ಬೆಂಗಳೂರು : ಈಗಿನ ಡಿಜಿಟಲ್ ಯುಗದಲ್ಲಿ ಹೆಚ್ಚಿನ ಜನ ಎಟಿಎಂ ಕಾರ್ಡ್ ಇಲ್ಲದೆಯೇ ಕೇವಲ ಕ್ಯೂಆರ್ (QR) ಕೋಡ್ ಸ್ಕ್ಯಾನ್ ಮಾಡುವ ಮೂಲಕ ಯುಪಿಐ (UPI) ಬಳಸಿ ಹಣ ವಿತ್ ಡ್ರಾ ಮಾಡುತ್ತಾರೆ. ಇದುವರೆಗೆ ಇದಕ್ಕೆ ಯಾವುದೇ ಪ್ರತ್ಯೇಕ ಮಿತಿ ಇರಲಿಲ್ಲ. ಆದರೆ, ದೇಶದ ಪ್ರಮುಖ ಖಾಸಗಿ ವಲಯದ ಬ್ಯಾಂಕ್ ಆದ ಎಚ್ ಡಿಎಫ್ ಸಿ (HDFC), ಏಪ್ರಿಲ್ 1, 2026 ರಿಂದ ಜಾರಿಗೆ ಬರುವಂತೆ ಹೊಸ ನಿಯಮಗಳನ್ನು ಘೋಷಿಸಿದೆ.
ಬ್ಯಾಂಕ್ ಪ್ರಕಟಣೆಯ ಪ್ರಕಾರ, ಇನ್ನುಮುಂದೆ ಯುಪಿಐ ಮೂಲಕ ಎಟಿಎಂನಲ್ಲಿ ಹಣ ಪಡೆಯುವುದು ಕೂಡ ನಿಮ್ಮ ಮಾಸಿಕ ಉಚಿತ ವಹಿವಾಟಿನ ಮಿತಿಗೆ (Monthly Free Limit) ಒಳಪಡಲಿದೆ. ಅಂದರೆ, ಎಟಿಎಂ ಕಾರ್ಡ್ ಬಳಕೆ ಮತ್ತು ಯುಪಿಐ ಬಳಕೆ ಎರಡನ್ನೂ ಒಂದೇ ಎಂದು ಪರಿಗಣಿಸಲಾಗುತ್ತದೆ.
ಉಚಿತ ಮಿತಿ ಮತ್ತು ಶುಲ್ಕದ ವಿವರಗಳು:
ಎಚ್ ಡಿಎಫ್ ಸಿ ಬ್ಯಾಂಕ್ ನ ಉಳಿತಾಯ ಮತ್ತು ವೇತನ ಖಾತೆದಾರರಿಗೆ ಪ್ರಸ್ತುತ ಇರುವ ಉಚಿತ ಮಿತಿಗಳು ಈ ಕೆಳಗಿನಂತಿವೆ:
ಎಚ್ ಡಿಎಫ್ ಸಿ ಎಟಿಎಂಗಳಲ್ಲಿ: ತಿಂಗಳಿಗೆ 5 ಬಾರಿ ಉಚಿತ ವಹಿವಾಟು.
ಇತರೆ ಬ್ಯಾಂಕ್ ಎಟಿಎಂಗಳು (ಮೆಟ್ರೋ ನಗರಗಳು): ಚೆನ್ನೈ, ಮುಂಬೈ, ಬೆಂಗಳೂರಿನಂತಹ ನಗರಗಳಲ್ಲಿ 3 ಬಾರಿ ಉಚಿತ.
ಇತರೆ ಬ್ಯಾಂಕ್ ಎಟಿಎಂಗಳು (ಮೆಟ್ರೋಯೇತರ ನಗರಗಳು): ಇತರ ನಗರಗಳಲ್ಲಿ 5 ಬಾರಿ ಉಚಿತ.
ಈ ಮಿತಿ ಮೀರಿದ ನಂತರ ಇತರೆ ಬ್ಯಾಂಕ್ ಗಳ ಎಟಿಎಂನಲ್ಲಿ ಹಣ ಹಿಂಪಡೆದರೆ, ಪ್ರತಿ ವಹಿವಾಟಿಗೆ 23 ರೂ. + ತೆರಿಗೆ ಅನ್ವಯವಾಗುತ್ತದೆ. ಬ್ಯಾಲೆನ್ಸ್ ಚೆಕ್ ಮಾಡುವುದು ಸೇರಿ ಯಾವುದೇ ಹಣಕಾಸೇತರ ವಹಿವಾಟುಗಳಿಗೂ ಇದೇ ಶುಲ್ಕ ಅನ್ವಯಿಸಲಿದೆ.
ವಿದೇಶಿ ಪ್ರಯಾಣಿಕರಿಗೆ ಸೂಚನೆ
ವಿದೇಶಗಳಲ್ಲಿ ಎಚ್ ಡಿಎಫ್ ಸಿ ಡೆಬಿಟ್ ಕಾರ್ಡ್ ಬಳಸುವಾಗ ಹೆಚ್ಚುವರಿ ಶುಲ್ಕ ಪಾವತಿಸಬೇಕಾಗುತ್ತದೆ. ಸಾಮಾನ್ಯ ಖಾತೆದಾರರು ಪ್ರತಿ ಬಾರಿ ಹಣ ಹಿಂಪಡೆಯಲು 125 ರೂ. ಮತ್ತು ಬ್ಯಾಲೆನ್ಸ್ ಚೆಕ್ ಮಾಡಲು 25 ರೂ. ಪಾವತಿಸಬೇಕು. ಇದರೊಂದಿಗೆ 3.5% ರಷ್ಟು ವಿದೇಶಿ ವಿನಿಮಯ ಶುಲ್ಕ (Cross-currency markup) ವಿಧಿಸಲಾಗುತ್ತದೆ. ಆದರೆ, ‘ಇನ್ಫಿನಿಟಿ’ (Infiniti) ಕಾರ್ಡ್ ಹೊಂದಿರುವವರಿಗೆ ಈ ಶುಲ್ಕವನ್ನು 0.99% ಕ್ಕೆ ಇಳಿಸಲಾಗಿದೆ.
ಇದನ್ನೂ ಓದಿ : ಟಿ20 ವಿಶ್ವಕಪ್ ಸೆಮಿಫೈನಲ್ ಕದನ | ಟಾಸ್ ಗೆದ್ದ ಇಂಗ್ಲೆಂಡ್.. ಟೀಂ ಇಂಡಿಯಾ ಬ್ಯಾಟಿಂಗ್!


















