ಬೆಂಗಳೂರು : ಕರ್ನಾಟಕ ವಿದ್ಯುತ್ ನಿಗಮ ನಿಯಮಿತ(KPCL)ದಲ್ಲಿ ಭರ್ತಿ ಮಾಡಲಾಗುತ್ತಿರುವ 622 ಹುದ್ದೆಗಳ ಪೈಕಿ ಮೊದಲ ಹಂತದಲ್ಲಿ 233 ಹುದ್ದೆಗಳಿಗೆ ನೇಮಕಾತಿ ಆದೇಶಗಳನ್ನು ವಿತರಿಸಿ ಗುರುವಾರ ಕೌನ್ಸೆಲಿಂಗ್ ಮೂಲಕ ಸ್ಥಳ ನಿಯುಕ್ತಿ ಮಾಡಲಾಗಿದೆ.
ಗುರುವಾರ ನಡೆದ ಕೌನ್ಸೆಲಿಂಗ್ನಲ್ಲಿ ಆಯ್ಕೆಯಾದ 20 ಸಹಾಯಕ ಇಂಜಿನಿಯರ್ (ಸಿವಿಲ್), 38 ಸಹಾಯಕ ಇಂಜಿನಿಯರ್ (ಇಲೆಕ್ಟ್ರಿಕಲ್), 20 ಸಹಾಯಕ ಇಂಜಿನಿಯರ್ (ಮೆಕ್ಯಾನಿಕಲ್), 27 ಸಹಾಯಕ ಇಂಜಿನಿಯರ್ (ಇನ್ಸ್ಟ್ರುಮೆಂಟೇಷನ್), 13 ಕಿರಿಯ ಎಂಜಿನಿಯರ್ (ಸಿವಿಲ್), 61 ಸಹಾಯಕ ಇಂಜಿನಿಯರ್ (ಇಲೆಕ್ಟ್ರಿಕಲ್), 41 ಕಿರಿಯ ಇಂಜಿನಿಯರ್ (ಮೆಕ್ಯಾನಿಕಲ್), 2 ಕೆಮಿಸ್ಟ್ ಹಾಗೂ 11 ಕೆಮಿಕಲ್ ಸೂಪರ್ ವೈಸರ್ ಹುದ್ದೆಗಳ ಅಭ್ಯರ್ಥಿಗಳಿಗೆ ಸ್ಥಳ ನಿಯುಕ್ತಿ ಮಾಡಲಾಗಿದೆ. ಉಳಿದ ಹುದ್ದೆಗಳಿಗೆ ದಾಖಲೆಗಳ ನೈಜತೆ ಪರಿಶೀಲನಾ ಕಾರ್ಯ ನಡೆಯುತ್ತಿದ್ದು, ಬಳಿಕ ನೇಮಕಾತಿ ಆದೇಶ ವಿತರಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ಇಂಧನ ಇಲಾಖೆಯ ಅಪರ ಮುಖ್ಯ ಕಾರ್ಯದರ್ಶಿ ಗೌರವ್ ಗುಪ್ತಾ ತಿಳಿಸಿದರು.
