ಹಾವೇರಿ : ಈಜುಕೊಳದಲ್ಲಿ ಈಜಲು ತೆರಳಿದ್ದ ಯುವಕನೊಬ್ಬ ದುರಂತವಾಗಿ ಮುಳುಗಿ ಸಾವನ್ನಪ್ಪಿದ ಘಟನೆ ಬ್ಯಾಡಗಿ ತಾಲೂಕಿನ ಕಾಕೋಳ ಗ್ರಾಮದಲ್ಲಿ ನಡೆದಿದೆ.
ಡಕಣಾಚಾರಿ ನಾಗರಾಜ್ ಬಡಿಗೇರ್ (23) ಮೃತ ಯುವಕನಾಗಿದ್ದು, ಗೆಳೆಯರೊಂದಿಗೆ ಕಾಕೋಳ ರಸ್ತೆಯಲ್ಲಿರುವ ಮಹಾಕೋಟೇಶ್ವರ ಈಜುಕೊಳಕ್ಕೆ ಸ್ವಿಮ್ಮಿಂಗ್‌ಗೆ ತೆರಳಿದ್ದನು.
ಮಾಹಿತಿಯ ಪ್ರಕಾರ, ನಾಗರಾಜ್ ಮೊದಲು ಸ್ನೇಹಿತರೊಂದಿಗೆ ಸಾಮಾನ್ಯವಾಗಿ ಈಜಾಡಿದ್ದಾನೆ. ನಂತರ ತಲೆ ಕೆಳಗೆ ಮಾಡಿ ಡೈವ್ ಹೊಡೆದಿದ್ದಾನೆ. ಆದರೆ ಡೈವ್ ಹೊಡೆದ ಬಳಿಕ ಮೇಲೇಳದೇ ನೀರಿನಲ್ಲೇ ಮುಳುಗಿದ್ದಾನೆ. ಪಕ್ಕದಲ್ಲೇ ಸ್ನೇಹಿತರು ಆಟವಾಡುತ್ತಿದ್ದರೂ, ಈ ಘಟನೆ ಅವರ ಗಮನಕ್ಕೆ ಬಂದಿಲ್ಲ ಎನ್ನಲಾಗಿದೆ.
ಸ್ವಲ್ಪ ಸಮಯದ ಬಳಿಕ ದಡದಲ್ಲಿದ್ದ ಮತ್ತೋರ್ವ ವ್ಯಕ್ತಿ ಅನುಮಾನಗೊಂಡು ನೀರಿಗೆ ಇಳಿದು ನಾಗರಾಜ್ ಅವರನ್ನು ಮೇಲೆತ್ತಿ ದಡಕ್ಕೆ ತಂದಿದ್ದಾರೆ. ಆದರೆ ಅಷ್ಟರಲ್ಲಾಗಲೇ ಅವರು ನೀರು ಕುಡಿದು ಪ್ರಾಣ ಕಳೆದುಕೊಂಡಿರುವುದು ತಿಳಿದುಬಂದಿದೆ.
ಘಟನೆ ಸಂಬಂಧ ಸ್ಥಳೀಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರಿದಿದೆ. ಯುವಕನ ಅಕಾಲಿಕ ಸಾವಿನಿಂದ ಕುಟುಂಬಸ್ಥರು ಹಾಗೂ ಗ್ರಾಮಸ್ಥರಲ್ಲಿ ದುಃಖದ ವಾತಾವರಣ ಆವರಿಸಿದೆ.
ಇದನ್ನೂ ಓದಿ : ಸಂಡೂರಿನಲ್ಲಿ ಮತ್ತೆ ಗಣಿ ವಿಸ್ತರಣೆ ಭೀತಿ | ಸುಪ್ರೀಂ ಕೋರ್ಟ್ ಆದೇಶ ಉಲ್ಲಂಘನೆ?



















