ಢಾಕಾ: ಬಾಂಗ್ಲಾದೇಶದ ಮಾಜಿ ಪ್ರಧಾನಿ ಶೇಖ್ ಹಸೀನಾ ಅವರ ಅವಾಮಿ ಲೀಗ್ ಪಕ್ಷದ ಹಿಂದೂ ನಾಯಕ ಹಾಗೂ ಖ್ಯಾತ ಗಾಯಕ ಪ್ರೊಲೊಯ್ ಚಾಕಿ (60) ಅವರು ಪೊಲೀಸ್ ವಶದಲ್ಲಿರುವಾಗಲೇ ಮೃತಪಟ್ಟಿದ್ದಾರೆ. ಕಳೆದ ಭಾನುವಾರ ರಾತ್ರಿ ರಾಜಶಾಹಿ ವೈದ್ಯಕೀಯ ಕಾಲೇಜು ಆಸ್ಪತ್ರೆಯಲ್ಲಿ ಅವರು ನಿಧನರಾಗಿದ್ದು, ಈ ಮಾಹಿತಿ ಇದೀಗ ಬಹಿರಂಗವಾಗಿದೆ. ಸತತವಾಗಿ ಬಾಂಗ್ಲಾದಲ್ಲಿ ಹಿಂದೂ ಅಲ್ಪಸಂಖ್ಯಾತರ ಮೇಲೆ ದೌರ್ಜನ್ಯ, ಹತ್ಯೆಗಳು ಮುಂದುವರಿದಿರುವಂತೆಯೇ ಹಿಂದೂ ನಾಯಕನ ಲಾಕಪ್ ಡೆತ್ ನಡೆದಿರುವುದು ದೇಶದ ಅಲ್ಪಸಂಖ್ಯಾತರ ಸುರಕ್ಷತೆಯ ಬಗ್ಗೆ ಮತ್ತೆ ಆತಂಕ ಮೂಡಿಸಿದೆ.
ಪಬ್ನಾ ಜಿಲ್ಲೆಯ ಅವಾಮಿ ಲೀಗ್ ಘಟಕದ ಸಾಂಸ್ಕೃತಿಕ ವ್ಯವಹಾರಗಳ ಕಾರ್ಯದರ್ಶಿಯಾಗಿದ್ದ ಪ್ರೊಲೊಯ್ ಚಾಕಿ ಅವರನ್ನು 2024ರ ಆಗಸ್ಟ್‌ನಲ್ಲಿ ನಡೆದ ‘ಜುಲೈ ದಂಗೆ’ ಅಥವಾ ವಿದ್ಯಾರ್ಥಿ ಪ್ರತಿಭಟನೆಗೆ ಸಂಬಂಧಿಸಿದ ಪ್ರಕರಣವೊಂದರಲ್ಲಿ ಬಂಧಿಸಲಾಗಿತ್ತು. ಚಾಕಿ ಅವರು ಕೇವಲ ರಾಜಕಾರಣಿಯಷ್ಟೇ ಅಲ್ಲದೆ, 90ರ ದಶಕದ ಖ್ಯಾತ ಗಾಯಕ ಮತ್ತು ಸಂಗೀತ ನಿರ್ದೇಶಕರೂ ಆಗಿದ್ದರು. ಅಲ್ಲದೆ, ಪಬ್ನಾದ ಶ್ರೀ ಶ್ರೀ ರಾಮಕೃಷ್ಣ ಸೇವಾಶ್ರಮದ ಕಾರ್ಯದರ್ಶಿಯಾಗಿಯೂ ಸೇವೆ ಸಲ್ಲಿಸುತ್ತಿದ್ದರು.
ಚಿಕಿತ್ಸೆಯಲ್ಲಿ ನಿರ್ಲಕ್ಷ್ಯದ ಆರೋಪ
ಪ್ರೊಲೊಯ್ ಚಾಕಿ ಅವರ ಸಾವಿಗೆ ಜೈಲು ಅಧಿಕಾರಿಗಳ ನಿರ್ಲಕ್ಷ್ಯವೇ ಕಾರಣ ಎಂದು ಅವರ ಕುಟುಂಬದವರು ಗಂಭೀರ ಆರೋಪ ಮಾಡಿದ್ದಾರೆ. ಮೃತರ ಪುತ್ರ ಸೋನಿ ಚಾಕಿ ಮಾತನಾಡಿ, “ನನ್ನ ತಂದೆ ದೀರ್ಘಕಾಲದಿಂದ ಮಧುಮೇಹ ಮತ್ತು ಹೃದಯ ಸಂಬಂಧಿ ಕಾಯಿಲೆಯಿಂದ ಬಳಲುತ್ತಿದ್ದರು. ಜೈಲಿನಲ್ಲಿ ಅವರ ಆರೋಗ್ಯ ಹದಗೆಟ್ಟರೂ ಅಧಿಕಾರಿಗಳು ನಮಗೆ ಅಧಿಕೃತವಾಗಿ ಮಾಹಿತಿ ನೀಡಿರಲಿಲ್ಲ. ಬೇರೆಯವರಿಂದ ವಿಷಯ ತಿಳಿದು ನಾವು ಆಸ್ಪತ್ರೆಗೆ ಧಾವಿಸಿದೆವು. ಅವರಿಗೆ ಸರಿಯಾದ ಚಿಕಿತ್ಸೆ ಸಿಗದ ಕಾರಣ ಅವರು ಮೃತಪಟ್ಟಿದ್ದಾರೆ,” ಎಂದು ನೋವು ತೋಡಿಕೊಂಡಿದ್ದಾರೆ. ಅಷ್ಟೇ ಅಲ್ಲದೆ, ಯಾವುದೇ ಪ್ರಕರಣದಲ್ಲಿ ಹೆಸರಿಲ್ಲದಿದ್ದರೂ ಅವರನ್ನು ಅಕ್ರಮವಾಗಿ ಬಂಧಿಸಲಾಗಿತ್ತು ಎಂದು ಅವರು ದೂರಿದ್ದಾರೆ.
