ಬೆಂಗಳೂರು : ಭಾರತೀಯ ಸೇನೆಯ ವೀರಯೋಧರ ತ್ಯಾಗ ಬಲಿದಾನವನ್ನು ನೆನೆದು ಇಂದು ಬ್ರಾಡ್ ವಿಷನ್ ವರ್ಲ್ಡ್ ಸ್ಕೂಲ್‌ನಲ್ಲಿ ಭಾರತೀಯ ಆರ್ಮಿ ದಿವಸ್ ಹಾಗೆಯೇ ಫೌಂಡರ್ ಡೇ ಅದ್ದೂರಿ ಆಚರಣೆ ನಡೆಸಲಾಯಿತು.

ಉಪಾಧ್ಯಕ್ಷರಾದ ಶ್ರೀಮತಿ ತಸೀನ್ ಆರ ಅವರು ಮಾತನಾಡಿ, ಶಿಕ್ಷಣ ಸಂಸ್ಥೆಗಳು ಕೇವಲ ಪಠ್ಯಜ್ಞಾನವಷ್ಟೇ ಅಲ್ಲ, ಮೌಲ್ಯಯುತ ನಾಗರಿಕರನ್ನು ರೂಪಿಸುವ ಹೊಣೆಗಾರಿಕೆಯನ್ನು ವಹಿಸಬೇಕು ಎಂದು ಹೇಳಿದರು. ಸಂಸ್ಥೆಯ ಬೆಳವಣಿಗೆ ಪಥ ಹಾಗೂ ಮುಂದಿನ ಯೋಜನೆಗಳ ಕುರಿತು ಮಾಹಿತಿ ನೀಡಿ, ಮಕ್ಕಳ ಸರ್ವತೋಮುಖ ಅಭಿವೃದ್ಧಿಗೆ ಸಂಸ್ಥೆ ಸದಾ ಬದ್ಧವಾಗಿರುವುದನ್ನು ತಿಳಿಸಿದರು.

ಮುಖ್ಯ ಅತಿಥಿಗಳಾಗಿ ಪಾಲ್ಗೊಂಡ ಶ್ರೀ ಪ್ರಣಬ್ ಪಾನಿ ಅವರು ಭಾರತೀಯ ಆರ್ಮಿಯ ಮಹತ್ವ, ದೇಶದ ಭದ್ರತೆಯಲ್ಲಿ ಸೇನೆಯ ಪಾತ್ರ ಮತ್ತು ಯುವ ಪೀಳಿಗೆಯಲ್ಲಿ ರಾಷ್ಟ್ರಭಕ್ತಿ ಬೆಳೆಸುವ ಅಗತ್ಯದ ಬಗ್ಗೆ ಮಾತನಾಡಿದರು. ಇನ್ನೋರ್ವ ಮುಖ್ಯ ಅತಿಥಿ ಶ್ರೀ ಇಸ್ಮಾಯಿಲ್ ಖಾನ್, ಶಾಲಾ ಹಂತದಲ್ಲೇ ಮಕ್ಕಳಿಗೆ ಶಿಸ್ತು, ತ್ಯಾಗ ಮತ್ತು ಸೇವಾಭಾವವನ್ನು ಕಲಿಸುವುದು ಅತ್ಯಂತ ಮುಖ್ಯ. ಇಂತಹ ಕಾರ್ಯಕ್ರಮಗಳು ವಿದ್ಯಾರ್ಥಿಗಳ ವ್ಯಕ್ತಿತ್ವ ನಿರ್ಮಾಣಕ್ಕೆ ಸಹಕಾರಿಯಾಗುತ್ತವೆ ಎಂದು ಹೇಳಿದರು.

ದೇಶದ ರಕ್ಷಣೆಗೆ ತಮ್ಮ ಜೀವನವನ್ನೇ ಅರ್ಪಿಸುವ ಭಾರತೀಯ ಸೇನಾಪಡೆಯ ಗೌರವವನ್ನು ಸ್ಮರಿಸುವ ಜೊತೆಗೆ, ಸಂಸ್ಥೆಯ ಸ್ಥಾಪನೆಯ ಹಿನ್ನಲೆ, ಅದರ ಧೈರ್ಯ-ಉದ್ದೇಶಗಳನ್ನು ವಿದ್ಯಾರ್ಥಿಗಳಿಗೆ ತಿಳಿಸುವ ಉದ್ದೇಶದಿಂದ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸಂಸ್ಥೆಯ ಅಧ್ಯಕ್ಷರಾದ ಡಾ. ಅತೀಕ್ ಅಹಮದ್ ರವರು ವಹಿಸಿದ್ದರು. ಅವರು ಮಾತನಾಡಿ, ಭಾರತೀಯ ಸೇನೆ ನಮ್ಮ ದೇಶದ ಹೆಮ್ಮೆ. ಸೇನೆಯ ಶೌರ್ಯ, ಶಿಸ್ತು ಮತ್ತು ತ್ಯಾಗಭಾವನೆ ವಿದ್ಯಾರ್ಥಿಗಳ ಜೀವನಕ್ಕೂ ಪ್ರೇರಣೆಯಾಗಬೇಕು ಎಂದರು.

