ಟಕ್ಸನ್ (ಅರಿಜೋನಾ): ಅಮೆರಿಕದ ಖ್ಯಾತ ಸುದ್ದಿ ನಿರೂಪಕಿ ಸವನ್ನಾ ಗುತ್ರಿ ಅವರ 84 ವರ್ಷದ ತಾಯಿ ನ್ಯಾನ್ಸಿ ಗುತ್ರಿ ಅವರ ಅಪಹರಣ ಪ್ರಕರಣ ಈಗ ಅತ್ಯಂತ ಗಂಭೀರ ಹಂತಕ್ಕೆ ತಲುಪಿದೆ. ಕಳೆದ ಏಳು ದಿನಗಳಿಂದ ನಾಪತ್ತೆಯಾಗಿರುವ ತಾಯಿಯ ಜೀವ ಉಳಿಸಿಕೊಳ್ಳಲು ಸವನ್ನಾ ಗುತ್ರಿ ಮತ್ತು ಅವರ ಕುಟುಂಬದವರು ಹರಸಾಹಸ ಪಡುತ್ತಿದ್ದು, ಅವರು ಅಪಹರಣಕಾರರಲ್ಲಿ ಮಾಡಿರುವ ಮನವಿ ಮನಕಲಕುವಂತಿದೆ. “ನಿಮ್ಮ ಸಂದೇಶ ನಮಗೆ ತಲುಪಿದೆ, ನಮಗೆ ವಿಷಯ ಅರ್ಥವಾಗಿದೆ. ದಯವಿಟ್ಟು ನಮ್ಮ ತಾಯಿಯನ್ನು ಸುರಕ್ಷಿತವಾಗಿ ನಮಗೆ ಮರಳಿ ನೀಡಿ, ನೀವು ಕೇಳಿದ ಹಣವನ್ನು ನೀಡಲು ನಾವು ಸಿದ್ಧರಿದ್ದೇವೆ” ಎಂದು ಸಾಮಾಜಿಕ ಜಾಲತಾಣದಲ್ಲಿ ಬಿಡುಗಡೆ ಮಾಡಲಾದ ವಿಡಿಯೋದಲ್ಲಿ ಸವನ್ನಾ ಕಣ್ಣೀರಿಟ್ಟಿದ್ದಾರೆ.
ಸ್ಥಳೀಯ ದೂರದರ್ಶನ ಕೇಂದ್ರವಾದ ‘KOLD'(ಕೋಲ್ಡ್)ಗೆ ಅಪಹರಣಕಾರರಿಂದ ಇಮೇಲ್ ಬಂದಿದೆ ಎಂಬ ಮಾಹಿತಿ ಲಭ್ಯವಾದ ಬೆನ್ನಲ್ಲೇ ಈ ವಿಡಿಯೋ ಹೇಳಿಕೆ ಹೊರಬಿದ್ದಿದೆ. ಎಫ್ಬಿಐ ಈ ಇಮೇಲ್ನ ಸತ್ಯಾಸತ್ಯತೆಯನ್ನು ಪರಿಶೀಲಿಸುತ್ತಿದೆ. ಮೂಲಗಳ ಪ್ರಕಾರ, ಅಪಹರಣಕಾರರು ಹಣಕ್ಕಾಗಿ ಬೇಡಿಕೆ ಇಟ್ಟಿದ್ದು, ಸೋಮವಾರ ಸಂಜೆಯೊಳಗೆ ಬೇಡಿಕೆ ಈಡೇರಿಸುವಂತೆ ಗಡುವು ನೀಡಿದ್ದಾರೆ ಎನ್ನಲಾಗಿದೆ. ಈ ಸುಲಿಗೆ ಪತ್ರದಲ್ಲಿ ನ್ಯಾನ್ಸಿ ಗುತ್ರಿ ಅವರ ಆ್ಯಪಲ್ ವಾಚ್ ಮತ್ತು ಅವರ ಮನೆಯ ಕೆಲವು ರಹಸ್ಯ ವಿವರಗಳನ್ನು ಉಲ್ಲೇಖಿಸಲಾಗಿದ್ದು, ಇದು ತನಿಖಾಧಿಕಾರಿಗಳಲ್ಲಿ ಆತಂಕ ಮೂಡಿಸಿದೆ.

