ಶಿವಮೊಗ್ಗ: ಮಲೆನಾಡು ಗುಡಿ ಕೈಗಾರಿಕೆ, ಕರಕುಶಲ ವಸ್ತುಗಳಿಗೆ ಮಾರುಕಟ್ಟೆ ಹಾಗೂ ಅವುಗಳ ಪರಿಚಯ ಮಾಡುವ ಸಲುವಾಗಿ ಆಯೋಜಿಸಿರುವ ಮಲೆನಾಡ ಕರಕುಶಲ ಉತ್ಸವ, ಸಿರಿಧಾನ್ಯ ಮೇಳ ಹಾಗೂ ಫಲಪುಷ್ಪ ಪ್ರದರ್ಶನ ಜನರ ಗಮನ ಸೆಳೆಯುತ್ತಿದೆ. ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಆಶ್ರಯದಲ್ಲಿ ಅಲ್ಲಮಪ್ರಭು ಮೈದಾನದಲ್ಲಿ ಗಣರಾಜ್ಯೋತ್ಸವದ ನಿಮಿತ್ತ ಇಂದಿನಿಂದ ಮೂರು ದಿನಗಳ ಕಾಲ ಈ ಪ್ರದರ್ಶನ ಹಮ್ಮಿಕೊಳ್ಳಲಾಗಿದೆ.
ಈ ಪ್ರದರ್ಶನಕ್ಕೆ ಹೋಗುತ್ತಿದ್ದಂತೆ ‘ನಮ್ಮ ಶಿವಮೊಗ್ಗ’ ಘೋಷವಾಕ್ಯವಿದೆ. ಬಳಿಕ ಪುಷ್ಪದಲ್ಲಿ ನಿರ್ಮಾಣವಾದ ಕೆಳದಿಯ ಶಿವಪ್ಪ ನಾಯಕನ ಪ್ರತಿಮೆ, ಶಿಕಾರಿಪುರ ತಾಲೂಕಿನ ಬಳ್ಳಿಗಾವಿಯ ಕೇದಾರನಾಥ ದೇವಾಲಯ ಹಾಗೂ ಜಗತ್ ಪ್ರಸಿದ್ಧ ಜೋಗ ಜಲಪಾತ ಜನಾಕರ್ಷಕವಾಗಿದೆ. ಇದರ ಸುತ್ತ ವಿವಿಧ ಕರಕುಶಲ ವಸ್ತುಗಳ ಪ್ರದರ್ಶನ ಹಾಗೂ ಮಾರಾಟದ ಮಳಿಗೆ ಸೂಜಿಗಲ್ಲಿನಂತೆ ಪ್ರೇಕ್ಷಕರನ್ನು ಸೆಳೆಯುತ್ತವೆ.
ಇನ್ನು, ಶಿವಮೊಗ್ಗದ ಹಾರನಹಳ್ಳಿ ಮಹಿಳೆಯಿಂದ ಮಾಡಲ್ಪಡುವ ವಿವಿಧ ಮಣ್ಣಿನ ದೀಪಗಳು, ವಿವಿಧ ಅಲಂಕಾರಿಕ ವಸ್ತುಗಳು, ಕೊಪ್ಪಳದ ಕಿನ್ನಾಳೆ ಹಾಗೂ ಚನ್ನಪಟ್ಟಣದ ಗೊಂಬೆಗಳು, ಕೈಯಿಂದ ಕೆತ್ತನೆ ಮಾಡಿದ ಬಿದಿರಿನ ವಾಟರ್ ಬಾಟಲಿ, ಮರದ ಲ್ಯಾಂಪ್, ಗಂಡಭೇರುಂಡ ಸೇರಿದಂತೆ ಎಲ್ಲವೂ ಸುಂದರ ಮತ್ತು ಅತ್ಯಾಕರ್ಷಕವಾಗಿವೆ.
ಅದಲ್ಲದೇ ಕೃಷಿ ಇಲಾಖೆಯ ಸಿರಿಧಾನ್ಯದ ರಂಗೋಲಿ ಅದ್ಭುತವಾಗಿದೆ. ಇದರಲ್ಲಿ ಆನೆಗುಂದಿಯ ಬಾಳೆ ನಾರಿನಿಂದ ತಯಾರಾದ ವಿವಿಧ ವಸ್ತುಗಳು ಹಾಗೂ ಮೆಕ್ಕೆಜೋಳದ ಸಿಪ್ಪೆಯಿಂದ ತಯಾರಾದ ಅಲಂಕಾರಿಕ ಹೂವುಗಳು ಹಾಗೂ ಜೋಳದ ಸಿಪ್ಪೆಯಿಂದ ತಯಾರಾದ ಸಿರಿಯಲ್ ದೀಪ. ಉಳಿದಂತೆ ಕೈಮಗ್ಗ, ರೇಷ್ಮೆ, ಕೃಷಿ ಸಂಬಂಧಿತ ವಿವಿಧ ತರಕಾರಿ, ಹಣ್ಣುಗಳು ಗಮನ ಸೆಳೆಯುತ್ತಿವೆ.
\ಇದನ್ನೂ ಓದಿ:ಕೋಲಾರ | ಗ್ರಾಮ ಪಂಚಾಯಿತಿ ಸಿಬ್ಬಂದಿಯಿಂದಲೇ ಮತಾಂತರ ಯತ್ನ ಆರೋಪ



















