ನವದೆಹಲಿ : ಬಿಜೆಪಿ ನೂತನ ಅಧ್ಯಕ್ಷ ನಿತಿನ್ ನಬಿನ್ ಅವರಿಗೆ ಕೇಂದ್ರ ಸರ್ಕಾರ ಉನ್ನತ ದರ್ಜೆಯ VIP ಭದ್ರತಾ ವ್ಯವಸ್ಥೆ ಒದಗಿಸಿದೆ. ಕೇಂದ್ರ ಮೀಸಲು ಪೊಲೀಸ್ ಪಡೆಯ (CRPF) ವಿಐಪಿ ಭದ್ರತಾ ವಿಭಾಗವು ನಬಿನ್ ಅವರಿಗೆ Z ಶ್ರೇಣಿಯ (Z Category security) ಭದ್ರತೆಯನ್ನು ಒದಗಿಸಲಿದೆ.
ಬಿಜೆಪಿಯ ನೂತನ ರಾಷ್ಟ್ರೀಯ ಅಧ್ಯಕ್ಷರಾಗಿ ಅವರ ಹೆಸರನ್ನು ಘೋಷಿಸಿದ ಬಳಿಕ ಅವರಿಗೆ ಭದ್ರತೆ ನೀಡುವಂತೆ ಕೇಂದ್ರ ಗೃಹ ಸಚಿವಾಲಯವು ಸಿಆರ್‌ಪಿಎಫ್‌ಗೆ ಸೂಚಿಸಿತ್ತು ಎಂದು ಅಧಿಕಾರಿಗಳು ತಿಳಿಸಿದ್ದಾರೆ. ನಿರ್ಗಮಿತ ಅಧ್ಯಕ್ಷ ಜೆ.ಪಿ ನಡ್ಡಾ ಅವರಿಗೂ ಸರ್ಕಾರ ಈ ಹಿಂದೆ ಇದೇ ರೀತಿಯ ಭದ್ರತೆ ಒದಗಿಸಿತ್ತು.
ಐದು ಬಾರಿ ಬಿಹಾರ ಶಾಸಕರಾಗಿರುವ ನಬಿನ್ ಸೋಮವಾರ (ಜ.20) ಬಿಜೆಪಿ ರಾಷ್ಟ್ರೀಯ ಅಧ್ಯಕ್ಷರಾಗಿ ಅವಿರೋಧವಾಗಿ ಆಯ್ಕೆಯಾದರು. ಈ ಮೂಲಕ ಉನ್ನತ ಹುದ್ದೆಯನ್ನು ಅಲಂಕರಿಸಿದ ಅತ್ಯಂತ ಕಿರಿಯ ವ್ಯಕ್ತಿ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ನಿತಿನ್ ನಬಿನ್ ಅವರನ್ನು ಶ್ಲಾಘಿಸಿದ ಪ್ರಧಾನಿ, ಅವರು ಪಕ್ಷದ ಪರಂಪರೆಯನ್ನು ಮುಂದುವರಿಸುವ ಮಿಲೇನಿಯಲ್. ಅವರು ನನ್ನ ಬಾಸ್, ನಾನು ಬಿಜೆಪಿಯ ಕಾರ್ಯಕರ್ತ ಎಂದು ಬಣ್ಣಿಸಿದ್ದಾರೆ.
ವಿಐಪಿ ಭದ್ರತಾ ವ್ಯವಸ್ಥೆ
ಕೇಂದ್ರ ರಕ್ಷಣಾ ಪಟ್ಟಿಯಡಿಯ ವಿಐಪಿ ಭದ್ರತಾ ವ್ಯಾಪ್ತಿಯಲ್ಲಿ ಝಡ್-ಪ್ಲಸ್, ಝಡ್, ವೈ, ವೈ-ಪ್ಲಸ್ ಮತ್ತು ಎಕ್ಸ್ ವರ್ಗಗಳಿರುತ್ತವೆ. ಕೇಂದ್ರ ಗೃಹ ಸಚಿವ ಅಮಿತ್ ಶಾ, ಗಾಂಧಿ ಕುಟುಂಬ ಮತ್ತು ಹಲವಾರು ಇತರ ರಾಜಕಾರಣಿಗಳು ಮತ್ತು ಉನ್ನತ ಹುದ್ದೆಯಲ್ಲಿರುವ ವ್ಯಕ್ತಿಗಳಿಗೆ ಸಿಆರ್‌ಪಿಎಫ್ ಸಿಬ್ಬಂದಿಯಿಂದ ಈ ಭದ್ರತೆ ದೊರೆಯುತ್ತದೆ.
ಇದನ್ನೂ ಓದಿ : ಹಾವೇರಿಯಲ್ಲಿ ಲಾರಿ-ಬೈಕ್ ನಡುವೆ ಭೀಕರ ಅಪಘಾತ | ಸವಾರ ಸಾ*ವು



















