ಬೆಂಗಳೂರು: ಭಾರತೀಯ ವಾಣಿಜ್ಯ ವಾಹನ ಲೋಕದ ಇತಿಹಾಸದಲ್ಲಿ ತನ್ನದೇ ಆದ ಮೈಲಿಗಲ್ಲು ಸ್ಥಾಪಿಸಿದ್ದ ಎರಡು ಐಕಾನಿಕ್ ಹೆಸರುಗಳು ಈಗ ಮತ್ತೆ ರಸ್ತೆಗಿಳಿಯಲು ಸಜ್ಜಾಗಿವೆ. ಅಶೋಕ್ ಲೇಲ್ಯಾಂಡ್ ಸಂಸ್ಥೆಯು ತನ್ನ ಸುಪ್ರಸಿದ್ಧ ‘ಟಾರಸ್’ (Taurus) ಮತ್ತು ‘ಹಿಪ್ಪೋ’ (Hippo) ಟ್ರಕ್ ಬ್ರ್ಯಾಂಡ್‌ಗಳನ್ನು ಅತ್ಯಾಧುನಿಕ ತಂತ್ರಜ್ಞಾನದೊಂದಿಗೆ ಮರುಪರಿಚಯಿಸಿದೆ. ಮೂಲಸೌಕರ್ಯ ಅಭಿವೃದ್ಧಿ, ಗಣಿಗಾರಿಕೆ ಮತ್ತು ಸುದೀರ್ಘ ಪ್ರಯಾಣದ ಸರಕು ಸಾಗಣೆ ಕ್ಷೇತ್ರವನ್ನು ಗುರಿಯಾಗಿಸಿಕೊಂಡು ಈ ಬಲಿಷ್ಠ ಟ್ರಕ್‌ಗಳನ್ನು ವಿನ್ಯಾಸಗೊಳಿಸಲಾಗಿದೆ.

1980ರ ದಶಕದಿಂದ 2000ರ ಆರಂಭದವರೆಗೆ ಭಾರತದ ಹೆದ್ದಾರಿಗಳಲ್ಲಿ ಅಧಿಪತ್ಯ ಸ್ಥಾಪಿಸಿದ್ದ ‘ಹಿಪ್ಪೋ’ ಟ್ರಕ್‌ಗಳು ತನ್ನ ದೃಢತೆಗೆ ಹೆಸರಾಗಿದ್ದವು. ಅದೇ ರೀತಿ, ಭಾರತದ ಮೊದಲ ಮಲ್ಟಿ-ಆಕ್ಸಲ್ ಟ್ರಕ್ ಎಂಬ ಹೆಗ್ಗಳಿಕೆ ಪಾತ್ರವಾಗಿದ್ದ ‘ಟಾರಸ್’, ಎಂತಹ ಕಠಿಣ ಸನ್ನಿವೇಶದಲ್ಲೂ ಭಾರೀ ಹೊರೆ ಹೊರುವ ಸಾಮರ್ಥ್ಯ ಹೊಂದಿತ್ತು. ಈ ಪರಂಪರೆಯನ್ನು ಮುಂದುವರಿಸಲು ಈಗ ಇವುಗಳನ್ನು ಕಂಪನಿಯ ಸುಧಾರಿತ ‘AVTR’ ಮಾಡ್ಯುಲರ್ ಪ್ಲಾಟ್‌ಫಾರ್ಮ್ ಅಡಿಯಲ್ಲಿ ಮರುನಿರ್ಮಾಣ ಮಾಡಲಾಗಿದೆ.
ತಾಂತ್ರಿಕ ಸಾಮರ್ಥ್ಯ
ಹೊಸ ಅವತಾರದಲ್ಲಿ ಬಂದಿರುವ ಈ ಎರಡೂ ಟ್ರಕ್‌ಗಳು 8.0-ಲೀಟರ್ ಸಾಮರ್ಥ್ಯದ A-ಸರಣಿಯ 6-ಸಿಲಿಂಡರ್ ಎಂಜಿನ್ ಹೊಂದಿವೆ. ಇವು ಬರೋಬ್ಬರಿ 360bhp ಪವರ್ ಮತ್ತು 1,600Nm ಟಾರ್ಕ್ ಉತ್ಪಾದಿಸುವ ಶಕ್ತಿಯನ್ನು ಹೊಂದಿವೆ. ಇದರಿಂದಾಗಿ ಅತಿ ಹೆಚ್ಚಿನ ಭಾರವನ್ನು ಹೊತ್ತು ಸಾಗುವುದು ಈ ಟ್ರಕ್‌ಗಳಿಗೆ ಸುಲಭವಾಗಲಿದೆ. ಟಾರಸ್ ಸರಣಿಯು ಮುಖ್ಯವಾಗಿ ಗಣಿಗಾರಿಕೆ ಮತ್ತು ಮೂಲಸೌಕರ್ಯ ಯೋಜನೆಗಳಲ್ಲಿ ಬಳಸುವ ‘ಟಿಪ್ಪರ್’ ವಿಭಾಗಕ್ಕೆ ಸೀಮಿತವಾಗಿದ್ದರೆ, ಹಿಪ್ಪೋ ಸರಣಿಯು ‘ಹೆವಿ-ಡ್ಯೂಟಿ ಟ್ರ್ಯಾಕ್ಟರ್’ ವಿಭಾಗದಲ್ಲಿ ಕಾರ್ಯನಿರ್ವಹಿಸಲಿದೆ.

