ಬೆಂಗಳೂರು: ಭಾರತೀಯ ಆಟೋಮೊಬೈಲ್ ಮಾರುಕಟ್ಟೆಯಲ್ಲಿ ದೊಡ್ಡ ಕುಟುಂಬಗಳಿಗೆ ಸರಿಹೊಂದುವ 7-ಸೀಟರ್ ಎಸ್‌ಯುವಿಗಳಿಗೆ ಬೇಡಿಕೆ ದಿನೇ ದಿನೇ ಹೆಚ್ಚುತ್ತಿದೆ. ಇದನ್ನು ಗಮನದಲ್ಲಿಟ್ಟುಕೊಂಡು ಮಹೀಂದ್ರಾ, ವೋಕ್ಸ್‌ವ್ಯಾಗನ್ ಮತ್ತು ಎಂಜಿ ಮೋಟಾರ್ಸ್ ಸೇರಿದಂತೆ ಪ್ರಮುಖ ಕಂಪನಿಗಳು 2026ರಲ್ಲಿ ತಮ್ಮ ಹೊಸ ಮಾಡೆಲ್‌ಗಳನ್ನು ಬಿಡುಗಡೆ ಮಾಡಲು ಸಜ್ಜಾಗಿವೆ. ಈ ಸಾಲಿನಲ್ಲಿ ಎಲೆಕ್ಟ್ರಿಕ್ ಮತ್ತು ಇಂಧನ ಚಾಲಿತ ಎರಡೂ ಮಾದರಿಯ ವಾಹನಗಳು ಸೇರಿವೆ.
ವೋಕ್ಸ್‌ವ್ಯಾಗನ್ ಟೈರೋನ್ ಆರ್-ಲೈನ್ (Volkswagen Tayron R-Line)
ವೋಕ್ಸ್‌ವ್ಯಾಗನ್ ಕಂಪನಿಯು ತನ್ನ ಫ್ಲ್ಯಾಗ್‌ಶಿಪ್ ಎಸ್‌ಯುವಿ ‘ಟೈರೋನ್ ಆರ್-ಲೈನ್’ ಅನ್ನು 2026ರ ಮೊದಲ ತ್ರೈಮಾಸಿಕದಲ್ಲಿ (Q1 2026) ಬಿಡುಗಡೆ ಮಾಡುವ ನಿರೀಕ್ಷೆಯಿದೆ. ಇದು ಪ್ರಸ್ತುತ ಇರುವ ಟೈಗನ್ ಆರ್-ಲೈನ್ ಮಾದರಿಗಿಂತಲೂ ದೊಡ್ಡದಾಗಿರಲಿದ್ದು, ಪ್ರೀಮಿಯಂ ಫೀಚರ್‌ಗಳನ್ನು ಹೊಂದಿರಲಿದೆ. ಇದರಲ್ಲಿ 2.0-ಲೀಟರ್ ಟರ್ಬೊ-ಪೆಟ್ರೋಲ್ ಎಂಜಿನ್ ಬಳಸಲಾಗಿದ್ದು, ಇದು 204 hp ಪವರ್ ಮತ್ತು 320 Nm ಟಾರ್ಕ್ ಉತ್ಪಾದಿಸುವ ಸಾಮರ್ಥ್ಯ ಹೊಂದಿದೆ. ಇದರ ಅಂದಾಜು ಬೆಲೆ 45 ರಿಂದ 50 ಲಕ್ಷ ರೂಪಾಯಿಗಳಾಗಬಹುದು.

