ತೆ ಬೆಂಗಳೂರಿಗೆ ಬಂದು ಅಲೆದಾಡುತ್ತಿದ್ದರು. ಈ ಕುರಿತು ಆಟೋ ಚಾಲಕ ನೀಡಿದ ದೂರಿನ ಮೇರೆಗೆ ಬಾಗಲೂರು ಪೊಲೀಸ್ ಠಾಣೆ ಪೊಲೀಸರು ತನಿಖೆ ಕೈಗೊಂಡು, ಮೊಬೈಲ್ ಫೋನ್ ಅನ್ನು ಮಧ್ಯ ಮಧ್ಯೆ ಆನ್-ಆಫ್ ಮಾಡುತ್ತಿದ್ದ ಆರೋಪಿಗಳ ಹಾದಿ ಪತ್ತೆ ಹಚ್ಚಿದರು. ಈಗ ಪ್ರಕರಣ ಸಂಬಂಧ ಕಾನಿಷ್ ಸೇರಿದಂತೆ ಒಬ್ಬ ಅಪ್ರಾಪ್ತ ಬಾಲಕನನ್ನು ಪೊಲೀಸರು ಬಂಧಿಸಿದ್ದು, ಮುಂದಿನ ತನಿಖೆ ಮುಂದುವರಿದಿದೆ.
ಇದನ್ನೂ ಓದಿ : ಕಬಿನಿ ಹಿನ್ನೀರು ಕಾಡಂಚಲ್ಲಿ ವನ್ಯಜೀವಿಗಳನ್ನು ಬೇಟೆಯಾಡುತ್ತಿದ್ದ ಇಬ್ಬರು ಅರೆಸ್ಟ್!



















