ಸೂರತ್ : ಸೈಕಲ್ ಸವಾರಿ ಮಾಡುತ್ತಿದ್ದಾಗ ಗಾಳಿಪಟದ ದಾರ ಕುತ್ತಿಗೆ ಸೀಳಿ 8 ವರ್ಷದ ಬಾಲಕನೊಬ್ಬ ಮೃತಪಟ್ಟಿರುವ ಆಘಾತಕಾರಿ ಘಟನೆ ಗುಜರಾತ್‌ನ ಸೂರತ್ ಜಿಲ್ಲೆಯ ಆನಂದ್ ವಿಲ್ಲಾದಲ್ಲಿ ನಡೆದಿದೆ. ರೆಹನ್ಶ್ ಬೋರ್ಸೆ ಮೃತ ಬಾಲಕ.
ಕಟ್ಟಡದ ಕಾಂಪೌಂಡ್ ಬಳಿ ಮತ್ತೊಂದು ಮಗುವಿನೊಂದಿಗೆ ಸೈಕಲ್ ಸವಾರಿ ಮಾಡುತ್ತಿದ್ದಾಗ ಗಾಳಿಪಟದ ದಾರವು ಬಾಲಕನ ಗಂಟಲ ಬಳಿ ಸಿಲುಕಿ ಗಾಯವಾಗಿದೆ. ಇದರಿಂದಾಗಿ ಏಕಾಏಕಿ ಆತ ಸೈಕಲ್‌ನಿಂದ ಬಿದ್ದು ಮೃತಪಟ್ಟಿದ್ದಾನೆ. ಘಟನೆಯ ಬಗ್ಗೆ ಮಾಹಿತಿ ಪಡೆದ ನಂತರ, ಪೊಲೀಸರು ಸ್ಥಳಕ್ಕೆ ಆಗಮಿಸಿದಾಗ ಗಾಳಿಪಟದ ದಾರವು ತುಂಬಾ ಹರಿತವಾಗಿದ್ದು, ಅದು ಬಾಲಕ ರೆಹನ್ಶ್‌ನ ಗಂಟಲನ್ನು ತೀವ್ರವಾಗಿ ಕತ್ತರಿಸಿದೆ ಎಂದು ಮಾಹಿತಿ ನೀಡಿದ್ದಾರೆ.
ದೇಶಾದ್ಯಂತ ಮಕರ ಸಂಕ್ರಾಂತಿ ಹಬ್ಬದ ಸಂಭ್ರಮದ ನಡುವೆ ಗಾಳಿಪಟ ದಾರದಿಂದ ಸಾವು ಸಂಭವಿಸಿದ ಸರಣಿಯ ನಂತರ ಈ ಘಟನೆ ನಡೆದಿದೆ. ಬುಧವಾರ (ಜ.14) ಸೂರತ್‌ನಲ್ಲಿ 70 ಅಡಿ ಎತ್ತರದ ಫ್ಲೈಓವರ್‌ನಿಂದ ಕುಟುಂಬವೊಂದರ ಮೂವರು ಸದಸ್ಯರು ಬಿದ್ದಿದ್ದರು. ಗಾಳಿಪಟ ದಾರವೊಂದು ಅವರ ದ್ವಿಚಕ್ರ ವಾಹನದ ಮೇಲೆ ಸಿಕ್ಕಾಕೊಂಡ ಪರಿಣಾಮ ಈ ದುರ್ಘಟನೆ ಸಂಭವಿಸಿತ್ತು. ಘಟನೆಯಲ್ಲಿ ತಂದೆ ಮತ್ತು ಅವರ 7 ವರ್ಷದ ಪುತ್ರಿ ಸ್ಥಳದಲ್ಲೇ ಮೃತಪಟ್ಟರೆ, ತಾಯಿ ಗಂಭೀರ ಗಾಯಗೊಂಡಿದ್ದರು. ಆಸ್ಪತ್ರೆಗೆ ದಾಖಲಾಗಿದ್ದ ಅವರು ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟರು.
ಇದನ್ನೂ ಓದಿ : ಗಂಡ -ಹೆಂಡತಿ ಜಗಳ | ಪುಟ್ಟ ಮಗಳೊಂದಿಗೆ ಬೆಂಕಿ ಹಚ್ಚಿಕೊಂಡು ಪತ್ನಿ ಆತ್ಮಹತ್ಯೆ!



















