ಚಿಕ್ಕಮಗಳೂರು : 2019ರಲ್ಲಿ ರಾಜ್ಯವನ್ನೇ ಬೆಚ್ಚಿಬೀಳಿಸಿದ್ದ ಭೀಕರ ಅವಳಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿ ಗೋವಿಂದಪ್ಪನಿಗೆ ಚಿಕ್ಕಮಗಳೂರು ಜಿಲ್ಲಾ ಪ್ರಧಾನ ಮತ್ತು ಸತ್ರ ನ್ಯಾಯಾಲಯವು ಮರಣದಂಡನೆ ವಿಧಿಸಿ ಐತಿಹಾಸಿಕ ತೀರ್ಪು ನೀಡಿದೆ.
2019ರಲ್ಲಿ ಜಿಲ್ಲೆಯ ಎನ್.ಆರ್.ಪುರದ ಕುಸುಬೂರಿನಲ್ಲಿ ಈ ಅಮಾನವೀಯ ಕೃತ್ಯ ನಡೆದಿತ್ತು. ಅಕ್ರಮ ಸಂಬಂಧದ ಹಿನ್ನೆಲೆಯಲ್ಲಿ ಆರೋಪಿ ಗೋವಿಂದಪ್ಪ ಎಂಬಾತ, ದಂಪತಿಯು ಮಲಗಿದ್ದ ಜಾಗಕ್ಕೇ ನುಗ್ಗಿ ಮಚ್ಚಿನಿಂದ ಮನಬಂದಂತೆ ಕೊಚ್ಚಿ ಕೊಲೆ ಮಾಡಿದ್ದ. ಅತ್ಯಂತ ದಾರುಣವೆಂದರೆ, ದಂಪತಿಯ 8 ವರ್ಷದ ಪುಟ್ಟ ಮಗನ ಕಣ್ಣೆದುರೇ ಈ ಭೀಕರ ಹತ್ಯೆ ನಡೆದಿತ್ತು. ಹೆತ್ತವರು ರಕ್ತದ ಮಡುವಿನಲ್ಲಿ ಬಿದ್ದಿದ್ದನ್ನು ಕಂಡು ಆ ಬಾಲಕ ದಿಗ್ಭ್ರಾಂತನಾಗಿದ್ದ.
ಪ್ರಕರಣದ ಸುದೀರ್ಘ ವಿಚಾರಣೆ ನಡೆಸಿದ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ನ್ಯಾಯಾಧೀಶೆ ರಾಜೇಶ್ವರಿ ಎನ್. ಹೆಗಡೆ ಅವರು ಇಂದು ತೀರ್ಪು ಪ್ರಕಟಿಸಿದ್ದಾರೆ.
ಐಪಿಸಿ ಸೆಕ್ಷನ್ 302 (ಕೊಲೆ) ಈ ವಿಭಾಗದ ಅಡಿಯಲ್ಲಿ ಆರೋಪಿಗೆ ಗಲ್ಲು ಶಿಕ್ಷೆ ಮತ್ತು 20 ಸಾವಿರ ರೂಪಾಯಿ ದಂಡ ವಿಧಿಸಲಾಗಿದೆ. ಐಪಿಸಿ ಸೆಕ್ಷನ್ 448 (ಮನೆಗೆ ಅಕ್ರಮ ಪ್ರವೇಶ) ಈ ಆರೋಪದಡಿ 1 ವರ್ಷ ಜೈಲು ಶಿಕ್ಷೆ ವಿಧಿಸಲಾಗಿದೆ. ಸರ್ಕಾರದ ಪರವಾಗಿ ಅಭಿಯೋಜಕಿ ಪಿ. ವೀಣಾ ಅವರು ಪ್ರಬಲವಾಗಿ ವಾದ ಮಂಡಿಸಿದ್ದರು. ಅಕ್ರಮ ಸಂಬಂಧಕ್ಕಾಗಿ ದಂಪತಿಯನ್ನು ಕ್ರೂರವಾಗಿ ಕೊಂದಿದ್ದ ಆರೋಪಿಗೆ ಗಲ್ಲು ಶಿಕ್ಷೆಯಾಗುವ ಮೂಲಕ ಸಂತ್ರಸ್ತ ಕುಟುಂಬಕ್ಕೆ ನ್ಯಾಯ ಸಿಕ್ಕಂತಾಗಿದೆ.
ಇದನ್ನೂ ಓದಿ : ತಂಬಾಕು ಬೆಳೆಗಾರರ ನೆರವಿಗೆ ನಿಂತ ಕೇಂದ್ರ ಸರ್ಕಾರ!



















