ಬೆಂಗಳೂರು | ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿರುವ ಜಲಮಂಡಳಿಯಲ್ಲಿ (BWSSB) ನಡೆಯುತ್ತಿರುವ ಅಕ್ರಮ ಮತ್ತು ಭಾರೀ ಭ್ರಷ್ಟಾಚಾರದ ವಿರುದ್ದ KRS ಪಕ್ಷ ಸಿಡಿದೆದ್ದಿದೆ. ಜಲಮಂಡಳಿಯು ಬೆಂಗಳೂರಿಗರಿಂದ ಸುಲಿಗೆ ಮಾಡುತ್ತಿರುವ ಗಂಭೀರ ಆರೋಪ ಕೇಳಿಬಂದಿದ್ದು, ಈ ಸರ್ಕಾರಿ ಸಂಸ್ಥೆಯಲ್ಲಿ ನಡೆಯುವ ಅಕ್ರಮಗಳಿಗೆ ಯಾವುದೇ ಕಡಿವಾಣವೇ ಇಲ್ಲದಂತಾಗಿದೆ. ಇದೀಗ ಇವುಗಳ ವಿರುದ್ಧ ಕೆಆರ್‌ಎಸ್ ಪಕ್ಷವು ಬೃಹತ್ ಹೋರಾಟಕ್ಕೆ ಸಜ್ಜಾಗಿದೆ. ಇಂದು ಈ ಬಗ್ಗೆ ಸುದ್ದಿಗೋಷ್ಠಿ ನಡೆಸಿರುವ ಕೆಆರ್‌ಎಸ್ ಪಕ್ಷ, ಜಲಮಂಡಳಿಯ ಸಾಲು ಸಾಲು ಅಕ್ರಮ ಮತ್ತು ಭ್ರಷ್ಟಾಚಾರವನ್ನು ಬಯಲಿಗೆಳೆದಿದೆ.

ಜಲಮಂಡಳಿ ವಿರುದ್ದದ ಗಂಭೀರ ಆರೋಪಗಳು
ಜಲಮಂಡಳಿಯು ಬಳಕೆದಾರರಿಗೆ BCC (Beneficiary Capital Contribution Charges) ಶುಲ್ಕಗಳನ್ನು ವಿಧಿಸಿ ಡಿಮಾಂಡ್ ನೋಟಿಸ್ ಹೊರಡಿಸುತ್ತಿದೆ. ಈ BCC ಶುಲ್ಕದ ವಿರುದ್ಧ ಕೆಲವು ನಾಗರಿಕರು ಉಚ್ಚ ನ್ಯಾಯಾಲಯದಲ್ಲಿ ದಾವೆ ಹೂಡಿ, ಅದು ಕಾನೂನು ಬಾಹಿರ ಎಂದು ಆದೇಶ ಪಡೆದಿದ್ದಾರೆ. ಇನ್ನು ಈ ಆದೇಶಗಳಲ್ಲಿ ಸ್ಪಷ್ಟವಾಗಿ ಈ BCC ಶುಲ್ಕಗಳು ಕಾನೂನು ಬಾಹಿರ ಮತ್ತು ಇವುಗಳನ್ನು ನಿಗದಿತ ಸಮಯದ ಒಳಗೆ ಬಳಕೆದಾರರಿಗೆ ಮರು ಪಾವತಿ ಮಾಡಬೇಕು ಎಂದು ಆದೇಶಿಸಲಾಗಿದೆ. 2018ರಿಂದ ಇತ್ತೀಚಿನವರೆಗೂ ಹಲವಾರು ಪ್ರಕರಣಗಳು [ಪ್ರಕರಣ ಸಂಖ್ಯೆ WP 27589/2024 (GM-BWSSB), WP 18685/2021 (GM-BWSSB), WP 35389/2018 (GM-BWSSB), WP 20016/2021 (GM-BWSSB)] ಇತ್ಯರ್ಥವಾಗಿ ಆದೇಶವಾಗಿರುತ್ತದೆ. ಇಲ್ಲಿಯವರೆಗೂ ಜಲ ಮಂಡಳಿಯು ಈ ಪ್ರಕರಣದ ಯಾವುದೇ ದೂರುದಾರರಿಗೆ ಹಣ ಮರು ಪಾವತಿಮಾಡಿರುವುದಿಲ್ಲ ಮತ್ತು ಇಂದೂ ಕೂಡಾ ಈ ಶುಲ್ಕವನ್ನು ವಿಧಿಸಲಾಗುತ್ತಿದೆ ಎಂದು ತಿಳಿದುಬಂದಿದೆ. ಈ ಕಾನೂನು ಬಾಹಿರ ಶುಲ್ಕವನ್ನು ಹೆಸರಿನಲ್ಲಿ ಇದುವರೆಗೂ ಸಾವಿರಾರು ಕೋಟಿ ರೂಪಾಯಿಗಳನ್ನು ಬೆಂಗಳೂರಿಗರಿಂದ ಜಲಮಂಡಳಿ ವಸೂಲಿ ಮಾಡಿದೆ ಎಂದು KRS ಪಕ್ಷ ಆರೋಪಿಸಿದೆ.