ಎಂಜಿ ಮೆಜೆಸ್ಟರ್ (MG Majestor)
ಎಂಜಿ ಮೋಟಾರ್ಸ್ ತನ್ನ ಜನಪ್ರಿಯ ಗ್ಲೋಸ್ಟರ್ ಎಸ್‌ಯುವಿಯ ಉತ್ತರಾಧಿಕಾರಿಯಾಗಿ ‘ಮೆಜೆಸ್ಟರ್’ ಅನ್ನು ಫೆಬ್ರವರಿ 12, 2026 ರಂದು ಬಿಡುಗಡೆ ಮಾಡಲು ನಿರ್ಧರಿಸಿದೆ. ಇದು 2025ರ ಭಾರತ್ ಮೊಬಿಲಿಟಿ ಎಕ್ಸ್‌ಪೋದಲ್ಲಿ ಈಗಾಗಲೇ ಪ್ರದರ್ಶನಗೊಂಡಿದೆ. ಇದರಲ್ಲಿ 2.0-ಲೀಟರ್ ಟ್ವಿನ್-ಟರ್ಬೊ ಡೀಸೆಲ್ ಎಂಜಿನ್ ಇರಲಿದ್ದು, 4×4 ಸಿಸ್ಟಮ್ ಮತ್ತು ಲೆವೆಲ್ 2 ADAS ಸುರಕ್ಷತಾ ಫೀಚರ್‌ಗಳು ಇರಲಿವೆ. ಟೊಯೋಟಾ ಫಾರ್ಚುನರ್ ಮತ್ತು ಜೀಪ್ ಮೆರಿಡಿಯನ್‌ಗೆ ಇದು ನೇರ ಪೈಪೋಟಿ ನೀಡಲಿದೆ.
ಮಹೀಂದ್ರಾ ಸ್ಕಾರ್ಪಿಯೋ-ಎನ್ ಫೇಸ್‌ಲಿಫ್ಟ್ (Mahindra Scorpio-N Facelift)
ಭಾರತೀಯರ ನೆಚ್ಚಿನ ಎಸ್‌ಯುವಿ ಸ್ಕಾರ್ಪಿಯೋ-ಎನ್ ಈಗ ಹೊಸ ರೂಪ ಪಡೆಯುತ್ತಿದೆ. 2026ರ ಏಪ್ರಿಲ್ ವೇಳೆಗೆ ಇದರ ಫೇಸ್‌ಲಿಫ್ಟ್ ಆವೃತ್ತಿ ಬಿಡುಗಡೆಯಾಗುವ ಸಾಧ್ಯತೆಯಿದೆ. ವಿನ್ಯಾಸದಲ್ಲಿ ಹೆಚ್ಚಿನ ಬದಲಾವಣೆ ಇಲ್ಲದಿದ್ದರೂ, ಇಂಟೀರಿಯರ್‌ನಲ್ಲಿ ದೊಡ್ಡ ಟಚ್‌ಸ್ಕ್ರೀನ್, ಸುಧಾರಿತ ಸೌಂಡ್ ಸಿಸ್ಟಮ್ ಮತ್ತು ಸೇಫ್ಟಿ ಫೀಚರ್‌ಗಳನ್ನು ಅಪ್‌ಡೇಟ್ ಮಾಡಲಾಗುತ್ತದೆ. ಎಂಜಿನ್ ಆಯ್ಕೆಗಳು ಪ್ರಸ್ತುತ ಇರುವಂತೆಯೇ ಮುಂದುವರಿಯಲಿವೆ.

ರಿನಾಲ್ಟ್ ಬೋರಿಯಲ್ (Renault Boreal)
ರೆನಾಲ್ಟ್ ಇಂಡಿಯಾ ತನ್ನ ಮುಂದಿನ ತಲೆಮಾರಿನ ಡಸ್ಟರ್ ಬಿಡುಗಡೆ ಮಾಡಿದ ನಂತರ, ಅದರ 7-ಸೀಟರ್ ಆವೃತ್ತಿಯಾದ ‘ಬೋರಿಯಲ್’ ಅನ್ನು ಪರಿಚಯಿಸಲಿದೆ. ಇದು 2026ರ ಜುಲೈ ಅಥವಾ ಆಗಸ್ಟ್ ವೇಳೆಗೆ ಮಾರುಕಟ್ಟೆಗೆ ಬರಬಹುದು. 1.3-ಲೀಟರ್ ಟರ್ಬೊ ಪೆಟ್ರೋಲ್ ಎಂಜಿನ್ ಮತ್ತು 7-ಸೀಟರ್ ಲೇಔಟ್‌ನೊಂದಿಗೆ ಇದು ಟಾಟಾ ಸಫಾರಿ ಮತ್ತು ಎಂಜಿ ಹೆಕ್ಟರ್ ಪ್ಲಸ್‌ಗೆ ಸವಾಲಾಗಲಿದೆ. ಇದರ ಬೆಲೆ 15 ರಿಂದ 25 ಲಕ್ಷ ರೂಪಾಯಿಗಳ ಒಳಗೆ ಇರುವ ನಿರೀಕ್ಷೆಯಿದೆ.

ನಿಸ್ಸಾನ್ ಹೊಸ 7-ಸೀಟರ್ ಎಸ್‌ಯುವಿ (Nissan 7-Seater SUV)
ನಿಸ್ಸಾನ್ ಕಂಪನಿಯು ತನ್ನ ಕಾರ್ಯತಂತ್ರದ ಭಾಗವಾಗಿ CMF-B ಪ್ಲಾಟ್‌ಫಾರ್ಮ್ ಆಧಾರಿತ ಹೊಸ 7-ಸೀಟರ್ ಎಸ್‌ಯುವಿಯನ್ನು 2026ರ ಅಂತ್ಯದ ವೇಳೆಗೆ ಬಿಡುಗಡೆ ಮಾಡಲು ಯೋಜಿಸಿದೆ. ಇದು ನಿಸ್ಸಾನ್ ಟೆಕ್ಟನ್ ಮತ್ತು ಗ್ರಾವಿಟೆ ಎಂಪಿವಿಗಳ ನಂತರ ಮಾರುಕಟ್ಟೆಗೆ ಬರಲಿದೆ. ಇದು ನಿಸ್ಸಾನ್‌ನ ಜಾಗತಿಕ ವಿನ್ಯಾಸ ಶೈಲಿಯನ್ನು ಹೊಂದಿರಲಿದ್ದು, ಮಧ್ಯಮ ಕ್ರಮಾಂಕದ ಎಸ್‌ಯುವಿ ವಿಭಾಗದಲ್ಲಿ ತನ್ನ ಅಸ್ತಿತ್ವವನ್ನು ಗಟ್ಟಿ ಮಾಡಿಕೊಳ್ಳಲು ಕಂಪನಿ ತಯಾರಿ ನಡೆಸಿದೆ.



