ಪ್ರಾಂಶುಪಾಲರಾದ ಸುಖದ ದಾಸ್ ಅವರು ಸಂಸ್ಥೆಯ ಶೈಕ್ಷಣಿಕ ಸಾಧನೆಗಳು, ವಿದ್ಯಾರ್ಥಿಗಳ ಶಿಸ್ತಿನ ಬದುಕು ಮತ್ತು ಶಿಕ್ಷಕರ ಶ್ರಮದ ಕುರಿತು ಮಾತನಾಡಿ, ಪೋಷಕರ ಸಹಕಾರಕ್ಕೂ ಕೃತಜ್ಞತೆ ಸಲ್ಲಿಸಿದರು. ಉಪ ಪ್ರಾಂಶುಪಾಲರಾದ ರೂಬಿಯ ಝನಾಬ್ ಅವರು ಮಕ್ಕಳಲ್ಲಿ ಆತ್ಮವಿಶ್ವಾಸ, ನಾಯಕತ್ವ ಗುಣ ಮತ್ತು ಸಾಮಾಜಿಕ ಜವಾಬ್ದಾರಿಯನ್ನು ಬೆಳೆಸುವ ನಿಟ್ಟಿನಲ್ಲಿ ಸಂಸ್ಥೆ ಕೈಗೊಂಡಿರುವ ವಿವಿಧ ಚಟುವಟಿಕೆಗಳ ಬಗ್ಗೆ ವಿವರಿಸಿದರು. ತಣಿಸಂದ್ರ ಶಾಖೆಯ ಪ್ರಾಂಶುಪಾಲರಾದ ಅನುರಾಧ ಅವರು ವಿದ್ಯಾರ್ಥಿಗಳ ಸಾಂಸ್ಕೃತಿಕ ಮತ್ತು ಕ್ರೀಡಾ ಸಾಧನೆಗಳನ್ನು ಪ್ರಶಂಸಿದರು.
ಕಾರ್ಯಕ್ರಮದ ಪ್ರಮುಖ ಆಕರ್ಷಣೆಯಾಗಿ ವಿದ್ಯಾರ್ಥಿಗಳಿಂದ ದೇಶಭಕ್ತಿ ಗೀತೆಗಳು, ನೃತ್ಯ ಪ್ರದರ್ಶನಗಳು, ಭಾಷಣಗಳು ಹಾಗೂ ನಾಟಕಗಳು ನಡೆದವು. ಭಾರತೀಯ ಸೇನೆಯ ಶೌರ್ಯಗಾಥೆಯನ್ನು ಒಳಗೊಂಡ ನಾಟಕ ಪ್ರದರ್ಶನವು ಪ್ರೇಕ್ಷಕರಲ್ಲಿ ದೇಶಭಕ್ತಿಯ ಭಾವನೆಯನ್ನು ಮೂಡಿಸಿತು. ಫೌಂಡರ್ಸ್ ಡೇ ಅಂಗವಾಗಿ ಸಂಸ್ಥಾಪಕರ ಕನಸು, ಶಿಕ್ಷಣದ ಮೂಲಕ ಸಮಾಜ ನಿರ್ಮಾಣದ ಸಂದೇಶವನ್ನು ವಿದ್ಯಾರ್ಥಿಗಳು ಮನಮೋಹಕವಾಗಿ ನಿರೂಪಿಸಿದರು.ಪೋಷಕರು, ಶಿಕ್ಷಕರು, ಸಂಸ್ಥೆಯ ಸದಸ್ಯರು ಹಾಗೂ ಆಹ್ವಾನಿತ ಅತಿಥಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಕಾರ್ಯಕ್ರಮಕ್ಕೆ ಕಳೆಯನ್ನು ತಂದರು.
ಇದನ್ನೂ ಓದಿ : ಉಡುಪಿ | ಮಗಳ ಹುಟ್ಟುಹಬ್ಬದ ಸಂಭ್ರಮ.. ಪಾಳು ಬಿದ್ದ ಬಸ್ ನಿಲ್ದಾಣಕ್ಕೆ ರಂಗು ತುಂಬಿದ ಕಲಾವಿದ ಮಹೇಶ್ ಮರ್ಣೆ



















