ಮುಂಬೈ: ಕಾರ್ಖಾನೆಯೊಂದರಲ್ಲಿ ಭಾರೀ ಸ್ಫೋಟ ಸಂಭವಿಸಿ 17 ಮಂದಿ ಸಾವನ್ನಪ್ಪಿದ್ದು, ಹಲವು ಮಂದಿ ಗಾಯಗೊಂಡಿರುವ ಘಟನೆ ಮಹಾರಾಷ್ಟ್ರದ ನಾಗಪುರ ಜಿಲ್ಲೆಯಲ್ಲಿ ನಡೆದಿದೆ.
ಕಟೋಲ್‌ನ ರೌಲ್‌ಗಾಂವ್‌ನಲ್ಲಿರುವ ಗಣಿಗಾರಿಕೆ ಮತ್ತು ಕೈಗಾರಿಕಾ ಸ್ಫೋಟಕ ತಯಾರಿಕಾ ಕಂಪನಿಯಾದ ಎಸ್‌ಬಿಎಲ್ ಎನರ್ಜಿ ಲಿಮಿಟೆಡ್‌ನಲ್ಲಿ ಇಂದು ಬೆಳಗಿನ ಜಾವ ಈ ಭೀಕರ ಸ್ಫೋಟ ಸಂಭವಿಸಿದೆ. ಗಾಯಾಳುಗಳನ್ನು ಹತ್ತಿರದ ಆಸ್ಪತ್ರೆ ಹಾಗೂ ನಾಗ್ಪುರದ ಆರೆಂಜ್ ಸಿಟಿ ಆಸ್ಪತ್ರೆಗೆ ದಾಖಲಿಸಲಾಗಿದೆ.
ಸ್ಫೋಟಕ್ಕೆ ನಿಖರವಾದ ಕಾರಣ ಇನ್ನೂ ತಿಳಿದುಬಂದಿಲ್ಲ. ರಕ್ಷಣಾ ಕಾರ್ಯಾಚರಣೆ ಮುಂದುವರೆದಿದ್ದು, ತನಿಖೆ ಆರಂಭಿಸಲಾಗಿದೆ. ಪ್ರಾಥಮಿಕ ಮಾಹಿತಿಯ ಪ್ರಕಾರ ಭಾನುವಾರ ಮುಂಜಾನೆ 6-7 ಗಂಟೆಯ ನಡುವೆ ದುರಂತ ಸಂಭವಿಸಿದೆ.
ರಾಲ್‌ಗಾಂವ್‌ನಲ್ಲಿರುವ ಎಸ್‌ಬಿಎಲ್ ಕಂಪನಿಯು ಗಣಿಗಾರಿಕೆಯಲ್ಲಿ ಬಳಸುವ ಡಿಟೋನೇಟರ್‌ಗಳು ಮತ್ತು ಇತರ ಸ್ಫೋಟಕ ವಸ್ತುಗಳನ್ನು ತಯಾರಿಸುತ್ತದೆ. ಕಾರ್ಮಿಕರು ಎಂದಿನಂತೆ ಕೆಲಸ ಮಾಡುತ್ತಿದ್ದ ವೇಳೆ ಹಠಾತ್ ಸ್ಫೋಟ ಸಂಭವಿಸಿದೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.
ಸ್ಫೋಟದ ಶಬ್ದವು ಸುತ್ತಮುತ್ತಲಿನ ಪ್ರದೇಶಗಳಿಗೆ ಕೇಳಿಸಿದ್ದು, ಗ್ರಾಮಸ್ಥರಲ್ಲಿ ಭೀತಿ ಉಂಟುಮಾಡಿತು. ಸ್ಫೋಟದ ತೀವ್ರತೆಗೆ ಕಾರ್ಖಾನೆಯ ಒಂದು ಭಾಗ ಕುಸಿದು ಬಿದ್ದಿದೆ. ಅಲ್ಲದೇ ಆಕಾಶದೆತ್ತರಕ್ಕೆ ದಟ್ಟವಾದ ಹೊಗೆ ಆವರಿಸಿಕೊಂಡಿತ್ತು. ಸ್ಫೋಟದ ಸಮಯದಲ್ಲಿ, ಸುಮಾರು 25 ರಿಂದ 30 ಕಾರ್ಮಿಕರು ಕಾರ್ಖಾನೆಯಲ್ಲಿ ಕೆಲಸ ಮಾಡುತ್ತಿದ್ದರು ಎಂದು ತಿಳಿದು ಬಂದಿದೆ. ಘಟನೆಯಲ್ಲಿ ಇನ್ನೂ ಹಲವು ಕಾರ್ಮಿಕರು ಕಾರ್ಖಾನೆಯೊಳಗೆ ಸಿಲುಕಿರುವ ಶಂಕೆ ವ್ಯಕ್ತವಾಗಿದೆ. ಘಟನೆಯ ಬಗ್ಗೆ ಮಾಹಿತಿ ತಿಳಿದ ತಕ್ಷಣ, ಪೊಲೀಸರು, ಅಗ್ನಿಶಾಮಕ ದಳದ ಸಿಬ್ಬಂದಿ ಮತ್ತು ತುರ್ತು ಸೇವೆಗಳು ಸ್ಥಳಕ್ಕೆ ಧಾವಿಸಿದ್ದು, ರಕ್ಷಣಾ ಕಾರ್ಯಾಚರಣೆಯಲ್ಲಿ ತೊಡಗಿವೆ.
ಇದನ್ನೂ ಓದಿ :ಇರಾನ್-ಇಸ್ರೇಲ್ ಸಂಘರ್ಷ | ದುಬೈ, ಬಹ್ರೇನ್‌ನಲ್ಲೇ ಸಿಲುಕಿಕೊಂಡ 50ಕ್ಕೂ ಹೆಚ್ಚು ಕನ್ನಡಿಗರು



















