ಮೆಲ್ಬೋರ್ನ್: ವಿಶ್ವ ಮಹಿಳಾ ಕ್ರಿಕೆಟ್‌ನ ಅಧಿಪತಿ ಆಸ್ಟ್ರೇಲಿಯಾ ತಂಡವು ತನ್ನ ನಾಯಕತ್ವದ ಚುಕ್ಕಾಣಿಯನ್ನು ಹೊಸ ಕೈಗಳಿಗೆ ಹಸ್ತಾಂತರಿಸಿದೆ. ಸ್ಟಾರ್ ವಿಕೆಟ್ ಕೀಪರ್ ಬ್ಯಾಟರ್ ಅಲೀಸಾ ಹೀಲಿ ಅವರ ನಿವೃತ್ತಿಯ ನಿರ್ಧಾರದ ಬೆನ್ನಲ್ಲೇ, ಆಸ್ಟ್ರೇಲಿಯಾ ಕ್ರಿಕೆಟ್ ಮಂಡಳಿಯು ಎಡಗೈ ಸ್ಪಿನ್ನರ್ ಸೋಫಿ ಮೊಲಿನೆಕ್ಸ್ ಅವರನ್ನು ತಂಡದ ಸರ್ವ ಮಾದರಿಯ (All-format) ನಾಯಕಿಯನ್ನಾಗಿ ಅಧಿಕೃತವಾಗಿ ಘೋಷಿಸಿದೆ. ಮುಂಬರುವ ಭಾರತ ವಿರುದ್ಧದ ಟಿ20 ಸರಣಿಯೊಂದಿಗೆ ಮೊಲಿನೆಕ್ಸ್ ಅವರ ನಾಯಕತ್ವದ ಪರ್ವ ಆರಂಭವಾಗಲಿದೆ.
ಅಲೀಸಾ ಹೀಲಿ ಈ ತಿಂಗಳ ಆರಂಭದಲ್ಲಿ ಭಾರತ ವಿರುದ್ಧದ ಸ್ವದೇಶಿ ಸರಣಿಯ ನಂತರ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ವಿದಾಯ ಹೇಳುವುದಾಗಿ ಘೋಷಿಸಿದ್ದರು. ಮುಂಬರುವ ಟಿ20 ವಿಶ್ವಕಪ್ ಅನ್ನು ದೃಷ್ಟಿಯಲ್ಲಿಟ್ಟುಕೊಂಡು, ಆಸ್ಟ್ರೇಲಿಯಾ ಸೆಲೆಕ್ಟರ್‌ಗಳು ತಕ್ಷಣವೇ ಉತ್ತರಾಧಿಕಾರಿಯನ್ನು ನೇಮಿಸುವ ಮೂಲಕ ತಂಡದಲ್ಲಿ ಸ್ಥಿರತೆ ಕಾಪಾಡಲು ಮುಂದಾಗಿದ್ದಾರೆ. 28 ವರ್ಷದ ಸೋಫಿ ಮೊಲಿನೆಕ್ಸ್ ಈ ಜವಾಬ್ದಾರಿಯನ್ನು ವಹಿಸಿಕೊಳ್ಳುತ್ತಿದ್ದು, ಅವರಿಗೆ ಸಾಥ್ ನೀಡಲು ತಹ್ಲಿಯಾ ಮೆಕ್‌ಗ್ರಾತ್ ಹಾಗೂ ಆಶ್ಲೇ ಗಾರ್ಡ್ನರ್ ಅವರನ್ನು ಉಪನಾಯಕಿಯನ್ನಾಗಿ ನೇಮಕ ಮಾಡಲಾಗಿದೆ.

ಸೋಫಿ ಮೊಲಿನೆಕ್ಸ್ ಅವರ ಆಯ್ಕೆಯು ಕ್ರಿಕೆಟ್ ವಲಯದಲ್ಲಿ ಸಾಕಷ್ಟು ಕುತೂಹಲ ಮೂಡಿಸಿದೆ. ಅನುಭವಿ ತಹ್ಲಿಯಾ ಮೆಕ್‌ಗ್ರಾತ್ ಅವರು ಈ ಹಿಂದೆ ಹಂಗಾಮಿ ನಾಯಕಿಯಾಗಿ ಯಶಸ್ವಿಯಾಗಿದ್ದರೂ, ಸೆಲೆಕ್ಟರ್‌ಗಳು ಮೊಲಿನೆಕ್ಸ್ ಅವರ ಮೇಲೆ ವಿಶ್ವಾಸ ಇಟ್ಟಿದ್ದಾರೆ. ಇದಕ್ಕೆ ಪ್ರಮುಖ ಕಾರಣ ಅವರು ಮೆಲ್ಬೋರ್ನ್ ರೆನೆಗೇಡ್ಸ್ ತಂಡವನ್ನು ಡಬ್ಲ್ಯೂಬಿಬಿಎಲ್ (WBBL) ಚಾಂಪಿಯನ್ ಪಟ್ಟಕ್ಕೇರಿಸಿದ ರೀತಿ. ಅದೇ ರೀತಿ ಆರ್‌ಸಿಬಿ ಮಹಿಳಾ ತಂಡದಲ್ಲಿ ಮಿಂಚುತ್ತಿರುವುದು. ಗಾಯದ ಸಮಸ್ಯೆಯಿಂದಾಗಿ 2024ರ ನಂತರ ಹೆಚ್ಚಿನ ಅಂತರಾಷ್ಟ್ರೀಯ ಪಂದ್ಯಗಳನ್ನು ಆಡದಿದ್ದರೂ, ಮೊಲಿನೆಕ್ಸ್ ಅವರ ಗೇಮ್ ಪ್ಲಾನ್ ಮತ್ತು ನಾಯಕತ್ವದ ಗುಣಗಳು ಅಪ್ರತಿಮವಾಗಿವೆ ಎಂದು ರಾಷ್ಟ್ರೀಯ ಸೆಲೆಕ್ಟರ್ ಶಾನ್ ಫ್ಲೆಗ್ಲರ್ ಶ್ಲಾಘಿಸಿದ್ದಾರೆ.
