ನವದೆಹಲಿ : ಗಡಿ ನಿಯಂತ್ರಣ ರೇಖೆ (ಎಲ್‌ಎಸಿ) ಬಳಿ ಪದೇ ಪದೇ ಕ್ಯಾತೆ ತೆಗೆಯುವ ಚೀನಾ ಸೇನೆಗೆ ಭಾರತೀಯ ಸೇನೆಯು ಈಗ ಕೃತಕ ಬುದ್ಧಿಮತ್ತೆ (AI) ತಂತ್ರಜ್ಞಾನದ ಮೂಲಕ ತಕ್ಕ ಪ್ರತ್ಯುತ್ತರ ನೀಡಿದೆ. ಅರುಣಾಚಲ ಪ್ರದೇಶದ ಗಡಿ ಭಾಗದಲ್ಲಿ ಚೀನಾ ನಡೆಸಲು ಯೋಜಿಸಿದ್ದ ಅತಿದೊಡ್ಡ ಮಿಲಿಟರಿ ಕಾರ್ಯಾಚರಣೆಯನ್ನು ಭಾರತವು ‘ಎಐ’ ಆಧಾರಿತ ಮುನ್ಸೂಚನಾ ಸಾಧನಗಳನ್ನು ಬಳಸಿ ಯಶಸ್ವಿಯಾಗಿ ವಿಫಲಗೊಳಿಸಿದೆ. ಈ ಕುರಿತ ಮಹತ್ವದ ಮಾಹಿತಿಯನ್ನು ಸ್ಟ್ರಾಟೆಜಿಕ್ ಫೋರ್ಸಸ್ ಕಮಾಂಡ್‌ನ ಕಮಾಂಡರ್-ಇನ್-ಚೀಫ್ ಲೆಫ್ಟಿನೆಂಟ್ ಜನರಲ್ ದಿನೇಶ್ ಸಿಂಗ್ ರಾಣಾ ಅವರು ‘ಇಂಡಿಯಾ ಎಐ ಇಂಪ್ಯಾಕ್ಟ್ ಶೃಂಗಸಭೆ 2026’ರಲ್ಲಿ ಹಂಚಿಕೊಂಡಿದ್ದಾರೆ.
ಮುನ್ಸೂಚನೆ ನೀಡಿದ ದೇಶೀಯ ‘ಎಐ’ ತಂತ್ರಜ್ಞಾನ
ಅರುಣಾಚಲ ಪ್ರದೇಶದ ಗಡಿ ರಕ್ಷಣೆಯ ಜವಾಬ್ದಾರಿ ಹೊತ್ತಿದ್ದ ಸಂದರ್ಭದ ಅನುಭವ ಹಂಚಿಕೊಂಡ ಲೆಫ್ಟಿನೆಂಟ್ ಜನರಲ್ ರಾಣಾ, ಸ್ಥಳೀಯವಾಗಿ ಅಭಿವೃದ್ಧಿಪಡಿಸಲಾದ ಕಡಿಮೆ ವೆಚ್ಚದ ಎಐ ವ್ಯವಸ್ಥೆಯು ಚೀನಾ ಸೇನೆಯ ಚಟುವಟಿಕೆಗಳನ್ನು ಮೊದಲೇ ಪತ್ತೆಹಚ್ಚಲು ಸಹಾಯ ಮಾಡಿತು ಎಂದು ತಿಳಿಸಿದ್ದಾರೆ. “ವಿವಾದಿತ ವಲಯದಲ್ಲಿ ಚೀನಾ ಸೇನೆಯ ಜಮಾವಣೆ ಮತ್ತು ಅವರ ಮುಂದಿನ ನಡೆಗಳನ್ನು ನಾವು ಎಐ ವ್ಯವಸ್ಥೆಯ ಮೂಲಕ ಮುಂಚಿತವಾಗಿ ಗಮನಿಸಿದೆವು. ಅವರ ಚಲನವಲನದ ನಿಖರ ಸಮಯವನ್ನು ಊಹಿಸಲು ನಮಗೆ ಸಾಧ್ಯವಾಯಿತು,” ಎಂದು ಅವರು ವಿವರಿಸಿದ್ದಾರೆ.
