ಬೆಂಗಳೂರು : ತರಕಾರಿ ಸಾಗಣೆ ರೀತಿಯಲ್ಲಿ ಗಾಂಜಾ ಕಳ್ಳಸಾಗಣೆ ಮಾಡುತ್ತಿದ್ದ ಆರೋಪಿಯನ್ನು ಸಿಸಿಬಿ ಪೊಲೀಸರು ಬಂಧಿಸಿರುವ ಘಟನೆ ಬೆಳಕಿಗೆ ಬಂದಿದೆ. ಆಂಧ್ರ ಪ್ರದೇಶದ ವಿಶಾಖಪಟ್ಟಣಂ (ವಿಜಾಗ್) ಸಮೀಪದ ಅರಕ್ಕು ಪ್ರದೇಶದಿಂದ ಗಾಂಜಾ ತರಲಾಗುತ್ತಿದ್ದು, ಒಂದು ಲಾರಿಯ ಕಂಟೇನರ್‌ನಲ್ಲಿ ಅಡಗಿಸಿ ಸಾಗಣೆ ಮಾಡಲಾಗುತ್ತಿತ್ತು ಎಂದು ಪೊಲೀಸರು ತಿಳಿಸಿದ್ದಾರೆ.
ಭಾನುವಾರ ಮಧ್ಯಾಹ್ನ ಖಚಿತ ಮಾಹಿತಿಯ ಮೇರೆಗೆ ದಾಳಿ ನಡೆಸಿದ ಸಿಸಿಬಿಯ ಮಾದಕ ದ್ರವ್ಯ ನಿಗ್ರಹ ದಳ, ನಾಯಂಡಹಳ್ಳಿ ಬಳಿ ಲಾರಿಯನ್ನು ಅಡ್ಡಗಟ್ಟಿ ಪರಿಶೀಲನೆ ನಡೆಸಿತು. ಈ ವೇಳೆ ಬರೋಬ್ಬರಿ 332 ಕೆ.ಜಿ. ಗಾಂಜಾ ಪತ್ತೆಯಾಗಿದೆ.
ರವಿ ಎಂಬ ಡ್ರೈವರ್ ಅನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲಾಗುತ್ತಿದೆ. ಈ ಗಾಂಜಾ ಸಾಗಣೆ ಬೆಂಗಳೂರು ಮೂಲಕ ಮೈಸೂರು ಹಾಗೂ ಮಳವಳ್ಳಿ ಕಡೆಗೆ ಸಾಗಿಸುತ್ತಿದ್ದುದಾಗಿ ತಿಳಿದುಬಂದಿದೆ.
ಪೊಲೀಸರು ಒಟ್ಟು 3 ಕೋಟಿ ರೂಪಾಯಿಗೂ ಹೆಚ್ಚು ಮೌಲ್ಯದ ಗಾಂಜಾವನ್ನು ವಶಪಡಿಸಿಕೊಂಡಿದ್ದು, ಸಾಗಣೆಗೆ ಬಳಸಿದ ಲಾರಿಯನ್ನೂ ಜಪ್ತಿ ಮಾಡಿದ್ದಾರೆ. ಈ ಕಾರ್ಯಾಚರಣೆ ಸಿಸಿಬಿಯ ಮಾದಕ ದ್ರವ್ಯ ನಿಗ್ರಹ ದಳದ ಮಹತ್ವದ ಸಾಧನೆ ಎಂದು ಪರಿಗಣಿಸಲಾಗಿದೆ. ಪ್ರಕರಣ ಸಂಬಂಧ ಇನ್ನಷ್ಟು ಆರೋಪಿಗಳ ಸಂಪರ್ಕ ಪತ್ತೆ ಹಚ್ಚಲು ಪೊಲೀಸರು ತನಿಖೆ ಮುಂದುವರಿಸಿದ್ದಾರೆ.
ಇದನ್ನೂ ಓದಿ : ಚಾಕೊಲೇಟ್ ಕವರ್‌ನಲ್ಲಿ ಡ್ರಗ್ ಡೀಲಿಂಗ್ ಮಾಡುತ್ತಿದ್ದ ಭೂಪ ಲಾಕ್!


















