ದೊಡ್ಡಬಳ್ಳಾಪುರ : ಕಲ್ಲಂಗಡಿ ಸಾಗಿಸುತ್ತಿದ್ದ ಕ್ಯಾಂಟರ್ ಚಾಲಕನ ನಿಯಂತ್ರಣ ತಪ್ಪಿ ಪಲ್ಟಿಯಾದ ಘಟನೆ ದೊಡ್ಡಬಳ್ಳಾಪುರ ಹೊರ ವಲಯದ ಮೇಷ್ಟ್ರು ಮನೆ ಸರ್ಕಲ್ ಬಳಿ ಸಂಭವಿಸಿದೆ.
ಚೆನ್ನೈನಿಂದ ದಾವಣಗೆರೆಯ ಹೊನ್ನಾಳಿಗೆ ಕಲ್ಲಂಗಡಿ ಸಾಗಿಸುತ್ತಿದ್ದ ಕ್ಯಾಂಟರ್, ಇದ್ದಕ್ಕಿದ್ದಂತೆ ನಿಯಂತ್ರಣ ಕಳೆದುಕೊಂಡು ಹೆದ್ದಾರಿಯಲ್ಲಿದ್ದ ಮೂರು ಡಿವೈಡರ್‌ಗಳನ್ನು ದಾಟಿ ಪಲ್ಟಿಯಾಗಿದೆ. ಅಪಘಾತದ ತೀವ್ರತೆಗೆ ಕ್ಯಾಂಟರ್‌ನಲ್ಲಿದ್ದ ಸಾವಿರಾರು ಕಲ್ಲಂಗಡಿಗಳು ರಸ್ತೆಯ ಮೇಲೆ ಹಾಗೂ ಸುತ್ತಮುತ್ತ ಚಲ್ಲಾಪಿಲ್ಲಿಯಾಗಿ ಬಿದ್ದಿವೆ.
ವಿಷಯ ತಿಳಿಯುತ್ತಿದ್ದಂತೆ ಸ್ಥಳಕ್ಕಾಗಮಿಸಿದ ಸ್ಥಳೀಯರು, ರಸ್ತೆಯ ಮೇಲೆ ಚೆಲ್ಲಿದ್ದ ಕಲ್ಲಂಗಡಿ ಹಣ್ಣುಗಳನ್ನು ಹೊತ್ತೊಯ್ದಿದ್ದಾರೆ. ಕೆಲವರು ತಮ್ಮ ವಾಹನಗಳಲ್ಲಿ ಕಲ್ಲಂಗಡಿಗಳನ್ನು ತುಂಬಿಕೊಂಡು ಹೋದ ದೃಶ್ಯ ಕಂಡುಬಂದಿದೆ.
ಘಟನೆಯ ಬಗ್ಗೆ ಮಾಹಿತಿ ಪಡೆದ ದೊಡ್ಡಬಳ್ಳಾಪುರ ಗ್ರಾಮಾಂತರ ಪೊಲೀಸರು ತಕ್ಷಣವೇ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಈ ಘಟನೆಯಲ್ಲಿ ಕ್ಯಾಂಟರ್ ಚಾಲಕ ವೇದಮೂರ್ತಿ (22) ಪ್ರಾಣಾಪಾಯದಿಂದ ಪಾರಾಗಿದ್ದಾನೆ. ಸಣ್ಣಪುಟ್ಟ ಗಾಯಗಳಾಗಿದ್ದು, ಚಾಲಕ ಚೇತರಿಸಿಕೊಳ್ಳುತ್ತಿದ್ದಾನೆ.
ಇದನ್ನೂ ಓದಿ : ಎಕ್ಸಾಮ್ ಭಯಕ್ಕೆ ಮನೆ ಬಿಟ್ಟು ಹೋದ ವಿದ್ಯಾರ್ಥಿನಿಯರು!?



















