ಬಳ್ಳಾರಿ : “ಮಾಡೆಲ್ ಹೌಸ್ಗೆ ಉದ್ದೇಶಪೂರ್ವಕವಾಗಿ ಬೆಂಕಿ ಹಚ್ಚಲಾಗಿದೆ. ಭಯದ ವಾತಾವರಣ ಸೃಷ್ಟಿಸಲು ಕೃತ್ಯ ಎಸಗಲಾಗಿದೆ” ಎಂದು ಶಾಸಕ ಜನಾರ್ದನ ರೆಡ್ಡಿ ಆರೋಪಿಸಿದ್ದಾರೆ.
ನಗರದಲ್ಲಿಂದು ಮಾಧ್ಯಮದವರೊಂದಿಗೆ ಮಾತನಾಡಿದ ಅವರು, “ಎಸ್ಪಿ ಅವರು ಕೆಳಹಂತದ ಅಧಿಕಾರಿಗಳ ಮಾಹಿತಿ ಪಡೆದು ತರಾತುರಿಯಲ್ಲಿ ಹೇಳಿಕೆ ನೀಡಿದ್ದಾರೆ. ನಾಲ್ಕು ತಿಂಗಳ ಹಿಂದೆಯೇ ನಾನು ದೂರು ನೀಡಿದ್ದೆ. ಇಬ್ಬರು ಲೇಔಟ್ ಸೆಕ್ಯುರಿಟಿಗಳು ಬೆಂಕಿ ಹಚ್ಚಿದ್ದನ್ನು ನೋಡಿದ್ದಾರೆ. ನಾವು ನೀಡಿದ ವಿಡಿಯೋದಲ್ಲಿರುವ ಹುಡುಗರನ್ನು ಬಂಧಿಸಿದ್ದಾರೆ” ಎಂದರು.
“ಬಾಗಿಲು, ಕಿಟಕಿಯ ಗಾಜು ಒಡೆದು ಒಳಗಡೆ ಹೋಗಿದ್ದಾರೆ. ರೀಲ್ಸ್ ಅಂತಾ ಹೇಳುವುದು ಹಾಸ್ಯಾಸ್ಪದ. ಎಸ್ಪಿ ಅವರು ಕೆಳಹಂತದ ಅಧಿಕಾರಿಗಳ ಮಾತು ಕೇಳಬಾರದು. ಬ್ಯಾನರ್ ಗಲಭೆ ಪ್ರಕರಣದಲ್ಲಿ ಸತೀಶ್ ರೆಡ್ಡಿ ಬಂಧನ ಆಗಿಲ್ಲ. ಶಾಸಕರ ಸಮ್ಮುಖದಲ್ಲಿ ರಾಜಶೇಖರ್ಗೆ ಗುಂಡೇಟು ಬಿದ್ದಿದೆ. ಭರತ್ ರೆಡ್ಡಿ, ಸತೀಶ್ ರೆಡ್ಡಿ ಬಂಧನವಾಗಿದ್ರೆ ನಮ್ಮ ಹೌಸ್ ಬೆಂಕಿ ಹಚ್ಚುತ್ತಿರಲಿಲ್ಲ” ಎಂದು ಹೇಳಿದರು.
“ಎಎಸ್ಪಿ, ಡಿವೈಎಸ್ಪಿ ಅವರನ್ನು ಸರ್ಕಾರ ವರ್ಗಾವಣೆ ಮಾಡಬೇಕಿತ್ತು. 25 ದಿನ ಕಳೆದ್ರೂ ಇದುವರೆಗೆ ಗನ್ ಮ್ಯಾನ್ಗಳು ಬಿಟ್ಟರೆ ಬೇರೆ ಯಾರನ್ನೂ ಬಂಧಿಸಿಲ್ಲ. ಬಳ್ಳಾರಿ ಎಸ್ಪಿ ಅವರು ಒಳ್ಳೆಯ ಅಧಿಕಾರಿ, ಆದರೆ ಅವರು ನಂಬಿಕೆ ಕಳೆದುಕೊಳ್ಳಬಾರದು. ಪೊಲೀಸ್ ವೇಷದಲ್ಲಿರುವ ಕ್ರಿಮಿನಲ್ಸ್, ಪೆಟ್ರೋಲ್, ಡೀಸೆಲ್ ಬಳಸಿ ಬೆಂಕಿ ಹಚ್ಚಿದ್ದಾರೆ. ಸಿಗರೇಟ್ನಿಂದ ಸುಟ್ಟಿದೆ ಅಂತಾ ಹೇಳುವುದು ಸುಳ್ಳು. ಮಂಗಳವಾರ ಸದನದಲ್ಲಿ ಸಿಬಿಐ ತನಿಖೆಗೆ ಒತ್ತಾಯಿಸುತ್ತೇವೆ” ಎಂದು ತಿಳಿಸಿದರು.
ಇದನ್ನೂ ಓದಿ : ವಾಕ್ ಮತ್ತು ಶ್ರವಣ ಸಂಸ್ಥೆಯಲ್ಲಿ 3 ಹುದ್ದೆಗಳ ನೇಮಕ.. ಹೀಗೆ ಅರ್ಜಿ ಸಲ್ಲಿಸಿ



















