ಟೆಹ್ರಾನ್: ಅಮೆರಿಕ ಮತ್ತು ಇಸ್ರೇಲ್ ಪಡೆಗಳು ಜಂಟಿಯಾಗಿ ನಡೆಸಿದ ವಾಯುದಾಳಿಯಲ್ಲಿ ಇರಾನ್‌ನ ಅತ್ಯಂತ ಎತ್ತರದ ಸೇತುವೆಯೊಂದು ಭಾಗಶಃ ಧ್ವಂಸಗೊಂಡಿದೆ. ಈ ಘಟನೆಯಿಂದ ಕೆರಳಿರುವ ಇರಾನ್, ಅಮೆರಿಕದ ಮಿತ್ರರಾಷ್ಟ್ರಗಳಾದ ಕೊಲ್ಲಿ ರಾಷ್ಟ್ರಗಳ ಎಂಟು ಪ್ರಮುಖ ಸೇತುವೆಗಳನ್ನು ಗುರಿಯಾಗಿಸಿಕೊಂಡು ‘ಹಿಟ್-ಲಿಸ್ಟ್’ ಬಿಡುಗಡೆ ಮಾಡುವ ಮೂಲಕ ತೀವ್ರ ಪ್ರತಿಕಾರ ತೀರಿಸಿಕೊಳ್ಳುವ ಎಚ್ಚರಿಕೆ ನೀಡಿದೆ.
ಇರಾನ್‌ನ ಹೆಮ್ಮೆಯ ಸೇತುವೆ ನೆಲಸಮ
ಇರಾನ್‌ನ ರಾಜಧಾನಿ ಟೆಹ್ರಾನ್ ಹಾಗೂ ಕರಾಜ್ ನಗರವನ್ನು ಸಂಪರ್ಕಿಸುವ, ಸುಮಾರು 136 ಮೀಟರ್ ಎತ್ತರದ ‘ಬಿ1’ (B1) ಸೇತುವೆಯ ಮೇಲೆ ಗುರುವಾರ ಅಮೆರಿಕ ಮತ್ತು ಇಸ್ರೇಲ್ ಜಂಟಿ ದಾಳಿ ನಡೆಸಿವೆ. ಈ ದಾಳಿಯಲ್ಲಿ ಎಂಟು ಮಂದಿ ಸಾವನ್ನಪ್ಪಿದ್ದು, 95ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ ಎಂದು ಅಲ್ಬೋರ್ಜ್ ಪ್ರಾಂತ್ಯದ ಉಪ ರಾಜ್ಯಪಾಲ ಗೋದ್ರತೊಲ್ಲಾ ಸೈಫ್ ಖಚಿತಪಡಿಸಿದ್ದಾರೆ. ನಿರ್ಮಾಣ ಹಂತದಲ್ಲಿದ್ದ ಈ ಬೃಹತ್ ಸೇತುವೆ ಕುಸಿಯುತ್ತಿರುವ ದೃಶ್ಯಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಈ ವಿಡಿಯೋವನ್ನು ಹಂಚಿಕೊಳ್ಳುವ ಮೂಲಕ ಇರಾನ್‌ಗೆ ಬಹಿರಂಗ ಎಚ್ಚರಿಕೆ ನೀಡಿದ್ದಾರೆ. “ಇರಾನ್ ಸಂಧಾನಕ್ಕೆ ಬರದಿದ್ದರೆ ಆ ದೇಶವನ್ನು ಶಿಲಾಯುಗಕ್ಕೆ ತಳ್ಳಲಾಗುವುದು” ಎಂದು ಟ್ರಂಪ್ ಗುಡುಗಿದ್ದಾರೆ.