ಸುರಕ್ಷತೆ ಮತ್ತು ಚಾಲಕನ ಆರಾಮಕ್ಕೆ ಆದ್ಯತೆ
ಹೊಸ ಮಾದರಿಯ ಈ ಟ್ರಕ್‌ಗಳಲ್ಲಿ ಸುರಕ್ಷತೆಗೆ ಹೆಚ್ಚಿನ ಆದ್ಯತೆ ನೀಡಲಾಗಿದೆ. ‘ಹಿಲ್ ಸ್ಟಾರ್ಟ್ ಅಸಿಸ್ಟ್’ ಮತ್ತು ‘ಆಟೋಮ್ಯಾಟಿಕ್ ಟ್ರಾಕ್ಷನ್ ಕಂಟ್ರೋಲ್’ ನಂತಹ ಫೀಚರ್‌ಗಳನ್ನು ಸ್ಟ್ಯಾಂಡರ್ಡ್ ಆಗಿ ನೀಡಲಾಗಿದೆ. ಇನ್ನು ಹಿಪ್ಪೋ ಮಾದರಿಯಲ್ಲಿ ಆಯ್ಕೆಯ ಮೇರೆಗೆ ಅಡ್ವಾನ್ಸ್ಡ್ ಡ್ರೈವರ್ ಅಸಿಸ್ಟೆನ್ಸ್ ಸಿಸ್ಟಮ್ (ADAS), ಟೈರ್ ಪ್ರೆಶರ್ ಮಾನಿಟರಿಂಗ್ ಸಿಸ್ಟಮ್ (TPMS) ಮತ್ತು ರಿವರ್ಸ್ ಕ್ಯಾಮೆರಾಗಳನ್ನು ಅಳವಡಿಸಿಕೊಳ್ಳಬಹುದು. ಚಾಲಕರಿಗೆ ದೀರ್ಘ ಪ್ರಯಾಣದ ವೇಳೆ ಆಯಾಸವಾಗದಂತೆ ಕ್ಯಾಬಿನ್‌ಗಳನ್ನು ಅತ್ಯಂತ ಆರಾಮದಾಯಕವಾಗಿ ವಿನ್ಯಾಸಗೊಳಿಸಲಾಗಿದೆ.
ಕಂಪನಿಯ ವ್ಯವಸ್ಥಾಪಕ ನಿರ್ದೇಶಕ ಮತ್ತು ಸಿಇಒ ಶೇಣು ಅಗರ್ವಾಲ್ ಅವರು ಈ ಟ್ರಕ್‌ಗಳನ್ನು ಅನಾವರಣಗೊಳಿಸಿದ್ದು, ಈಗಾಗಲೇ ದೇಶಾದ್ಯಂತ ಇರುವ ಅಶೋಕ್ ಲೇಲ್ಯಾಂಡ್ ಡೀಲರ್‌ಶಿಪ್‌ಗಳಲ್ಲಿ ಇವುಗಳ ಬುಕಿಂಗ್ ಮತ್ತು ವಿತರಣೆ ಆರಂಭವಾಗಿದೆ. ಭಾರತದ ಕೈಗಾರಿಕಾ ವಲಯದಲ್ಲಿ ಈ ಹಳೆಯ ಹೆಸರುಗಳ ಹೊಸ ಆವೃತ್ತಿಗಳು ಮತ್ತೊಮ್ಮೆ ಕ್ರಾಂತಿ ಮಾಡಲಿವೆ ಎಂಬುದು ಮಾರುಕಟ್ಟೆ ತಜ್ಞರ ಅಭಿಪ್ರಾಯ.
ಇದನ್ನೂ ಓದಿ: ಗಣರಾಜ್ಯೋತ್ಸವದ ಸಂಭ್ರಮಕ್ಕೆ ಮಹೀಂದ್ರಾ ಮೆರುಗು | ರೈತರಿಗಾಗಿ ಬಿಡುಗಡೆಯಾಯ್ತು ತ್ರಿವರ್ಣದ ಸೀಮಿತ ಆವೃತ್ತಿಯ ಟ್ರ್ಯಾಕ್ಟರ್‌ಗಳು!



