ಇನ್ನು, ಹಳೆ ಕಟ್ಟಡ ಬೀಳಿಸಿ ಹೊಸ ಕಟ್ಟಡ ನಿರ್ಮಾಣ ಮಾಡುತ್ತಿರುವ ಬಳಕೆದಾರರು ಬಳಸುತ್ತಿರುವ ತಾತ್ಕಾಲಿಕ ಸಂಪರ್ಕವನ್ನು ಕಟ್ಟಡ ಪೂರ್ಣವಾದ ಮೇಲೆ ಅಧಿಕೃತಗೊಳಿಸದೇ ಇರುವ ಸಂದರ್ಭದಲ್ಲಿ ತಿಂಗಳ ಬಿಲ್‌ಗಳಲ್ಲಿ, ದಂಡದ ಮೊತ್ತ 2,500 ರೂಗಳನ್ನು ವಿಧಿಸಿ ಸಂಗ್ರಹಿಸಬೇಕು ಎಂದು ಒಂದು ವರ್ಷದ ಹಿಂದೆ ಜಲ ಮಂಡಳಿಯು ಆದೇಶಿಸಿ ಸುತ್ತೋಲೆಯನ್ನು ಹೊರಡಿಸಿದೆ. ಆ ಸುತ್ತೋಲೆಯಲ್ಲಿ ಈ ದಂಡದ ಮೊತ್ತವನ್ನು ಪ್ರತಿ ತಿಂಗಳ ಬಿಲ್‌ನ ಮೂಲಕ ಸಂಗ್ರಹಿಸಬೇಕೆಂದು ತಿಳಿಸಲಾಗಿದೆ. ಆದರೆ, ಅಂದಿನಿಂದ ಇಂದಿನವರೆಗೂ ಈ ದಂಡದ ಮೊತ್ತವನ್ನು ಮಾಸಿಕ ಬಿಲ್ ವಿಧಿಸಿರುವುದಿಲ್ಲ. ಈಗ ಏಕಾಏಕಿ ಬಳಕೆದಾರರಿಗೆ ಯಾವುದೇ ಮಾಹಿತಿಯನ್ನು ನೀಡದೇ ಕಳೆದ ಒಂದು ವರ್ಷದ ದಂಡವನ್ನು ಪಾವತಿಸಬೇಕೆಂದು ಡಿಮಾಂಡ್ ನೋಟಿಸ್ ಹೊರಡಿಸಲಾಗಿದೆ. ಈ ದಂಡದ ಬಗ್ಗೆ ಯಾವುದೇ ಮಾಹಿತಿ ಇಲ್ಲದೇ ಸಾರ್ವಜನಿಕರು ಸಾವಿರಾರು, ಲಕ್ಷಾಂತರ ರೂಪಾಯಿಗಳನ್ನು ಕಕ್ಕುವಂತೆ ದೌರ್ಜನ್ಯ ಎಸಗುತ್ತಿದೆ.
ಹಾಗೆಯೇ ಹೊಸ ಕನೆಕ್ಷನ್ ಪಡೆದುಕೊಳ್ಳುವ ಬಳಕೆದಾರರಿಗೆ ಮೀಟರ್ ಅಳವಡಿಕೆ (ಫಿಕ್ಸಿಂಗ್) ಶುಲ್ಕವನ್ನು ಜಲ ಮಂಡಳಿ ವಿಧಿಸುತ್ತಿದೆ. ಆದರೆ, ಜಲ ಮಂಡಳಿಯು ಇದುವರೆಗೂ ಯಾರೊಬ್ಬರಿಗೂ ನೇರವಾಗಿ ಮೀಟರ್ ಅಳವಡಿಸಿರುವುದಿಲ್ಲ. ಅದನ್ನು ಸಂಪೂರ್ಣವಾಗಿ ಗುತ್ತಿಗೆದಾರರು ಅಥವಾ ಮನೆಯ ಮಾಲೀಕರು ತಮ್ಮ ಹಣ ವ್ಯಯಿಸಿ ಮಾಡಿಸಿಕೊಳ್ಳುತ್ತಾರೆ. ಜಲ ಮಂಡಳಿಯ ಬಳಿ ಇದನ್ನು ನಿರ್ವಹಿಸುವ ಯಾವುದೇ ಪ್ಲಂಬರ್ ಇರುವುದಿಲ್ಲ. ಅರ್ಜಿಯನ್ನು ನೋಡುವುದರಿಂದ ಹಿಡಿದು ಎಲ್ಲಾ ಕೆಲಸಗಳನ್ನು ಗುತ್ತಿಗೆದಾರರು ನಿರ್ವಹಿಸುತ್ತಾರೆ. ಈ ಮೀಟರ್ ಫಿಕ್ಸಿಂಗ್ ಶುಲ್ಕವನ್ನು ಅವರು ಕಂಟ್ರಾಕ್ಟರ್ಗಳಿಗೂ ನೀಡುವುದಿಲ್ಲ. ಮೀಟರ್ ಫಿಕ್ಸಿಂಗ್‌ನ ಸೇವೆಯನ್ನು ಒದಗಿಸದೇ ಇದ್ದರೂ ಪ್ರತಿಯೊಬ್ಬ ಬಳಕೆದಾರರಿಂದ ಈ ಶುಲ್ಕವನ್ನು ಜಲ ಮಂಡಳಿಯು ವಸೂಲಿ ಮಾಡುತ್ತಿದೆ ಎನ್ನಲಾಗಿದೆ.