ಅಧಿಕಾರಿಗಳು ಹೇಳಿದ್ದೇನು?
ಕುಟುಂಬದ ಆರೋಪಗಳನ್ನು ತಿರಸ್ಕರಿಸಿರುವ ಪಬ್ನಾ ಜೈಲಿನ ಅಧೀಕ್ಷಕ ಮೊಹಮ್ಮದ್ ಓಮರ್ ಫಾರೂಕ್, ಚಾಕಿ ಅವರಿಗೆ ಜೈಲಿನಲ್ಲಿ ಲಭ್ಯವಿರುವ ವೈದ್ಯಕೀಯ ದಾಖಲೆಗಳ ಆಧಾರದ ಮೇಲೆ ಸೂಕ್ತ ಚಿಕಿತ್ಸೆ ನೀಡಲಾಗಿತ್ತು ಎಂದು ಸಮರ್ಥಿಸಿಕೊಂಡಿದ್ದಾರೆ. ಮಧುಮೇಹ ಮತ್ತು ರಕ್ತದೊತ್ತಡ ತೀವ್ರಗೊಂಡ ಹಿನ್ನೆಲೆಯಲ್ಲಿ ಅವರನ್ನು ಮೊದಲು ಪಬ್ನಾ ಸದರ್ ಆಸ್ಪತ್ರೆಗೆ ಮತ್ತು ನಂತರ ಶುಕ್ರವಾರ ರಾತ್ರಿ ರಾಜಶಾಹಿ ವೈದ್ಯಕೀಯ ಕಾಲೇಜು ಆಸ್ಪತ್ರೆಗೆ ದಾಖಲಿಸಲಾಗಿತ್ತು ಎಂದು ಅವರು ತಿಳಿಸಿದ್ದಾರೆ.
ಶೇಖ್ ಹಸೀನಾ ಅವರ ಪದಚ್ಯುತಿಯ ನಂತರ ಮುಹಮ್ಮದ್ ಯೂನಸ್ ನೇತೃತ್ವದ ಮಧ್ಯಂತರ ಸರ್ಕಾರದ ಅವಧಿಯಲ್ಲಿ ಬಾಂಗ್ಲಾದೇಶದಲ್ಲಿ ಅಲ್ಪಸಂಖ್ಯಾತರ ಮೇಲಿನ ದಾಳಿಗಳು ಹೆಚ್ಚುತ್ತಿವೆ. ಈ ಘಟನೆಯು ಅಂತರಾಷ್ಟ್ರೀಯ ಮಟ್ಟದಲ್ಲಿ ಚರ್ಚೆಗೆ ಕಾರಣವಾಗಿದ್ದು, ಭಾರತವು ಬಾಂಗ್ಲಾದಲ್ಲಿರುವ ಹಿಂದೂಗಳ ರಕ್ಷಣೆಯ ಬಗ್ಗೆ ಈಗಾಗಲೇ ಹಲವು ಬಾರಿ ಕಳವಳ ವ್ಯಕ್ತಪಡಿಸಿದೆ. ಫೆ.12ರಂದು ಬಾಂಗ್ಲಾದೇಶದಲ್ಲಿ ಸಾರ್ವತ್ರಿಕ ಚುನಾವಣೆ ನಡೆಯಲಿದ್ದು, ಈ ಹೊತ್ತಿನಲ್ಲಿ ರಾಜಕೀಯ ದ್ವೇಷ ಮತ್ತು ಹಿಂಸಾಚಾರಗಳು ಮತ್ತಷ್ಟು ಹೆಚ್ಚಾಗಿರುವುದು ಆತಂಕಕಾರಿ ಬೆಳವಣಿಗೆಯಾಗಿದೆ.
ಇದನ್ನೂ ಓದಿ: ಬೆಂಗಳೂರಿನಲ್ಲಿ ‘ಜೈ ಬಾಂಗ್ಲಾ’ ಘೋಷಣೆ ಕೂಗಿದ ಮಹಿಳೆ ಅರೆಸ್ಟ್!



















