ಮಂಡ್ಯ: ತಾಯಿ ಮತ್ತು ಮಗನ ನಡುವಿನ ನಿರಂತರ ಕಲಹ ದುರ್ಘಟನೆಗೆ ದಾರಿ ಮಾಡಿಕೊಟ್ಟ ಘಟನೆ ಮಂಡ್ಯ ಜಿಲ್ಲೆಯ ಕೆ.ಆರ್.ಪೇಟೆ ತಾಲೂಕಿನ ಬೂಕಹಳ್ಳಿ ಕೊಪ್ಪಲು ಗ್ರಾಮದಲ್ಲಿ ನಡೆದಿದೆ.
ಮಹದೇವಮ್ಮ (75) ಹಾಗೂ ಅವರ ಪುತ್ರ ಸುಭಾಷ್ (42) ಸಾವಿನಲ್ಲಿ ಅಂತ್ಯ ಕಂಡಿದ್ದಾರೆ. ಸುಭಾಷ್ ನಿತ್ಯವೂ ಮದ್ಯಪಾನ ಮಾಡಿ ಮನೆಗೆ ಬಂದು ಗಲಾಟೆ ಮಾಡುತ್ತಿದ್ದ ಹಿನ್ನೆಲೆಯಲ್ಲಿ ಬೇಸತ್ತ ತಾಯಿ ಮಹದೇವಮ್ಮ ಸುಮಾರು 15 ದಿನಗಳ ಹಿಂದೆ ಮನೆಯಿಂದ ನಾಪತ್ತೆಯಾಗಿದ್ದರು.
ತಾಯಿ ಕಾಣೆಯಾಗಿರುವ ಹಿನ್ನೆಲೆಯಲ್ಲಿ ಆತಂಕಗೊಂಡ ಸುಭಾಷ್ ಮಂಗಳವಾರ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ತಿಳಿದುಬಂದಿದೆ. ಇದೀಗ, ಇಂದು ಕಬ್ಬಿನ ಗದ್ದೆಯಲ್ಲಿ ಮಹದೇವಮ್ಮ ಅವರ ಶವ ಕೊಳೆತ ಸ್ಥಿತಿಯಲ್ಲಿ ಪತ್ತೆಯಾಗಿದೆ. ಈ ಘಟನೆ ಸ್ಥಳೀಯರನ್ನು ಬೆಚ್ಚಿಬೀಳುವಂತೆ ಮಾಡಿದೆ.
ಘಟನೆ ಕೆ.ಆರ್.ಪೇಟೆ ಗ್ರಾಮಾಂತರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದ್ದು, ಪ್ರಕರಣ ದಾಖಲಿಸಿಕೊಂಡ ಪೊಲೀಸರು ಮುಂದಿನ ತನಿಖೆ ಕೈಗೊಂಡಿದ್ದಾರೆ.
ಇದನ್ನೂ ಓದಿ : ಡ್ರಗ್ಸ್ ಬಳಿಕ ಮೈಸೂರಿಗೆ ಜೂಜಾಟದ ಕಳಂಕ!



