ವಿವಿಧ ಹಂತದಲ್ಲಿ ನಾಯಕತ್ವ
ನಾಯಕತ್ವದ ಹಸ್ತಾಂತರದ ಪ್ರಕ್ರಿಯೆಯು ಭಾರತದ ವಿರುದ್ಧದ ಸರಣಿಯಲ್ಲಿ ವಿಶಿಷ್ಟವಾಗಿ ನಡೆಯಲಿದೆ. ಮೊದಲು ನಡೆಯಲಿರುವ ಮೂರು ಟಿ20 ಪಂದ್ಯಗಳಲ್ಲಿ ಮೊಲಿನೆಕ್ಸ್ ನಾಯಕಿಯಾಗಿ ತಂಡವನ್ನು ಮುನ್ನಡೆಸಲಿದ್ದಾರೆ. ಆನಂತರ ನಡೆಯುವ ಏಕದಿನ ಮತ್ತು ಟೆಸ್ಟ್ ಪಂದ್ಯಗಳಲ್ಲಿ ಅಲೀಸಾ ಹೀಲಿ ಅಂತಿಮ ಬಾರಿಗೆ ನಾಯಕಿಯಾಗಿ ಕಣಕ್ಕಿಳಿಯಲಿದ್ದಾರೆ. ಇದಾದ ಬಳಿಕ ಕೆರಿಬಿಯನ್ ಪ್ರವಾಸ ಮತ್ತು ಇಂಗ್ಲೆಂಡ್‌ನಲ್ಲಿ ನಡೆಯಲಿರುವ ಟಿ20 ವಿಶ್ವಕಪ್‌ನಲ್ಲಿ ಮೊಲಿನೆಕ್ಸ್ ಪೂರ್ಣ ಪ್ರಮಾಣದ ನಾಯಕಿಯಾಗಿ ತಂಡದ ಚುಕ್ಕಾಣಿ ಹಿಡಿಯಲಿದ್ದಾರೆ.
“ಆಸ್ಟ್ರೇಲಿಯಾ ತಂಡದ ನಾಯಕತ್ವ ವಹಿಸುವುದು ಹೆಮ್ಮೆಯ ವಿಷಯ. ಅದರಲ್ಲೂ ಅಲೀಸಾ ಹೀಲಿ ಅವರಂತಹ ದಿಗ್ಗಜ ಆಟಗಾರ್ತಿಯ ಹಾದಿಯಲ್ಲಿ ನಡೆಯುವುದು ಒಂದು ದೊಡ್ಡ ಜವಾಬ್ದಾರಿ,” ಎಂದು ಸೋಫಿ ಮೊಲಿನೆಕ್ಸ್ ತಮ್ಮ ನೇಮಕಾತಿಯ ನಂತರ ಪ್ರತಿಕ್ರಿಯಿಸಿದ್ದಾರೆ. ಆಸ್ಟ್ರೇಲಿಯಾ ತಂಡವು ಒಂದು ಸಂಕೀರ್ಣ ಬದಲಾವಣೆಯ ಹಂತದಲ್ಲಿದ್ದು, ಮೇಗ್ ಲ್ಯಾನಿಂಗ್ ಮತ್ತು ಅಲೀಸಾ ಹೀಲಿ ಅವರಂತಹ ಶ್ರೇಷ್ಠ ನಾಯಕಿಯರ ನಂತರ ಸೋಫಿ ಮೊಲಿನೆಕ್ಸ್ ತಂಡವನ್ನು ಹೇಗೆ ಯಶಸ್ಸಿನ ಹಾದಿಯಲ್ಲಿ ನಡೆಸುತ್ತಾರೆ ಎಂಬುದು ಈಗ ಜಾಗತಿಕ ಕ್ರಿಕೆಟ್ ಅಭಿಮಾನಿಗಳ ಕುತೂಹಲಕ್ಕೆ ಕಾರಣವಾಗಿದೆ.
ಇದನ್ನೂ ಓದಿ : ಕರ್ಮಭೂಮಿ ಬಾರಾಮತಿಯಲ್ಲಿ ಅಜಿತ್ ದಾದಾಗೆ ಸಾವಿರಾರು ನಾಯಕರು, ಬೆಂಬಲಿಗರಿಂದ ಕಣ್ಣೀರ ವಿದಾಯ



















