ಬೆಂಗಳೂರು : ಅಮೆರಿಕ ಹಾಗೂ ಇಸ್ರೇಲ್ ಸೇನೆಗಳು ಇರಾನ್ ಮೇಲಿನ ಸೇನಾ ಕಾರ್ಯಾಚರಣೆಯನ್ನ ತೀವ್ರಗೊಳಿಸಿದ್ದು, ಹಲವು ತಾಣಗಳನ್ನು ಗುರಿಯಾಗಿಸಿ ಬಾಂಬ್ ಹಾಗೂ ಕ್ಷಿಪಣಿ ದಾಳಿ ನಡೆಸಿವೆ. ಇರಾನ್ ಕೂಡಾ ಪ್ರತೀಕಾರದ ದಾಳಿ ಮುಂದುವರಿಸಿರುವುದರಿಂದ ಪಶ್ಚಿಮ ಏಷ್ಯಾದಲ್ಲಿ ಉದ್ವಿಗ್ನತೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ.
ಮಧ್ಯಪ್ರಾಚ್ಯದಲ್ಲಿ ಯುದ್ದ ನಡೆಯುತ್ತಿರುವ ಮಧ್ಯೆ ಕರ್ನಾಟಕದಲ್ಲಿ ಕುಕ್ಕುಟೋದ್ಯಮಕ್ಕೆ ಭಾರೀ ಬಿಸಿ ತಟ್ಟಿದೆ. ಹೌದು.. ಯುದ್ದ ಆರಂಭವಾದ ಮೂರ್ನಾಲ್ಕು ದಿನದಲ್ಲೇ ಕುಕ್ಕುಟೋದ್ಯಮಕ್ಕೆ ಭಾರೀ ಹೊಡೆತ ಬಿದ್ದಿದ್ದು, ಲಕ್ಷಾಂತರ ಮೊಟ್ಟೆಗಳು ರಫ್ತಾಗದೇ ರಾಜ್ಯದಲ್ಲೇ ಉಳಿದಿವೆ.
ವಿಮಾನಗಳ ಹಾರಾಟ, ಹಡಗು ಸಂಚಾರ ಸ್ಥಗಿತವಾದ ಕಾರಣ ಮೊಟ್ಟೆಗಳು ರಫ್ತಾಗದೆ ಉಳಿದುಕೊಂಡಿವೆ. ದಕ್ಷಿಣ ಭಾರತದಿಂದಲೇ 80 ಲಕ್ಷ ಮೊಟ್ಟೆಗಳು ಮಧ್ಯಪ್ರಾಚ್ಯಕ್ಕೆ ರಫ್ತಾಗುತ್ತಿದ್ದವು. ಕರ್ನಾಟಕದಿಂದಲೂ ಸರಿಸುಮಾರು 15-20 ಲಕ್ಷ ಮೊಟ್ಟೆ ರಫ್ತಾಗುತ್ತಿತ್ತು.
ಬಳ್ಳಾರಿ, ಮೈಸೂರು, ಮಂಡ್ಯ, ದಾವಣಗೆರೆ ಸೇರಿದಂತೆ ಅನೇಕ ಕಡೆಯಿಂದ ಮೊಟ್ಟೆಗಳನ್ನು ರಫ್ತು ಮಾಡಲಾಗುತ್ತಿತ್ತು. ಆದ್ರೆ, ಯುದ್ದದ ಕಾರಣ ಫೆಬ್ರವರಿ 27ರಿಂದ ಮೊಟ್ಟೆಗಳ ರಫ್ತು ಸಂಪೂರ್ಣ ಸ್ಥಗಿತವಾಗಿದೆ. ಲಕ್ಷಾಂತರ ಮೊಟ್ಟೆಗಳು ಕರ್ನಾಟಕದಲ್ಲೇ ಉಳಿದಿದ್ದು, ಕುಕ್ಕುಟೋದ್ಯಮಕ್ಕೆ ಕೋಟ್ಯಾಂತರ ರೂಪಾಯಿ ಲಾಸ್ ಆಗಿದೆ.
ಇದನ್ನೂ ಓದಿ : ಹೊಸ ಅವತಾರದಲ್ಲಿ ಬರಲು ಸಜ್ಜಾದ ಹ್ಯುಂಡೈ i20.. ಒಳಾಂಗಣ ವಿನ್ಯಾಸ ವೈರಲ್!



















