ಕೋಲ್ಕತ್ತಾ: ಇಲ್ಲಿನ ಈಡನ್ ಗಾರ್ಡನ್ಸ್‌ನಲ್ಲಿ ಮಾರ್ಚ್ 4 ರಂದು ನಡೆಯಲಿರುವ ದಕ್ಷಿಣ ಆಫ್ರಿಕಾ ಮತ್ತು ನ್ಯೂಜಿಲೆಂಡ್ ನಡುವಿನ ಮೊದಲ ಸೆಮಿಫೈನಲ್ ಪಂದ್ಯಕ್ಕೆ ಕ್ಷಣಗಣನೆ ಆರಂಭವಾಗಿದೆ. ಈ ಮಹತ್ವದ ಪಂದ್ಯಕ್ಕೂ ಮುನ್ನ ನ್ಯೂಜಿಲೆಂಡ್ ತಂಡಕ್ಕೆ ವೇಗಿ ಮ್ಯಾಟ್ ಹೆನ್ರಿ ಅವರ ಲಭ್ಯತೆಯ ಬಗ್ಗೆ ದೊಡ್ಡ ತಲೆನೋವು ಶುರುವಾಗಿದೆ. ಪಂದ್ಯಕ್ಕೆ ಕೆಲವೇ ಗಂಟೆಗಳ ಮೊದಲು ಅವರು ತಂಡವನ್ನು ಸೇರಿಕೊಳ್ಳಲಿರುವುದು ಕಿವೀಸ್ ಪಡೆಯಲ್ಲಿ ಆತಂಕ ಮೂಡಿಸಿದೆ.
ಮ್ಯಾಟ್ ಹೆನ್ರಿ ತಮ್ಮ ಮಗುವಿನ ಜನನದ ಹಿನ್ನೆಲೆಯಲ್ಲಿ ನ್ಯೂಜಿಲೆಂಡ್‌ಗೆ ತೆರಳಿದ್ದರು. ಪಂದ್ಯದ ಹಿಂದಿನ ರಾತ್ರಿ ಅಂದರೆ ಮಾರ್ಚ್ 3 ರಂದು ಅವರು ಭಾರತಕ್ಕೆ ಬಂದಿಳಿಯುವ ನಿರೀಕ್ಷೆಯಿದೆ. ಈ ಕುರಿತು ಪಂದ್ಯ ಪೂರ್ವ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ನಾಯಕ ಮಿಚೆಲ್ ಸ್ಯಾಂಟ್ನರ್, “ಮ್ಯಾಟ್ ಸದ್ಯ ವಿಮಾನದಲ್ಲಿದ್ದಾರೆ, ಅವರು ಇಂದು ರಾತ್ರಿ ತಲುಪಲಿದ್ದಾರೆ. ನ್ಯೂಜಿಲೆಂಡ್‌ನಿಂದ ಇಲ್ಲಿಗೆ ಪ್ರಯಾಣವು ತುಂಬಾ ಸುದೀರ್ಘವಾಗಿದೆ. ಅವರು ನಾಳೆ ಬೆಳಿಗ್ಗೆ ಮೈದಾನಕ್ಕೆ ಬಂದು ಅಭ್ಯಾಸ ನಡೆಸಲಿದ್ದಾರೆ, ಆ ಸಮಯದಲ್ಲಿ ಅವರ ಫಿಟ್ನೆಸ್ ಮತ್ತು ಆರೋಗ್ಯವನ್ನು ಗಮನಿಸಿ ಅಂತಿಮ ನಿರ್ಧಾರ ತೆಗೆದುಕೊಳ್ಳುತ್ತೇವೆ,” ಎಂದು ತಿಳಿಸಿದ್ದಾರೆ.