ಜಲ ಮಂಡಳಿಯು ಕೆಳ ಹಂತದ ಸಿಬ್ಬಂದಿ ಮತ್ತು ಅಧಿಕಾರಿಗಳು ಪ್ರತಿನಿತ್ಯ ಭ್ರಷ್ಟಾಚಾರ ಮಾಡುವುದರಲ್ಲಿ ಮುಳುಗಿದ್ದಾರೆ. 7 ವರ್ಷಕ್ಕೊಮ್ಮೆ ಮೀಟರ್‌ಗಳಳನ್ನು ಉಚಿತವಾಗಿ ಬದಲಾಯಿಸುವ ನಿಯಮ ಇದ್ದರೂ ಮೀಟರ್ ಬದಲಾವಣೆಗೆಂದು ಸಾವಿರಾರು ರೂಪಾಯಿಗಳನ್ನು ಬೆಂಗಳೂರಿನ ನಾಗರಿಕರಿಂದ ವಸೂಲಿ ಮಾಡುತ್ತಿರುವ ಆರೋಪವೂ ಕೇಳಿಬಂದಿದೆ. ಸಾರ್ವಜನಿಕರಿಂದ ಲಂಚ ಪಡೆದು ಮೀಟರ್ ರೀಡಿಂಗ್ ನಲ್ಲಿ ತಪ್ಪು ಮಾಹಿತಿಗಳನ್ನು ನೀಡಿ ಸಂಸ್ಥೆಗೆ ನಷ್ಟ ಉಂಟು ಮಾಡುತ್ತಿದ್ದು, ಹೊಸ ಸಂಪರ್ಕಗಳು ಕಂಟ್ರಾಕ್ಟರ್‌ಗಳ ಮೂಲಕ ಬರಬೇಕೆಂದು ನಿಯಮ ಇದ್ದರೂ ಅದನ್ನು ಇಂಜಿನಿಯರ್‌ಗಳು ತಾವೇ 1000, 2000 ಪಡೆದುಕೊಂಡು ಅರ್ಜಿ ಸಲ್ಲಿಸುತ್ತಿದ್ದಾರೆ ಎನ್ನಲಾಗಿದೆ.
ಹೀಗೆ ಭ್ರಷ್ಟಾಚಾರ ಮತ್ತು ಅಕ್ರಮಗಳಿಂದ ಜಲಮಂಡಳಿಯು ನಾಗರಿಕರ ಸಂಸ್ಥೆಯಾಗಿ ಉಳಿಯದೇ, ದಂಧೆ ಮತ್ತು ವಸೂಲಿ ಮಾಡುವ ಧನ ಪಿಶಾಚಿಯಾಗಿ ಬೆಂಗಳೂರಿಗರನ್ನು ಕಾಡುತ್ತಿದೆ. ಹೀಗಾಗಿ ಈ ಎಲ್ಲಾ ಅಕ್ರಮಗಳ ವಿರುದ್ಧ ಶೀಘ್ರದಲ್ಲೇ KRS ಪಕ್ಷ ಬೃಹತ್ ಹೋರಾಟ ನಡೆಸಲು ಸಜ್ಜಾಗಿದೆ. ಇಂದು ನಡೆದ ಪತ್ರಿಕಾಗೋಷ್ಠಿಯಲ್ಲಿ ರಾಜ್ಯ ಪ್ರಧಾನ ಕಾರ್ಯದರ್ಶಿ ರಘುಪತಿ ಭಟ್, ರಾಜ್ಯ ಜಂಟಿ ಕಾರ್ಯದರ್ಶಿ ಎಲ್. ಜೀವನ್ ಹಾಗೂ ರಾಜ್ಯ ಸಂಘಟನಾ ಕಾರ್ಯದರ್ಶಿ ರಘು ನಂದನ್ ಉಪಸ್ಥಿತರಿದ್ದರು.
ಇದನ್ನೂ ಓದಿ : ಲಂಚಕ್ಕೆ ಬೇಡಿಕೆ – ಕೋಲಾರ ನಗರಸಭೆಯ ಆರ್‌ಐ & ಬಿಲ್ ಕಲೆಕ್ಟರ್ ‘ಲೋಕಾ’ ಬಲೆಗೆ!


















