ಮುಂಬೈ: ಬಾಲಿವುಡ್‌ನ ಖ್ಯಾತ ನೃತ್ಯ ಸಂಯೋಜಕ ಹಾಗೂ ನಿರ್ದೇಶಕ ರೆಮೋ ಡಿಸೋಜಾ ಅವರಿಗೆ ಸಂಬಂಧಿಸಿದ 2018ರ ಸುಲಿಗೆ ಪ್ರಕರಣಕ್ಕೆ ಸಂಬಂಧಿಸಿದಂತೆ ಭೂಗತ ಪಾತಕಿ ರವಿ ಪೂಜಾರಿಯನ್ನು ಮುಂಬೈ ಪೊಲೀಸರು ಅಧಿಕೃತವಾಗಿ ಬಂಧಿಸಿದ್ದಾರೆ. ಕಳೆದ ಐದು ವರ್ಷಗಳ ಹಿಂದೆ ಸೆನೆಗಲ್‌ನಿಂದ ಹಸ್ತಾಂತರಗೊಂಡ ನಂತರ ರವಿ ಪೂಜಾರಿ ಜೈಲಿನಲ್ಲಿದ್ದರೂ, ಈ ನಿರ್ದಿಷ್ಟ ಪ್ರಕರಣದಲ್ಲಿ ಆತನ ಬಂಧನ ಪ್ರಕ್ರಿಯೆ ಈವರೆಗೆ ನಡೆದಿರಲಿಲ್ಲ. ಗುರುವಾರ ಮುಂಬೈ ಕ್ರೈಂ ಬ್ರಾಂಚ್ ಪೊಲೀಸರು ಆತನನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು, ನ್ಯಾಯಾಲಯವು ಜನವರಿ 27ರವರೆಗೆ ಪೊಲೀಸ್ ವಶಕ್ಕೆ ಒಪ್ಪಿಸಿ ಆದೇಶ ನೀಡಿದೆ.
50 ಲಕ್ಷ ರೂಪಾಯಿ ಸುಲಿಗೆಗೆ ಬೇಡಿಕೆ
ಸಿನಿಮಾವೊಂದರ ವಿವಾದಕ್ಕೆ ಸಂಬಂಧಿಸಿದ ಪ್ರಕರಣ ಇದಾಗಿದೆ. ಸತ್ಯೇಂದ್ರ ತ್ಯಾಗಿ ಎಂಬ ವ್ಯಕ್ತಿಯ ಪರವಾಗಿ ರವಿ ಪೂಜಾರಿಯು ರೆಮೋ ಡಿಸೋಜಾ ಕುಟುಂಬಕ್ಕೆ ಬೆದರಿಕೆ ಹಾಕಿದ್ದ ಎಂದು ಆರೋಪಿಸಲಾಗಿದೆ. 2016ರ ಅಕ್ಟೋಬರ್‌ನಿಂದ 2018ರ ಫೆಬ್ರವರಿ ನಡುವೆ ರವಿ ಪೂಜಾರಿ ಅವರು ರೆಮೋ ಡಿಸೋಜಾ, ಅವರ ಪತ್ನಿ ಲಿಜೆಲ್ ಡಿಸೋಜಾ ಮತ್ತು ಅವರ ಮ್ಯಾನೇಜರ್‌ಗೆ ಪದೇ ಪದೇ ಕರೆ ಮಾಡಿ ಬೆದರಿಕೆ ಹಾಕಿದ್ದ. ‘ಡೆತ್ ಆಫ್ ಅಮರ್’ ಚಿತ್ರವನ್ನು ಶೀಘ್ರವಾಗಿ ಬಿಡುಗಡೆ ಮಾಡುವಂತೆ ಒತ್ತಡ ಹೇರುವುದರ ಜೊತೆಗೆ, ಪ್ರಕರಣವನ್ನು ಇತ್ಯರ್ಥಪಡಿಸಲು 50 ಲಕ್ಷ ರೂಪಾಯಿ ನೀಡುವಂತೆ ಪೂಜಾರಿ ಬೇಡಿಕೆ ಇಟ್ಟಿದ್ದ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ಹಣಕಾಸಿನ ವಿವಾದವೇ ಮೂಲ ಕಾರಣ
ಈ ಇಡೀ ಘಟನೆಯು 2018ರಲ್ಲಿ ‘ಅಮರ್ ಮಸ್ಟ್ ಡೈ’ ಎಂಬ ಚಿತ್ರಕ್ಕೆ ಸಂಬಂಧಿಸಿದಂತೆ ರೆಮೋ ಡಿಸೋಜಾ ಮತ್ತು ಸತ್ಯೇಂದ್ರ ತ್ಯಾಗಿ ನಡುವೆ ಏರ್ಪಟ್ಟಿದ್ದ ಒಪ್ಪಂದದಿಂದ ಆರಂಭವಾಗಿತ್ತು. ಚಿತ್ರದ ಹಕ್ಕುಗಳು ಮತ್ತು ಹಣಕಾಸಿನ ವಿಚಾರದಲ್ಲಿ ಇಬ್ಬರ ನಡುವೆ ಭಿನ್ನಾಭಿಪ್ರಾಯ ಉಂಟಾಗಿತ್ತು. ರೆಮೋ ಡಿಸೋಜಾ ತಮಗೆ 5 ಕೋಟಿ ರೂಪಾಯಿ ಬಾಕಿ ಉಳಿಸಿಕೊಂಡಿದ್ದಾರೆ ಎಂದು ಆರೋಪಿಸಿದ್ದ ತ್ಯಾಗಿ, ಆ ಹಣವನ್ನು ವಸೂಲಿ ಮಾಡಲು ರವಿ ಪೂಜಾರಿಯ ಸಹಾಯ ಕೋರಿದ್ದ ಎನ್ನಲಾಗಿದೆ. ಈ ಹಿನ್ನೆಲೆಯಲ್ಲಿ ಪೂಜಾರಿ ಬೆದರಿಕೆ ತಂತ್ರಕ್ಕೆ ಮುಂದಾಗಿದ್ದನು. ಇದೀಗ ಮುಂಬೈ ಪೊಲೀಸರು ಈ ಪ್ರಕರಣದ ತನಿಖೆಯನ್ನು ಚುರುಕುಗೊಳಿಸಿದ್ದಾರೆ.
ಇದನ್ನೂ ಓದಿ: ಯಮುನೆಯಲ್ಲಿ ಅಮೋನಿಯಾ ಮಟ್ಟ ಹೆಚ್ಚಳ | ದೆಹಲಿಯಲ್ಲಿ ಒಣಗಿದ ನಲ್ಲಿಗಳು, ತೀವ್ರಗೊಂಡ ಕುಡಿಯುವ ನೀರಿನ ಬಿಕ್ಕಟ್ಟು



















