ಬೆಂಗಳೂರು : ‘ದಿ ಹಂಡ್ರೆಡ್’ 2026ರ ಟೂರ್ನಿಗೆ ಪಾಕಿಸ್ತಾನದ ಸ್ಪಿನ್ನರ್ ಅಬ್ರಾರ್ ಅಹ್ಮದ್ ಅವರ ಆಯ್ಕೆಯು ಹಿರಿಯ ಆಟಗಾರರ ನಡುವಿನ ವಾಕ್ಸಮರಕ್ಕೆ ಕಾರಣವಾಗಿದೆ. ಸನ್‌ರೈಸರ್ಸ್ ಲೀಡ್ಸ್ ತಂಡವು ಅಬ್ರಾರ್ ಅಹ್ಮದ್ ಅವರನ್ನು ದೊಡ್ಡ ಮೊತ್ತಕ್ಕೆ ಖರೀದಿಸಿದ ನಡೆಯನ್ನು ಭಾರತದ ಬ್ಯಾಟಿಂಗ್ ದಿಗ್ಗಜ ಸುನಿಲ್ ಗವಾಸ್ಕರ್ ತೀವ್ರವಾಗಿ ಟೀಕಿಸಿದ್ದರು.
ಇದಕ್ಕೆ ಪ್ರತಿಯಾಗಿ ಪಾಕಿಸ್ತಾನ ಮೂಲದ ಇಂಗ್ಲೆಂಡ್ ಮಾಜಿ ಕ್ರಿಕೆಟಿಗ ಅಜೀಮ್ ರಫೀಕ್ ಅವರು ಗವಾಸ್ಕರ್ ಅವರ ಹೇಳಿಕೆಗಳನ್ನು “ಹಾಸ್ಯಾಸ್ಪದ” ಮತ್ತು “ಅಸಹ್ಯಕರ” ಎಂದು ಕರೆದು ಕಿಡಿಹೊತ್ತಿಸಿದ್ದಾರೆ. ತಮ್ಮ ಅಂಕಣದಲ್ಲಿ ಈ ಬಗ್ಗೆ ಬರೆದಿದ್ದ ಸುನಿಲ್ ಗವಾಸ್ಕರ್, ಐಪಿಎಲ್ ಮೂಲದ ಮಾಲೀಕತ್ವ ಹೊಂದಿರುವ ಸನ್‌ರೈಸರ್ಸ್ ಲೀಡ್ಸ್ ತಂಡವು ಪಾಕಿಸ್ತಾನಿ ಆಟಗಾರನನ್ನು ಖರೀದಿಸಿರುವುದನ್ನು ಪ್ರಶ್ನಿಸಿದ್ದರು. “ಪಾಕಿಸ್ತಾನಿ ಆಟಗಾರರಿಗೆ ನೀಡುವ ಸಂಭಾವನೆಯ ಒಂದು ಭಾಗ ತೆರಿಗೆಯ ರೂಪದಲ್ಲಿ ಅಲ್ಲಿನ ಸರ್ಕಾರಕ್ಕೆ ಹೋಗುತ್ತದೆ. ಈ ಹಣವನ್ನು ಭಾರತದ ವಿರುದ್ಧ ಶಸ್ತ್ರಾಸ್ತ್ರ ಖರೀದಿಸಲು ಬಳಸುವ ಸಾಧ್ಯತೆಯಿರುತ್ತದೆ. ವಿದೇಶಿ ಅಂಗಸಂಸ್ಥೆಗಳ ಮೂಲಕ ಹಣ ಪಾವತಿಸಿದರೂ ಇದು ಅನ್ವಯಿಸುತ್ತದೆ. ನಮಗೆ ಟೂರ್ನಿ ಗೆಲ್ಲುವುದು ಮುಖ್ಯವೋ ಅಥವಾ ಭಾರತೀಯರ ಜೀವ ಮುಖ್ಯವೋ?” ಎಂದು ಗವಾಸ್ಕರ್ ಕಟುವಾಗಿ ಪ್ರಶ್ನಿಸಿದ್ದರು. ಅಲ್ಲದೆ, ತಂಡದ ಮುಖ್ಯ ತರಬೇತುದಾರ ಡೇನಿಯಲ್ ವೆಟ್ಟೋರಿ ನ್ಯೂಜಿಲೆಂಡ್‌ನವರಾದ್ದರಿಂದ ಅವರಿಗೆ ಈ ಸೂಕ್ಷ್ಮತೆ ಅರ್ಥವಾಗದಿರಬಹುದು, ಆದರೆ ಮಾಲೀಕರು ಜವಾಬ್ದಾರಿಯಿಂದ ವರ್ತಿಸಬೇಕಿತ್ತು ಎಂದು ಅವರು ಹೇಳಿದ್ದರು.