ಅದ್ಭುತ ಫಾರ್ಮ್
34 ವರ್ಷದ ಹೆನ್ರಿ ಈ ಬಾರಿಯ ವಿಶ್ವಕಪ್‌ನಲ್ಲಿ ಅದ್ಭುತ ಫಾರ್ಮ್‌ನಲ್ಲಿದ್ದಾರೆ. ಫೆಬ್ರವರಿ 25 ರಂದು ಶ್ರೀಲಂಕಾ ವಿರುದ್ಧ ನಡೆದ ಸೂಪರ್-8 ಪಂದ್ಯದಲ್ಲಿ ಕೇವಲ 2 ಓವರ್‌ಗಳಲ್ಲಿ ಒಂದು ಮೇಡನ್ ಸಹಿತ 3 ರನ್ ನೀಡಿ 2 ವಿಕೆಟ್ ಕಬಳಿಸಿದ್ದರು. ಹಾಗೆಯೇ ಇಂಗ್ಲೆಂಡ್ ವಿರುದ್ಧದ ಪಂದ್ಯದಲ್ಲೂ ಫಿಲ್ ಸಾಲ್ಟ್ ವಿಕೆಟ್ ಪಡೆಯುವ ಮೂಲಕ ಮಿಂಚಿದ್ದರು. ಒಂದು ವೇಳೆ ಸುದೀರ್ಘ ಪ್ರಯಾಣದ ಆಯಾಸದಿಂದ ಅವರು ಪಂದ್ಯಕ್ಕೆ ಲಭ್ಯವಾಗದಿದ್ದರೆ, ಅದು ನ್ಯೂಜಿಲೆಂಡ್ ತಂಡಕ್ಕೆ ದೊಡ್ಡ ಹಿನ್ನಡೆಯಾಗಲಿದೆ.
ಈ ಟೂರ್ನಿಯ ಗುಂಪು ಹಂತದ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ನ್ಯೂಜಿಲೆಂಡ್ ಈಗಾಗಲೇ ಸೋಲನುಭವಿಸಿದೆ. ಅಹಮದಾಬಾದ್‌ನಲ್ಲಿ ನಡೆದಿದ್ದ ಆ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾದ ವೇಗಿ ಮಾರ್ಕೊ ಯಾನ್ಸೆನ್ ಅವರ ದಾಳಿಗೆ ಕಿವೀಸ್ ಬ್ಯಾಟರ್‌ಗಳು ತತ್ತರಿಸಿದ್ದರು. ಅಂದು ನ್ಯೂಜಿಲೆಂಡ್ ನೀಡಿದ್ದ 175 ರನ್‌ಗಳ ಗುರಿಯನ್ನು ಹರಿಣಗಳ ಪಡೆ ಇನ್ನು 17 ಎಸೆತಗಳು ಬಾಕಿ ಇರುವಂತೆಯೇ ತಲುಪಿತ್ತು. ಆ ಪಂದ್ಯದಲ್ಲಿ ಮ್ಯಾಟ್ ಹೆನ್ರಿ ಮತ್ತು ಜಾಕೋಬ್ ಡಫಿ ದುಬಾರಿಯಾಗಿದ್ದರು.
ಇದೀಗ ಸೇಡು ತೀರಿಸಿಕೊಳ್ಳುವ ಹಂಬಲದಲ್ಲಿರುವ ನ್ಯೂಜಿಲೆಂಡ್‌ಗೆ ಹೆನ್ರಿ ಅವರ ಅನುಭವದ ಅಗತ್ಯವಿದೆ. ಆದರೆ, ಜೆಟ್ ಲ್ಯಾಗ್ ಮತ್ತು ದೈಹಿಕ ದಣಿವಿನ ನಡುವೆ ಅವರು ಕಣಕ್ಕಿಳಿಯುತ್ತಾರೆಯೇ ಅಥವಾ ಕಿವೀಸ್ ಮ್ಯಾನೇಜ್‌ಮೆಂಟ್ ಪರ್ಯಾಯ ಬೌಲರ್‌ನತ್ತ ಮುಖ ಮಾಡುತ್ತದೆಯೇ ಎಂಬುದು ಪಂದ್ಯದ ದಿನವೇ ನಿರ್ಧಾರವಾಗಲಿದೆ.
ಇದನ್ನೂ ಓದಿ : ಡೇಲ್ ಸ್ಟೇನ್ ಅಲ್ಲ, ಬುಮ್ರಾ ನನ್ನ ಸ್ಫೂರ್ತಿ : ಸೆಮಿಫೈನಲ್ ಪಂದ್ಯಕ್ಕೂ ಮುನ್ನ ಮಾರ್ಕೊ ಜೆನ್ಸನ್ ನೀಡಿದ ಅಚ್ಚರಿಯ ಹೇಳಿಕೆ



















