ನವದೆಹಲಿ: ಕೇಂದ್ರ ಸರ್ಕಾರವು ಬಜೆಟ್ ನಲ್ಲಿ ಕೇರಳ, ತಮಿಳುನಾಡು, ಒಡಿಶಾ ಹಾಗೂ ಆಂಧ್ರಪ್ರದೇಶಗಳಿಗೆ ಬಂಪರ್ ಘೋಷಣೆ ಮಾಡಿದೆ. ತಮಿಳುನಾಡು, ಆಂಧ್ರ, ಒಡಿಶಾ ಹಾಗೂ ಕೇರಳದಲ್ಲಿ ನಾಲ್ಕು ಮಿನರಲ್ ಕಾರಿಡಾರ್ (Union Budget 2026) ಸ್ಥಾಪಿಸಲಾಗುವುದು ಎಂದು ನಿರ್ಮಲಾ ಸೀತಾರಾಮನ್ ಘೋಷಣೆ ಮಾಡಿದ್ದಾರೆ. ಇದರೊಂದಿಗೆ ಚುನಾವಣೆ ನಡೆಯುವ ತಮಿಳುನಾಡು, ಕೇರಳಕ್ಕೆ ಕೇಂದ್ರ ಸರ್ಕಾರವು ಬಂಪರ್ ಘೋಷಣೆ ಮಾಡಿದೆ.
ದಾಖಲೆಯ 9ನೇ ಬಾರಿಗೆ ಬಜೆಟ್ ಮಂಡಿಸುತ್ತಿರುವ ನಿರ್ಮಲಾ ಸೀತಾರಾಮನ್ ಅವರು ಭಾಷಣ ಆರಂಭಿಸುತ್ತಲೇ ದೇಶದ ಆರ್ಥಿಕತೆಯನ್ನು ಪ್ರಸ್ತಾಪಿಸಿದರು. ಭಾರತದ ಆರ್ಥಿಕತೆಯು ಸುಸ್ಥಿರ ಅಭಿವೃದ್ಧಿ ಹೊಂದುತ್ತಿದೆ. ರಫ್ತು, ವಿದೇಶಿ ಹೂಡಿಕೆಯಲ್ಲಿ ಭಾರತ ಮುಂದಿದೆ. ದೇಶೀಯ ಉತ್ಪಾದನೆ ಮೂಲಕವೂ ಭಾರತವು ಜಗತ್ತಿನಲ್ಲೇ ಅತಿ ವೇಗವಾಗಿ ಬೆಳೆಯುತ್ತಿರುವ ಆರ್ಥಿಕತೆಯಾಗಿ ಹೊರಹೊಮ್ಮಿದೆ ಎಂದು ತಿಳಿಸಿದರು.
ದೇಶದ ಬಡವರು, ಮಹಿಳೆಯರು, ಉದ್ಯಮಿಗಳು, ಎಸ್ಸಿ, ಎಸ್ಟಿ ಸೇರಿ ಎಲ್ಲ ವರ್ಗಗಳ ಕಲ್ಯಾಣಕ್ಕೆ ಸರ್ಕಾರ ಉತ್ತೇಜನ ನೀಡುತ್ತಿದೆ. ಅದರಲ್ಲೂ, ಯುವಶಕ್ತಿಯನ್ನು ಬಲಪಡಿಸುವುದು. ಬಡವರ ಪರವಾಗಿ ನೀತಿ-ನಿರೂಪಣೆಗಳನ್ನು ಮಾಡುವುದು ಕೇಂದ್ರ ಸರ್ಕಾರದ ಉದ್ದೇಶವಾಗಿದೆ. ಪ್ರಧಾನಿ ನರೇಂದ್ರ ಮೋದಿ ಅವರ ನೇತೃತ್ವದಲ್ಲಿ ದೇಶದ ಸಕಲ ವರ್ಗಗಳ ಕಲ್ಯಾಣಕ್ಕಾಗಿ ಸರ್ಕಾರ ಶ್ರಮಿಸುತ್ತಿದೆ ಎಂದು ತಿಳಿಸಿದರು.
ಸಬ್ ಕಾ ಸಾಥ್, ಸಬ್ ಕಾ ವಿಕಾಸ್ ತತ್ವದ ಅಡಿಯಲ್ಲಿಯೇ ಕೇಂದ್ರ ಸರ್ಕಾರ ಆಡಳಿತ ನಡೆಸುತ್ತಿದೆ. ಈ ಬಜೆಟ್ ಕೂಡ ಪ್ರತಿಯೊಬ್ಬರ ಶ್ರೇಯೋಭಿವೃದ್ಧಿಯನ್ನು ಗಮನದಲ್ಲಿ ಇಟ್ಟುಕೊಂಡು ಬಜೆಟ್ ತಯಾರಿಸಲಾಗಿದೆ. ವಿಕಸಿತ ಭಾರತದ ಕನಸು ಸಾಕಾರಗೊಳಿಸಲು ಕೃತಕ ಬುದ್ಧಿಮತ್ತೆಗೆ ಆದ್ಯತೆ ನೀಡುವುದು ನಮ್ಮ ಗುರಿಯಾಗಿದೆ. ಉದ್ಯೋಗ ಸೃಷ್ಟಿ, ಉತ್ಪಾದನೆ ಹಾಗೂ ಸುಸ್ಥಿರ ಬೆಳವಣಿಗೆಗೆ ಸರ್ಕಾರ ಸಕಲ ಕ್ರಮಗಳನ್ನೂ ತೆಗೆದುಕೊಳ್ಳಲಾಗುತ್ತಿದೆ ಎಂದು ಹೇಳಿದರು.
ಇದನ್ನೂ ಓದಿ : ಕೇಂದ್ರ ಬಜೆಟ್ 2026 | ಇದು ಯುವ ಶಕ್ತಿಯಿಂದ ಪ್ರೇರಿತವಾದ ಬಜೆಟ್ ; ನಿರ್ಮಲಾ ಸೀತಾರಾಮನ್



