ಇರಾನ್‌ನಿಂದ 8 ಸೇತುವೆಗಳ ‘ಹಿಟ್-ಲಿಸ್ಟ್’
ತನ್ನ ಮೂಲಸೌಕರ್ಯದ ಮೇಲಿನ ದಾಳಿಗೆ ಸೇಡು ತೀರಿಸಿಕೊಳ್ಳಲು ಇರಾನ್ ಮುಂದಾಗಿದೆ. ಇರಾನ್‌ನ ಅರೆ-ಅಧಿಕೃತ ಸುದ್ದಿಸಂಸ್ಥೆ ‘ಫಾರ್ಸ್’, ಕೊಲ್ಲಿ ರಾಷ್ಟ್ರಗಳಲ್ಲಿರುವ 8 ಆಯಕಟ್ಟಿನ ಸೇತುವೆಗಳ ಪಟ್ಟಿಯನ್ನು ಬಿಡುಗಡೆ ಮಾಡಿದೆ. ಈ ಪಟ್ಟಿಯಲ್ಲಿ ಕುವೈತ್‌ನ ಶೇಖ್ ಜಾಬರ್ ಅಲ್-ಅಹ್ಮದ್ ಅಲ್-ಸಬಾ ಸಮುದ್ರ ಸೇತುವೆ, ಯುಎಇಯ ಶೇಖ್ ಜಾಯೆದ್ ಮತ್ತು ಅಲ್ ಮಕ್ತಾದಂತಹ ಪ್ರಮುಖ ಸೇತುವೆಗಳು, ಸೌದಿ ಅರೇಬಿಯಾ ಮತ್ತು ಬಹ್ರೇನ್ ಅನ್ನು ಸಂಪರ್ಕಿಸುವ ಕಿಂಗ್ ಫಹದ್ ಕಾಸ್‌ವೇ ಹಾಗೂ ಜೋರ್ಡಾನ್‌ನ ಮೂರು ಪ್ರಮುಖ ಸೇತುವೆಗಳು ಸೇರಿವೆ. ಇಸ್ಲಾಮಿಕ್ ರೆವಲ್ಯೂಷನರಿ ಗಾರ್ಡ್ ಕಾರ್ಪ್ಸ್ (IRGC) ಈ ಸೇತುವೆಗಳನ್ನು ಗುರಿಯಾಗಿಸುವ ಸಾಧ್ಯತೆಯಿದೆ ಎಂದು ವರದಿಯಾಗಿದೆ.
ಅಮೆರಿಕದ ದಾಳಿಯ ಕುರಿತು ಪ್ರತಿಕ್ರಿಯಿಸಿರುವ ಇರಾನ್ ವಿದೇಶಾಂಗ ಸಚಿವ ಅಬ್ಬಾಸ್ ಅರಾಗ್ಚಿ, “ನಾಗರಿಕ ಮೂಲಸೌಕರ್ಯಗಳ ಮೇಲೆ ದಾಳಿ ಮಾಡುವ ಮೂಲಕ ಇರಾನಿಯನ್ನರನ್ನು ಶರಣಾಗುವಂತೆ ಮಾಡಲು ಸಾಧ್ಯವಿಲ್ಲ. ಇದು ಶತ್ರುವಿನ ನೈತಿಕ ಪತನವನ್ನು ತೋರಿಸುತ್ತದೆ” ಎಂದು ಕಿಡಿಕಾರಿದ್ದಾರೆ. ಫೆಬ್ರವರಿ 28 ರಿಂದ ಆರಂಭವಾದ ಈ ಸಂಘರ್ಷದಲ್ಲಿ ಈವರೆಗೆ ಇರಾನ್ ಸರ್ವೋಚ್ಚ ನಾಯಕ ಆಯತೊಲ್ಲಾ ಅಲಿ ಖಮೇನಿ ಸೇರಿದಂತೆ 1,340ಕ್ಕೂ ಹೆಚ್ಚು ಜನರು ಬಲಿಯಾಗಿದ್ದಾರೆ.
ಇದನ್ನೂ ಓದಿ: ಮಾಲ್ಡಾ ಒತ್ತೆಯಾಳು ಪ್ರಕರಣ | ಪಶ್ಚಿಮ ಬಂಗಾಳ ಸರ್ಕಾರದ ವಿರುದ್ಧ ಸುಪ್ರೀಂ ಕೋರ್ಟ್ ತೀವ್ರ ವಾಗ್ದಾಳಿ!



















