ನವದೆಹಲಿ\ಮಂಡ್ಯ : ಭಾರತ ಸರ್ಕಾರವು 2026ನೇ ಸಾಲಿನ ಪ್ರತಿಷ್ಠಿತ ಪದ್ಮ ಪ್ರಶಸ್ತಿಯನ್ನು ಪ್ರಕಟಿಸಿದ್ದು, ಕರ್ನಾಟಕದ ಹೆಮ್ಮೆಯ ಸಾಹಿತ್ಯ ಪ್ರೇಮಿ, ಮಂಡ್ಯ ಜಿಲ್ಲೆಯ ಪಾಂಡವಪುರ ತಾಲ್ಲೂಕಿನ ಹರಳಹಳ್ಳಿಯ ಅಂಕೇಗೌಡರಿಗೆ ‘ಪದ್ಮಶ್ರೀ’ ಪ್ರಶಸ್ತಿ ಒಲಿದುಬಂದಿದೆ. ಸಾಹಿತ್ಯ ಮತ್ತು ಶಿಕ್ಷಣ ಕ್ಷೇತ್ರದಲ್ಲಿ ಅವರು ಮಾಡಿರುವ ಅಪೂರ್ವ ಮತ್ತು ನಿಸ್ವಾರ್ಥ ಸೇವೆಯನ್ನು ಪರಿಗಣಿಸಿ ಈ ಅತ್ಯುನ್ನತ ನಾಗರಿಕ ಗೌರವವನ್ನು ನೀಡಲಾಗಿದೆ.
ಮಂಡ್ಯ ಜಿಲ್ಲೆಯ ಪಾಂಡವಪುರ ತಾಲೂಕಿನ ಹರಳಹಳ್ಳಿ ಗ್ರಾಮದವರಾದ ಅಂಕೇಗೌಡರು, ವೃತ್ತಿಯಲ್ಲಿ ಕೆಎಸ್‌ಆರ್‌ಟಿಸಿ (KSRTC) ನೌಕರರಾಗಿದ್ದವರು. ಸಣ್ಣ ವಯಸ್ಸಿನಿಂದಲೇ ಓದಿನ ಮೇಲೆ ಅಪಾರ ಪ್ರೀತಿ ಹೊಂದಿದ್ದ ಇವರು, ತಮ್ಮ ಜೀವನದ ಪ್ರತಿಯೊಂದು ಕ್ಷಣವನ್ನು ಮತ್ತು ಸಂಪಾದನೆಯ ಬಹುಪಾಲು ಹಣವನ್ನು ಪುಸ್ತಕಗಳ ಸಂಗ್ರಹಕ್ಕಾಗಿ ಮೀಸಲಿಟ್ಟಿದ್ದಾರೆ. ಇಂದು ಇಡೀ ನಾಡು ಇವರನ್ನು ‘ಅಕ್ಷರ ಯೋಗಿ’ ಎಂದೇ ಕರೆಯುತ್ತದೆ.

ವಿಶ್ವವಿಖ್ಯಾತ ‘ಪುಸ್ತಕ ಮನೆ’ ಗ್ರಂಥಾಲಯ
ಅಂಕೇಗೌಡರು ನಿರ್ಮಿಸಿರುವ ‘ಪುಸ್ತಕ ಮನೆ’ ಕೇವಲ ಒಂದು ಗ್ರಂಥಾಲಯವಲ್ಲ, ಅದೊಂದು ಜ್ಞಾನದ ದೇಗುಲ. ತಮ್ಮ ಸ್ವಂತ ಮನೆಯನ್ನೇ ಗ್ರಂಥಾಲಯವನ್ನಾಗಿ ಪರಿವರ್ತಿಸಿರುವ ಇವರ ಬಳಿ ಬರೋಬ್ಬರಿ 10 ಲಕ್ಷಕ್ಕೂ ಅಧಿಕ ಪುಸ್ತಕಗಳು ಮತ್ತು ಮ್ಯಾಗಜೀನ್‌ಗಳಿವೆ. ಇಲ್ಲಿ ಕನ್ನಡ ಸೇರಿದಂತೆ ವಿವಿಧ ಭಾಷೆಗಳ ಅಪರೂಪದ ಪುಸ್ತಕಗಳಿವೆ. ದಶಕಗಳ ಹಳೆಯ ಪತ್ರಿಕೆಗಳು, ಮಾಸಪತ್ರಿಕೆಗಳು ಮತ್ತು ಹಸ್ತಪ್ರತಿಗಳನ್ನು ಇವರು ಅತೀ ಜಾಗರೂಕತೆಯಿಂದ ಸಂರಕ್ಷಿಸಿಟ್ಟಿದ್ದಾರೆ. ಸಂಶೋಧಕರು, ವಿದ್ಯಾರ್ಥಿಗಳು ಮತ್ತು ಸಾಹಿತ್ಯಾಸಕ್ತರಿಗೆ ಅಂಕೇಗೌಡರ ಈ ‘ಪುಸ್ತಕ ಮನೆ’ ಒಂದು ಆಶಾಕಿರಣವಾಗಿದೆ.
ಅಂಕೇಗೌಡರಿಗೆ ಪದ್ಮಶ್ರೀ ಪ್ರಶಸ್ತಿ ಲಭಿಸಿರುವುದು ಕೇವಲ ಅವರಿಗಷ್ಟೇ ಅಲ್ಲ, ಇಡೀ ಕರ್ನಾಟಕದ ಸಾಹಿತ್ಯ ಲೋಕಕ್ಕೆ ಸಂದ ಗೌರವವಾಗಿದೆ. “ಪುಸ್ತಕಗಳೇ ನನ್ನ ದೇವರು, ಗ್ರಂಥಾಲಯವೇ ನನ್ನ ಪವಿತ್ರ ಕ್ಷೇತ್ರ” ಎಂದು ನಂಬಿರುವ ಈ ಸರಳ ಸಜ್ಜನ ವ್ಯಕ್ತಿಗೆ ಈಗ ರಾಷ್ಟ್ರಮಟ್ಟದ ಮನ್ನಣೆ ಸಿಕ್ಕಿರುವುದು ಮಂಡ್ಯ ಜಿಲ್ಲೆಯ ಜನರಲ್ಲಿ ಮತ್ತು ರಾಜ್ಯದ ಜನರಲ್ಲಿ ಸಂತಸ ತಂದಿದೆ. ಕೇಂದ್ರ ಸರ್ಕಾರದ ಈ ನಿರ್ಧಾರಕ್ಕೆ ರಾಜ್ಯದ ಗಣ್ಯರು, ಸಾಹಿತಿಗಳು ಮತ್ತು ಸಾರ್ವಜನಿಕರು ಅಭಿನಂದನೆಗಳ ಸುರಿಮಳೆಗರೆಯುತ್ತಿದ್ದಾರೆ. ಅಕ್ಷರದ ಮೇಲೆ ಪ್ರೀತಿಯಿದ್ದವರಿಗೆ ಈ ಬಾರಿಯ ಪದ್ಮಶ್ರೀ ಪ್ರಶಸ್ತಿ ನಿಜಕ್ಕೂ ಸಾರ್ಥಕತೆಯನ್ನು ತಂದಿದೆ.
ಇದನ್ನೂ ಓದಿ : ಮಾದಪ್ಪನ ಭಕ್ತರೇ ಗಮನಿಸಿ | ಬೆಟ್ಟಕ್ಕೆ ಸಂಜೆ 4ರ ನಂತರ ಪ್ರವೇಶ ನಿರ್ಬಂಧ!



















