ಬೆಂಗಳೂರು : ನಟೋರಿಯಸ್ ರೌಡಿ ಶಬ್ಬೀರ್ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಎಂಟು ಆರೋಪಿಗಳನ್ನು ಬಂಡೆಪಾಳ್ಯ ಪೊಲೀಸರು ಬಂಧಿಸಿದ್ದು, ಆರೋಪಿಗಳು ಏರಿಯಾದಲ್ಲಿ ಹವಾ ಮೇಂಟೇನ್ ಮಾಡಲು ಕೊಲೆ ಮಾಡಿರುವುದು ತನಿಖೆ ವೇಳೆ ಬೆಳಕಿಗೆ ಬಂದಿದೆ.
ರೌಡಿ ಶಬ್ಬೀರ್ 7-8 ವರ್ಷಗಳಿಂದ ಏರಿಯಾದಲ್ಲಿ ಹವಾ ಮೇಂಟೇನ್ ಮಾಡ್ತಿದ್ದ. ಇಡೀ ಏರಿಯಾದಲ್ಲಿ ಈತನನ್ನು ಬಿಟ್ಟು ಯಾರೂ ಯಾವುದೇ ವ್ಯವಹಾರ ಮಾಡುವಂತಿರಲಿಲ್ಲ. ಯಾರಾದ್ರೂ ಶಬ್ಬೀರ್‌ನ ಮೀರಿ ಹಫ್ತಾ ವಸೂಲಿ, ಸೆಟಲ್ಮೆಂಟ್ ಮಾಡಿದ್ರೆ ಗಲಾಟೆ ಮಾಡ್ತಿದ್ದ. ಕೂಡಲೇ ಅವರನ್ನು ಕರೆಸಿ ಬೆದರಿಕೆ ಹಾಕಿ, ಹಲ್ಲೆ ಕೂಡ ಮಾಡ್ತಾ ಇದ್ದ. ಜೊತೆಗೆ ಮುಂದೆ ಹೀಗೆ ಮಾಡಲ್ಲ ಅಂತ ಕ್ಷಮೆ ಕೇಳಿಸ್ತಾ ಇದ್ದ ಎನ್ನಲಾಗಿದೆ. ಸುಮಾರು 10-15 ಜನ ಶಬ್ಬೀರ್‌ನಿಂದ ಹಲ್ಲೆಗೊಳಗಾಗಿದ್ದರು.
ಹೀಗಾಗಿ ಶಬ್ಬೀರ್ ಇದ್ರೆ ನಮ್ಮ ವ್ಯವಹಾರಗಳು ನಡೆಯಲ್ಲ ಅಂತ ಕೊಲೆಗೆ ಸ್ಕೆಚ್ ಹಾಕಿದ್ದ ಬಂಧಿತ ಎಂಟು ಆರೋಪಿಗಳು, ಎರಡು ಬಾರಿ ಭಯದಿಂದ ಹಿಂದೆ ಸರಿದಿದ್ದರು. ತಾಯಿಯ ಅಂತ್ಯಕ್ರಿಯೆ ಮಾಡಿ ಬರುವಾಗ, ಮತ್ತೊಮ್ಮೆ ಮಸೀದಿಯಿಂದ ನಮಾಜ್ ಮಾಡಿ ಬರುವಾಗ ರೌಡಿ ಶಬ್ಬೀರ್ ಕೊಲೆಗೆ ಸ್ಕೆಚ್ ಹಾಕಲಾಗಿತ್ತು.
ಕೊನೆಗೆ ಜನವರಿ 12ರಂದು ಮುಗಿಸಲೇಬೇಕು ಅಂತ ಫ್ಲಾನ್ ಮಾಡಿದ್ದ ಆರೋಪಿಗಳು, ರಾತ್ರಿ 10:30ರ ಸುಮಾರಿಗೆ ಮಂಗಮ್ಮನಪಾಳ್ಯದಲ್ಲಿ ಶಬ್ಬೀರ್‌ನನ್ನು ಕೊಲೆ ಮಾಡಿದ್ದರು. ಆಟೋದಲ್ಲಿ ಬರ್ತಿದ್ದ ಶಬ್ಬೀರ್‌ನ ಮನಸೋ ಇಚ್ಛೆ ಕೊಚ್ಚಿ ಹತ್ಯೆ ಮಾಡಿದ್ದರು. ಸದ್ಯ ಪ್ರಕರಣ ಸಂಬಂಧ ಉಮ್ರಾಜ್, ನದೀಮ್, ಸೈಯದ್ ಕಾಸಿಂ, ಸಲ್ಮಾನ್ ಖಾನ್, ಸೈಯದ್ ಸಿದ್ದಿಕ್, ಮಹಮದ್ ಅಲಿ, ಸೈಯದ್ ಇಸ್ಮಾಯಿಲ್ ಹಾಗೂ ನೂರುಲ್ಲಾ ಬಂಧಿಸಲಾಗಿದೆ. ಬಂಧಿತರನ್ನು ಬಂಡೆಪಾಳ್ಯ ಪೊಲೀಸರು ಹೆಚ್ಚಿನ ವಿಚಾರಣೆ ನಡೆಸುತ್ತಿದ್ದಾರೆ.
ಇದನ್ನೂ ಓದಿ : ಮಾಕಳಿ ಬಳಿ ಸರಣಿ ಅಪಘಾತ | ಬೈಕ್ ಸವಾರ ಮೃತಪಟ್ಟರೂ ಲೆಕ್ಕಿಸದೆ ಮೂಟೆಯಲ್ಲಿ ಈರುಳ್ಳಿ ತುಂಬಿಕೊಂಡು ಹೋದ ಜನ!



