ಸಾವು-ನೋವಿಲ್ಲದೆ ಶತ್ರುಗಳ ದಮನ
ಚೀನಾ ಯೋಜಿಸಿದ್ದ ಈ ನಡೆ ಅತ್ಯಂತ ವಿಲಕ್ಷಣ ಹಾಗೂ ಅನಿರೀಕ್ಷಿತವಾಗಿತ್ತು. ಆದರೆ, ಎಐ ತಂತ್ರಜ್ಞಾನ ನೀಡಿದ ನಿಖರ ಮಾಹಿತಿಯಿಂದಾಗಿ ಭಾರತೀಯ ಸೇನೆಯು ಸರಿಯಾದ ಸಮಯದಲ್ಲಿ ಸೈನ್ಯವನ್ನು ನಿಯೋಜಿಸಲು ಮತ್ತು ಮುನ್ನೆಚ್ಚರಿಕೆ ಕ್ರಮವಾಗಿ ಸ್ಥಳಾಂತರ ಪ್ರಕ್ರಿಯೆಗಳನ್ನು ನಡೆಸಲು ಸಾಧ್ಯವಾಯಿತು. ಇದರ ಪರಿಣಾಮವಾಗಿ, ಭಾರತದ ಕಡೆ ಯಾವುದೇ ಪ್ರಾಣಾಪಾಯ ಅಥವಾ ಸಾವು-ನೋವುಗಳಿಲ್ಲದೆ ಚೀನಾದ ಸಂಚನ್ನು ಪೂರ್ಣವಾಗಿ ಹತ್ತಿಕ್ಕಲಾಯಿತು. ಆಧುನಿಕ ಯುದ್ಧತಂತ್ರದಲ್ಲಿ ತಂತ್ರಜ್ಞಾನವು ಕೇವಲ ಸಹಕಾರಿಯಲ್ಲ, ಬದಲಿಗೆ ರಾಷ್ಟ್ರೀಯ ಭದ್ರತೆಯ ಅವಿಭಾಜ್ಯ ಅಂಗವಾಗಿದೆ ಎಂಬುದಕ್ಕೆ ಇದು ಸಾಕ್ಷಿಯಾಗಿದೆ.
ಭಾರತದ ‘ಎಐ’ ಭದ್ರತಾ ಸಿದ್ಧಾಂತಕ್ಕೆ ಕರೆ
ಜಾಗತಿಕ ಮಟ್ಟದಲ್ಲಿ ಅಮೆರಿಕ ಮತ್ತು ಚೀನಾ ನಡುವೆ ಎಐ ತಂತ್ರಜ್ಞಾನದ ಸ್ಪರ್ಧೆ ಏರ್ಪಟ್ಟಿದೆ. ಈ ಹಿನ್ನೆಲೆಯಲ್ಲಿ ಭಾರತವು ಸಹ ತನ್ನದೇ ಆದ ‘ಎಐ ಸೆಕ್ಯುರಿಟಿ ಡಾಕ್ಟ್ರಿನ್’ (ಭದ್ರತಾ ಸಿದ್ಧಾಂತ) ರೂಪಿಸಿಕೊಳ್ಳಬೇಕಾದ ಅಗತ್ಯವಿದೆ ಎಂದು ರಾಣಾ ಪ್ರತಿಪಾದಿಸಿದ್ದಾರೆ. ರಷ್ಯಾ-ಉಕ್ರೇನ್ ಯುದ್ಧದ ಪಾಠಗಳನ್ನು ಉಲ್ಲೇಖಿಸಿದ ಅವರು, ಕೇವಲ ದುಬಾರಿ ಉಪಕರಣಗಳ ಮೇಲೆ ಅವಲಂಬಿತವಾಗದೆ, ಯುದ್ಧಭೂಮಿಯಲ್ಲಿ ಬಳಸಬಹುದಾದ ಕಡಿಮೆ ವೆಚ್ಚದ ಎಐ ಡ್ರೋನ್ ಹಾಗೂ ಸ್ವಯಂಚಾಲಿತ ವ್ಯವಸ್ಥೆಗಳನ್ನು ಹೆಚ್ಚಿಸಬೇಕು ಎಂದಿದ್ದಾರೆ. “ನಾವು ಜವಾಬ್ದಾರಿಯುತ ಪರಮಾಣು ರಾಷ್ಟ್ರವಾಗಿರುವಂತೆ, ಜವಾಬ್ದಾರಿಯುತ ಎಐ ಶಕ್ತಿಯಾಗಿಯೂ ಬೆಳೆಯಬೇಕು” ಎಂದು ಅವರು ಆಶಯ ವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿ : ಬೆಂಗಳೂರಿನ ಸ್ಟಾರ್ ‘ಅಂಬೂರ್ ಬಿರಿಯಾನಿ’ ಹೋಟೆಲ್‌ಗೆ GBA ಶಾಕ್ | ಸ್ವಚ್ಛತೆಗೆ ಆದ್ಯತೆ ನೀಡದಕ್ಕೆ ಬಿತ್ತು 1 ಲಕ್ಷ ಫೈನ್!



















