ಬೆಂಗಳೂರು: ಬಸ್ ಹಾಗೂ ವಿಮಾನ ಟಿಕೆಟ್ ಮೇಲೆ ರಿಯಾಯಿತಿ ನೀಡುವ ಅಗ್ರಿಗೇಟರ್ ಗಳು ಇವೆ. ಆದರೆ ಈಗ ರೈಲ್ವೆ ಟಿಕೆಟ್ ಬುಕ್ಕಿಂಗ್ ಮೇಲೇಯೂ ಡಿಸ್ಕೌಂಟ್ ಪಡೆಯಬಹುದು. ಹೌದು, ರೈಲ್ವೆ ಇಲಾಖೆಯು ಈಗ ಟಿಕೆಟ್ ಬುಕ್ಕಿಂಗ್ ಮೇಲೆ ಶೇ. 3ರಷ್ಟು ರಿಯಾಯಿತಿ ಘೋಷಣೆ ಮಾಡಿದೆ. ಇದರಿಂದ ರೈಲ್ವೆ ಟಿಕೆಟ್ ಬುಕ್ ಮಾಡುವವರಿಗೆ ಹಣ ಉಳಿಯಲಿದೆ.
RailOne ಆ್ಯಪ್ ಮೂಲಕ ಅನ್ ರಿಸರ್ವ್ಡ್ ಟಿಕೆಟ್ ಬುಕ್ ಮಾಡಿದವರಿಗೆ ಶೇ. 3ರಷ್ಟು ರಿಯಾಯಿತಿ ದೊರೆಯಲಿದೆ. ಈ ಹೆಚ್ಚುವರಿ ಡಿಸ್ಕೌಂಟ್ RailOne ಆ್ಯಪ್ ನಲ್ಲಿ ಮಾತ್ರ ಲಭ್ಯ ಇದೆ. ಬೇರೆ ಯಾವುದೇ ವೆಬ್ ಸೈಟ್, ಆನ್ ಲೈನ್ ಪ್ಲಾಟ್ ಫಾರ್ಮ್ ಅಥವಾ ಆ್ಯಪ್ ಗಳ ಮೂಲಕ ಜನರಲ್ ಟಿಕೆಟ್ ಬುಕ್ ಮಾಡಿದರೆ ಡಿಸ್ಕೌಂಟ್ ಸಿಗುವುದಿಲ್ಲ ಎಂದು ರೈಲ್ವೆ ಇಲಾಖೆ ತಿಳಿಸಿದೆ.
ರೈಲ್ವೆ ಪ್ರಯಾಣಿಕರು ಮೊದಲು ಗೂಗಲ್ ಪ್ಲೇ ಸ್ಟೋರ್ ಅಥವಾ ಆಪಲ್ ಆ್ಯಪ್ ಸ್ಟೋರ್‌ನಿಂದ RailOne ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಬೇಕು. ಇದಾದ ನಂತರ ಮೊಬೈಲ್ ಸಂಖ್ಯೆಗೆ ಬರುವ OTP ಮೂಲಕ ನೋಂದಣಿ ಪೂರ್ಣಗೊಳಿಸಬೇಕು. mPIN ಸೆಟ್ ಮಾಡಿ ಅಥವಾ ಬಯೋಮೆಟ್ರಿಕ್ ಲಾಗಿನ್ ಮಾಡುವ ಮೂಲಕ ಸಕ್ರಿಯಗೊಳಿಸಬಹುದು. ಈ ಆ್ಯಪ್ ಮೂಲಕ ಜನರಲ್ ಟಿಕೆಟ್ ಬುಕ್ಕಿಂಗ್, ಟ್ರೈನ್ ಲೈವ್ ಸ್ಟೇಟಸ್ ಪರಿಶೀಲನೆ ಮತ್ತು ರೈಲ್ವೆ ಸಂಬಂಧಿತ ವಿವಿಧ ಸೇವೆಗಳು ಲಭಿಸುತ್ತವೆ.
ಈಗಾಗಲೇ R-Wallet ಮೂಲಕ ರೈಲ್ವೆ ಟಿಕೆಟ್ ಬುಕ್ ಮಾಡುವವರಿಗೆ ರೈಲ್ವೆ ಇಲಾಖೆಯು ಟಿಕೆಟ್ ದರದ ಮೇಲೆ ಶೇ. 3ರಷ್ಟು ಕ್ಯಾಶ್ ಬ್ಯಾಕ್ ಘೋಷಣೆ ಮಾಡಿದೆ. ಇದು ಮುಂದೆಯೂ ಇರಲಿದೆ. ಇದರ ಜೊತೆಗೆ ಹೆಚ್ಚುವರಿ ರಿಯಾಯಿತಿ ಘೋಷಣೆ ಮಾಡಲಾಗಿದೆ. 2026ರ ಜನವರಿ 14ರಿಂದಲೇ ಡಿಸ್ಕೌಂಟ್ ಜಾರಿಗೆ ಬಂದಿದೆ. ಇದು 6 ತಿಂಗಳು ಲಭ್ಯ ಇರಲಿದೆ. ರೈಲ್ವೆ ಕೌಂಟರ್ ಗಳಲ್ಲಿ ಟಿಕೆಟ್ ಬುಕ್ ಮಾಡಲು ಸಾಲುಗಟ್ಟಿ ನಿಲ್ಲುವುದನ್ನು ತಪ್ಪಿಸಲು ಡಿಸ್ಕೌಂಟ್ ಘೋಷಣೆ ಮಾಡಲಾಗಿದೆ ಎಂದು ತಿಳಿದುಬಂದಿದೆ.
ಇದನ್ನೂ ಓದಿ: ‘ಸಿಎಂ ಕಪ್ 2026’ರ ಜೆರ್ಸಿ ಅನಾವರಣ | ಫೆ. 21-22ರಂದು ವಿಶಿಷ್ಟ ಪರಿಕಲ್ಪನೆಯ ಶಟಲ್ ಬ್ಯಾಡ್ಮಿಂಟನ್ ಕ್ರೀಡಾಕೂಟ



