ಕೈಕೊಟ್ಟ ತಂತ್ರಜ್ಞಾನ: ತನಿಖೆಗೆ ಅಡ್ಡಿಯಾದ ಸಬ್ಸ್ಕ್ರಿಪ್ಶನ್
ನ್ಯಾನ್ಸಿ ಗುತ್ರಿ ಅವರು ಟಕ್ಸನ್ ಹೊರವಲಯದ ತಮ್ಮ ಮನೆಯಿಂದ ಕಳೆದ ಭಾನುವಾರ ಅಪಹರಣಕ್ಕೊಳಗಾಗಿದ್ದಾರೆ ಎಂದು ಶಂಕಿಸಲಾಗಿದೆ. ಮನೆಯ ಮುಂಭಾಗದ ವರಾಂಡದಲ್ಲಿ ರಕ್ತದ ಕಲೆಗಳು ಪತ್ತೆಯಾಗಿದ್ದು, ಡಿಎನ್ಎ ಪರೀಕ್ಷೆಯಲ್ಲಿ ಅದು ನ್ಯಾನ್ಸಿ ಅವರದ್ದೇ ಎಂದು ದೃಢಪಟ್ಟಿದೆ. ಆದರೆ, ಅಪಹರಣಕಾರರನ್ನು ಪತ್ತೆಹಚ್ಚಲು ನೆರವಾಗಬೇಕಿದ್ದ ಮನೆಯ ಡೋರ್ಬೆಲ್ ಕ್ಯಾಮೆರಾ ಕೈಕೊಟ್ಟಿದೆ. ಕ್ಯಾಮೆರಾಕ್ಕೆ ಸಕ್ರಿಯ ‘ಸಬ್ಸ್ಕ್ರಿಪ್ಶನ್’ ಇಲ್ಲದ ಕಾರಣ, ಅಪಹರಣದ ಸಮಯದಲ್ಲಿ ದಾಖಲಾದ ಯಾವುದೇ ದೃಶ್ಯಗಳನ್ನು ಮರುಪಡೆಯಲು ಸಾಧ್ಯವಾಗುತ್ತಿಲ್ಲ ಎಂದು ಪಿಮಾ ಕೌಂಟಿ ಶೆರಿಫ್ ಕ್ರಿಸ್ ನಾನೋಸ್ ಬೇಸರ ವ್ಯಕ್ತಪಡಿಸಿದ್ದಾರೆ.
84 ವರ್ಷದ ನ್ಯಾನ್ಸಿ ಗುತ್ರಿ ಅವರು ಹೃದಯ ಸಂಬಂಧಿ ಕಾಯಿಲೆಗಳಿಂದ ಬಳಲುತ್ತಿದ್ದು, ಅವರಿಗೆ ಪ್ರತಿದಿನ ಅಗತ್ಯ ಔಷಧಿಗಳ ಅವಶ್ಯಕತೆಯಿದೆ. ಪೇಸ್ಮೇಕರ್ ಅಳವಡಿಸಿಕೊಂಡಿರುವ ಅವರಿಗೆ ಸಕಾಲದಲ್ಲಿ ಚಿಕಿತ್ಸೆ ಸಿಗದಿದ್ದರೆ ಪ್ರಾಣಾಪಾಯ ಉಂಟಾಗುವ ಸಾಧ್ಯತೆಯಿದೆ. “ದಿನ ಕಳೆದಂತೆ ಅವರ ಆರೋಗ್ಯ ಸ್ಥಿತಿ ಹದಗೆಡುತ್ತಿರಬಹುದು ಎಂಬ ಭಯ ನಮ್ಮನ್ನು ಕಾಡುತ್ತಿದೆ” ಎಂದು ಪೊಲೀಸರು ಆತಂಕ ವ್ಯಕ್ತಪಡಿಸಿದ್ದಾರೆ.
ಈ ಪ್ರಕರಣದ ಬಗ್ಗೆ ಸ್ವತಃ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಪ್ರತಿಕ್ರಿಯಿಸಿದ್ದು, ತನಿಖೆ ಅತ್ಯಂತ ವೇಗವಾಗಿ ನಡೆಯುತ್ತಿದೆ ಮತ್ತು ಕೆಲವು ಪ್ರಮುಖ ಸುಳಿವುಗಳು ಲಭ್ಯವಾಗಿವೆ ಎಂದು ತಿಳಿಸಿದ್ದಾರೆ. ಸದ್ಯ ಕ್ಯಾಟಲಿನಾ ಫೂಟ್ಹಿಲ್ಸ್ ಪ್ರದೇಶದಲ್ಲಿ ತನಿಖಾ ಸಂಸ್ಥೆಗಳು ಬಿರುಸಿನ ಶೋಧ ಕಾರ್ಯ ಮುಂದುವರಿಸಿದ್ದು, ಸವನ್ನಾ ಗುತ್ರಿ ಅವರ ಕುಟುಂಬವು ತಾಯಿಯ ಸುರಕ್ಷಿತ ಮರಳುವಿಕೆಗಾಗಿ ಪ್ರಾರ್ಥಿಸುತ್ತಿದೆ.
ಇದನ್ನೂ ಓದಿ: ಬಾಹ್ಯಾಕಾಶದಲ್ಲಿ ಶತ್ರು ಉಪಗ್ರಹಗಳ ಮೇಲೆ ನಿಗಾ | ಭಾರತದ ಖಾಸಗಿ ವಲಯದಿಂದ ಮೊದಲ ಬಾರಿಗೆ ‘ಇನ್-ಆರ್ಬಿಟ್ ಸ್ನೂಪಿಂಗ್’



















