ಬೆಂಗಳೂರು : ಅತಿ ವೇಗವಾಗಿ ಬುಲೆಟ್ ಬೈಕ್ ಚಲಾಯಿಸಿಕೊಂಡು ಬಂದ ಸವಾರ ರಸ್ತೆ ದಾಟುತ್ತಿದ್ದ ಯುವತಿಗೆ ಹೊಡೆದ ಪರಿಣಾಮ ಯುವತಿ ಸಾವನ್ನಪ್ಪಿರುವ ಘಟನೆ ರಾಜ್‌ಕುಮಾರ್ ರಸ್ತೆಯ ಹೆಚ್‌ಡಿಎಫ್‌ಸಿ ಬ್ಯಾಂಕ್ ಬಳಿ ನಿನ್ನೆ ಮಧ್ಯಾಹ್ನ 12 ಗಂಟೆ ಸುಮಾರಿಗೆ ನಡೆದಿದೆ.
ಲಗ್ಗೆರೆ ಬಳಿಯ ಕೆಂಪೇಗೌಡ ಲೇಔಟ್ ನಿವಾಸಿ ಯೋಗೇಶ್ವರಿ(27) ಮೃತ ಯುವತಿ, ನಿನ್ನೆ ಮಧ್ಯಾಹ್ನ ತಮ್ಮ ಕೆಲಸದ ಸ್ಥಳದ ಸಮೀಪ ಊಟಕ್ಕೆಂದು ತನ್ನ ಗೆಳತಿಯ ಜೊತೆ ರಸ್ತೆ ದಾಟುತ್ತಿದ್ದರು. ಈ ಸಂದರ್ಭದಲ್ಲಿ ಅತಿ ವೇಗವಾಗಿ ಬಂದ ಬೈಕ್ ಸವಾರ ಯೋಗೇಶ್ವರಿಗೆ ಡಿಕ್ಕಿ ಹೊಡೆದಿದ್ದಾನೆ. ಅಪಘಾತದ ರಭಸಕ್ಕೆ ರಸ್ತೆಗೆ ಬಿದ್ದ ಯೋಗೇಶ್ವರಿ ತೀವ್ರವಾಗಿ ಗಾಯಗೊಂಡಿದ್ದರು. ಕೂಡಲೇ ಅವರನ್ನು ಸುಗುಣ ಆಸ್ಪತ್ರೆಗೆ ದಾಖಲಿಸಲಾಯಿತಾದರೂ, ಚಿಕಿತ್ಸೆ ಫಲಕಾರಿಯಾಗದೆ ಅವರು ಸಾವನ್ನಪ್ಪಿದ್ದಾರೆ.
ಮರಣೋತ್ತರ ಪರೀಕ್ಷೆಗಾಗಿ ಮೃತದೇಹವನ್ನು ವಿಕ್ಟೋರಿಯಾ ಆಸ್ಪತ್ರೆಗೆ ರವಾನಿಸಲಾಗಿದೆ. ಘಟನಾ ಸ್ಥಳಕ್ಕೆ ರಾಜಾಜಿನಗರ ಸಂಚಾರಿ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಈ ಸಂಬಂಧ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು, ಬೈಕ್ ಸವಾರನ ಪತ್ತೆಗಾಗಿ ತನಿಖೆ ಮುಂದುವರಿಸಿದ್ದಾರೆ.
ಇದನ್ನೂ ಓದಿ : ಸಲ್ಮಾನ್ ಖಾನ್ ತಂದೆ ಸಲೀಂ ಖಾನ್ ಆರೋಗ್ಯದಲ್ಲಿ ಏರುಪೇರು | ಆಸ್ಪತ್ರೆಗೆ ದೌಡಾಯಿಸಿದ ಕುಟುಂಬಸ್ಥರು

