ಕೌನ್ಸೆಲಿಂಗ್ ವೇಳೆ ನೂತನವಾಗಿ ನೇಮಕಗೊಂಡ ಅಭ್ಯರ್ಥಿಗಳನ್ನು ಉದ್ದೇಶಿಸಿ ಮಾತನಾಡಿದ ಗುಪ್ತಾ, “ಮುಖ್ಯಮಂತ್ರಿಗಳು, ಇಂಧನ ಸಚಿವರ ಸಹಕಾರದಿಂದ ಕೆಪಿಸಿಎಲ್‌ನಲ್ಲಿ ಈ ನೇಮಕಾತಿಯನ್ನು ಶೀಘ್ರವಾಗಿ ಪೂರ್ಣಗೊಳಿಸಲು ಸಾಧ್ಯವಾಗಿದೆ. 233 ಹುದ್ದೆಗಳಿಗೆ ಕೌನ್ಸೆಲಿಂಗ್ ಮೂಲಕ ಸ್ಥಳ ನಿಯುಕ್ತಿ ಮಾಡಲಾಗಿದೆ. ನಿಗಮಕ್ಕೆ ನೇಮಕಗೊಂಡಿರುವ ಯುವ ಇಂಜಿನಿಯರ್ಗಳು ತಮ್ಮ ಕೌಶಲ್ಯದಿಂದ ಕೆಪಿಸಿಎಲ್‌ನ ಪ್ರತಿಷ್ಠೆ ಹೆಚ್ಚಿಸಬೇಕು. ನೀವು ಬಂದಿರುವುದರಿಂದ ನಿಗಮದಲ್ಲಿ ಉತ್ತಮ ಬದಲಾವಣೆಗಳಾಗಬೇಕು” ಎಂದು ಅವರು ಹೇಳಿದರು.
“ಕೇವಲ ವೇತನಕ್ಕಾಗಿ ಕೆಲಸ ಮಾಡದೆ, ವಿದ್ಯುತ್ ಉತ್ಪಾದನೆಯಲ್ಲಿ ನಿಗಮವನ್ನು ಮತ್ತಷ್ಟು ಎತ್ತರಕ್ಕೆ ಕೊಂಡೊಯ್ಯವ ಪ್ರಯತ್ನ ನಿಮ್ಮಿಂದ ಆಗಬೇಕು. ಹೊಸದಾಗಿ ನೇಮಕಗೊಂಡಿರುವವರಿಗೆ ಉನ್ನತ ಹುದ್ದೆಗೇರಲು ಸಾಕಷ್ಟು ಅವಕಾಶಗಳಿದ್ದು, ನಿಗಮದಿಂದ ನೀವೇನು ಪಡೆದಿದ್ದೀರಿ ಎಂಬುದಕ್ಕಿಂತ ನಿಗಮಕ್ಕೆ ನಿಮ್ಮ ಕೊಡುಗೆ ಮುಖ್ಯವಾಗುತ್ತದೆ ಎಂಬುದನ್ನು ತಿಳಿದು ಕೆಲಸ ಮಾಡಬೇಕು” ಎಂದು ಸಲಹೆ ನೀಡಿದರು.
ಇನ್ನು, “ಖಾಲಿ ಹುದ್ದೆಗಳನ್ನು ಭರ್ತಿ ಮಾಡುವ ಮೂಲಕ ಕೆಪಿಸಿಎಲ್ ಅನ್ನು ಇನ್ನಷ್ಟು ಕ್ರಿಯಾಶೀಲಗೊಳಿಸಲು ನಮ್ಮ ಸರ್ಕಾರ ಆದ್ಯತೆ ನೀಡಿರುವುದರಿಂದ ಅದರ ಭಾಗವಾಗಿ ಈ ನೇಮಕಾತಿ ಮಾಡಲಾಗುತ್ತಿದೆ. ಈ ಮೂಲಕ ನಿಗಮವನ್ನು ಮತ್ತಷ್ಟು ಬಲಪಡಿಸಲು ಎಲ್ಲಾ ರೀತಿಯ ಸಹಕಾರ ನೀಡಲಾಗುತ್ತಿದೆ” ಎಂದು ಇಂಧನ ಸಚಿವ ಕೆ.ಜೆ.ಜಾರ್ಜ್ ತಿಳಿಸಿದ್ದಾರೆ.
ಇದನ್ನೂ ಓದಿ : ಲಂಚ ಪಡೆಯುವಾಗ ರೆಡ್‌ಹ್ಯಾಂಡ್ ಆಗಿ ಸಿಕ್ಕಿಬಿದ್ದ ಅಧಿಕಾರಿಗೆ 2 ವರ್ಷ ಜೈಲು, 40,000 ದಂಡ



