ತಾರತಮ್ಯ ಎಂದು ಟೀಕೆ
ಅಬ್ರಾರ್ ಅಹ್ಮದ್ ಅವರನ್ನು ಸುಮಾರು 2.34 ಕೋಟಿ ರೂಪಾಯಿ (190,000 GBP) ಮೊತ್ತಕ್ಕೆ ಹರಾಜಿನಲ್ಲಿ ಖರೀದಿಸಲಾಗಿದೆ. ಈ ಬೆಳವಣಿಗೆಯು ಭಾರತದಲ್ಲಿ ವ್ಯಾಪಕ ಆಕ್ರೋಶಕ್ಕೆ ಕಾರಣವಾಗಿದ್ದರೆ, ಇಂಗ್ಲೆಂಡ್ ಕ್ರಿಕೆಟ್ ಮಂಡಳಿ (ECB) ಮಾತ್ರ ತಾರತಮ್ಯ ವಿರೋಧಿ ನಿಯಮಗಳನ್ನು ಪಾಲಿಸುವಂತೆ ತಂಡಗಳಿಗೆ ಈಗಾಗಲೇ ಎಚ್ಚರಿಕೆ ನೀಡಿದೆ.
ಅಜೀಮ್ ರಫೀಕ್ ಅವರ ಪ್ರತಿಕ್ರಿಯೆ
ಗವಾಸ್ಕರ್ ಅವರ ಈ ನಿಲುವನ್ನು ಸಾಮಾಜಿಕ ಜಾಲತಾಣಗಳಲ್ಲಿ ಖಂಡಿಸಿರುವ ಅಜೀಮ್ ರಫೀಕ್, ಮೈದಾನದ ಸಾಧನೆಗಳು ಇಂತಹ ವಿವಾದಾತ್ಮಕ ಹೇಳಿಕೆಗಳನ್ನು ಸಮರ್ಥಿಸಿಕೊಳ್ಳುವುದಿಲ್ಲ ಎಂದು ಹೇಳಿದ್ದಾರೆ. ಗವಾಸ್ಕರ್ ಅವರು ಇತರ ಸಂದರ್ಭಗಳಲ್ಲಿ ಇಂತಹದ್ದೇ ಕಠಿಣ ನಿಲುವು ತಳೆದಿದ್ದಾರೆಯೇ ಎಂದು ಪ್ರಶ್ನಿಸಿರುವ ರಫೀಕ್, ಅಬ್ರಾರ್ ಆಯ್ಕೆಯ ಬಗ್ಗೆ ನಡೆಯುತ್ತಿರುವ ಚರ್ಚೆಗೆ ಹೊಸ ಆಯಾಮ ನೀಡಿದ್ದಾರೆ.
ಯಾರು ಈ ಅಜೀಮ್ ರಫೀಕ್?
1991ರಲ್ಲಿ ಪಾಕಿಸ್ತಾನದ ಕರಾಚಿಯಲ್ಲಿ ಜನಿಸಿದ ಅಜೀಮ್ ರಫೀಕ್, ನಂತರ ಇಂಗ್ಲೆಂಡ್‌ಗೆ ವಲಸೆ ಹೋಗಿ ಅಲ್ಲಿನ ಯುವ ಕ್ರಿಕೆಟ್ ತಂಡದ ನಾಯಕರಾಗಿದ್ದರು. ಇಂಗ್ಲೆಂಡ್‌ನ ಯಾರ್ಕ್‌ಶೈರ್ ಕೌಂಟಿ ಕ್ರಿಕೆಟ್ ಕ್ಲಬ್‌ನಲ್ಲಿ ತಾವು ಎದುರಿಸಿದ ಜನಾಂಗೀಯ ತಾರತಮ್ಯದ (Racism) ಬಗ್ಗೆ ಧ್ವನಿಯೆತ್ತಿ ಅವರು ಜಾಗತಿಕ ಮಟ್ಟದಲ್ಲಿ ಸುದ್ದಿಯಾಗಿದ್ದರು. ಅವರ ಹೋರಾಟದ ಫಲವಾಗಿ ಯಾರ್ಕ್‌ಶೈರ್ ಕ್ಲಬ್‌ನಲ್ಲಿ ದೊಡ್ಡ ಮಟ್ಟದ ಆಡಳಿತಾತ್ಮಕ ಬದಲಾವಣೆಗಳು ನಡೆದಿದ್ದವು. ಬ್ರಿಟಿಷ್ ಸಂಸತ್ತಿನ ಸಮಿತಿಯ ಮುಂದೆಯೂ ಅವರು ಸಾಕ್ಷ್ಯ ನುಡಿದು ಕ್ರಿಕೆಟ್ ವ್ಯವಸ್ಥೆಯಲ್ಲಿ ಸುಧಾರಣೆಗೆ ಆಗ್ರಹಿಸಿದ್ದರು.
ಇದನ್ನೂ ಓದಿ : ಬೆಂಗಳೂರಿನ ಐಐಎಸ್ಸಿಯಲ್ಲಿ 2 ಮೆಸ್ ಸೂಪರ್ ವೈಸರ್ ಹುದ್ದೆಗಳ ನೇಮಕಾತಿ.. 35 ಸಾವಿರ ರೂ. ಸಂಬಳ



















