ಬೆಂಗಳೂರು : ಅಮೆರಿಕ ಹಾಗೂ ಇರಾನ್ ನಡುವೆ ಸಂಘರ್ಷ ನಡೆಯುತ್ತಿರುವ ಕಾರಣ ಹಾರ್ಮುಜ್ ಜಲಸಂಧಿಯು ಮುಚ್ಚಿದೆ. ಇದರಿಂದಾಗಿ ಭಾರತಕ್ಕೆ ಸಮರ್ಪಕವಾಗಿ ಅಡುಗೆ ಅನಿಲ ಹಾಗೂ ಕಚ್ಚಾತೈಲ ಪೂರೈಕೆಯಾಗುತ್ತಿಲ್ಲ. ಈಗಾಗಲೇ ಹೋಟೆಲ್ ಗಳಿಗೆ ಎಲ್ ಪಿಜಿ ಪೂರೈಕೆಯು ಕಡಿಮೆಯಾಗಿದೆ. ಕೆಲ ಹೋಟೆಲ್ ಗಳು ಮುಚ್ಚಿವೆ. ಇದರ ಬೆನ್ನಲ್ಲೇ, ನಯಾರಾ ಎನರ್ಜಿ ತೈಲ ಕಂಪನಿಯು ದೇಶದಲ್ಲಿ ಪೆಟ್ರೋಲ್ ಹಾಗೂ ಡೀಸೆಲ್ ಬೆಲೆಯನ್ನು ಏರಿಕೆ ಮಾಡಿದೆ. ಇದು ಈಗ ಜನರಲ್ಲಿ ಆತಂಕ ಮೂಡಿಸಿದೆ. ಇದರ ಮಧ್ಯೆಯೇ, ಸರ್ಕಾರವು ತೈಲ ಹಾಗೂ ಅಡುಗೆ ಅನಿಲದ ಕುರಿತು ಮಹತ್ವದ ಸ್ಪಷ್ಟನೆ ನೀಡಿದೆ.
“ದೇಶದಲ್ಲಿ ಪೆಟ್ರೋಲ್ ಹಾಗೂ ಡೀಸೆಲ್ ಗೆ ಕೊರತೆ ಇಲ್ಲ. ಜಗತ್ತಿನ 41 ಸಪ್ಲೈಯರ್‌ಗಳ ಮೂಲಕ ಕಚ್ಚಾತೈಲವನ್ನು ಆಮದು ಮಾಡಿಕೊಳ್ಳಲಾಗುತ್ತಿದೆ. ಹಾಗಾಗಿ, ಯಾರೂ ಕೂಡ ದೇಶದಲ್ಲಿ ಪೆಟ್ರೋಲ್ ಹಾಗೂ ಡೀಸೆಲ್ ಕೊರತೆ ಇದೆ ಎಂದು ಆತಂಕಕ್ಕೀಡಾಗಬಾರದು. ಹಾಗೆಯೇ, ಯಾರೂ ಕೂಡ ಇದರ ಬಗ್ಗೆ ವದಂತಿಗಳನ್ನು ಹರಡಿಸಬಾರದು” ಎಂದು ಕೇಂದ್ರ ಸರ್ಕಾರ ತಿಳಿಸಿದೆ.
“ಭಾರತಕ್ಕೆ ಕಚ್ಚಾತೈಲದ ಆಮದು ಆಗುತ್ತಲೇ ಇದೆ. ಹಾಗಾಗಿ, ಪೂರೈಕೆಯಲ್ಲಿ ಯಾವುದೇ ವ್ಯತ್ಯಯವಾಗುವುದಿಲ್ಲ. ಅಷ್ಟೇ ಅಲ್ಲ, ದೇಶದಲ್ಲಿ 60 ದಿನಗಳಿಗೆ ಆಗುವಷ್ಟು ಪೆಟ್ರೋಲ್, ಡೀಸೆಲ್ ಹಾಗೂ ಅಡುಗೆ ಅನಿಲದ ದಾಸ್ತಾನು ಇದೆ. ಸುಖಾಸುಮ್ಮನೆ ಜನ ಭೀತಿಗೆ ಒಳಗಾಗಬಾರದು. ಇಂಧನ ಕೊರತೆ ಕುರಿತ ವದಂತಿಗಳಿಗೆ ಕಿವಿಗೊಡಬಾರದು” ಎಂದು ಸರ್ಕಾರ ಸ್ಪಷ್ಟಪಡಿಸಿದೆ.
ಸರ್ಕಾರದ ಸ್ಪಷ್ಟನೆ ಮಧ್ಯೆಯೇ, ನಯಾರಾ ಎನರ್ಜಿಯು ಪೆಟ್ರೋಲ್ ಬಂಕ್ ಗಳಲ್ಲಿ ಪೆಟ್ರೋಲ್ ಹಾಗೂ ಡೀಸೆಲ್ ಬೆಲೆಯನ್ನು ಏರಿಕೆ ಮಾಡಿದೆ. ಪೆಟ್ರೋಲ್ ಬೆಲೆಯಲ್ಲಿ 5 ರೂಪಾಯಿ ಹಾಗೂ ಡೀಸೆಲ್ ಬೆಲೆಯಲ್ಲಿ 3 ರೂಪಾಯಿ ಏರಿಕೆ ಮಾಡಿದೆ. ನಯಾರಾ ಎನರ್ಜಿಯ 6 ಸಾವಿರಕ್ಕೂ ಅಧಿಕ ಬಂಕ್ ಗಳಲ್ಲಿ ಬೆಲೆಯೇರಿಕೆಯಾಗಿದೆ. ಉಳಿದ ಯಾವುದೇ ಕಂಪನಿಗಳು ಏರಿಕೆ ಮಾಡಿಲ್ಲ.
ಇದನ್ನೂ ಓದಿ : SSLC ಹಿಂದಿ ಪರೀಕ್ಷೆ ವಿರುದ್ಧ ಸಿಡಿದೆದ್ದ ಕನ್ನಡ ಪರ ಸಂಘಟನೆಗಳು – ಪರೀಕ್ಷೆ ಬ್ಯಾನ್‌ಗೆ ಆಗ್ರಹ!



















