ನವದೆಹಲಿ: ರೇಸಿಂಗ್ ಬೈಕ್ ಪ್ರಿಯರ ನೆಚ್ಚಿನ ಬ್ರಾಂಡ್ ಕೆಟಿಎಂ, ಭಾರತೀಯ ಮಾರುಕಟ್ಟೆಗೆ ತನ್ನ ಹೊಸ ‘ಕೆಟಿಎಂ ಆರ್‌ಸಿ 160’ (KTM RC 160) ಬೈಕ್ ಅನ್ನು ಪರಿಚಯಿಸಿದೆ. 160 ಸಿಸಿ ವಿಭಾಗದಲ್ಲಿ ರೇಸ್ ಟ್ರ್ಯಾಕ್ ವಿನ್ಯಾಸದ ಈ ಬೈಕ್ ಬಿಡುಗಡೆಯಾಗಿದ್ದು, ಇದರ ಎಕ್ಸ್ ಶೋರೂಂ ಬೆಲೆ 1,85,000 ರೂ. ಎಂದು ನಿಗದಿಪಡಿಸಲಾಗಿದೆ.
ಈ ಹೊಸ ಬೈಕ್ ಮೂಲಕ ಕೆಟಿಎಂ, ತನ್ನ ಜನಪ್ರಿಯ ‘ಆರ್‌ಸಿ’ ಸರಣಿಯನ್ನು ಮತ್ತಷ್ಟು ವಿಸ್ತರಿಸಿದೆ. ಕಡಿಮೆ ಸಾಮರ್ಥ್ಯದ ಎಂಜಿನ್ ವಿಭಾಗದಲ್ಲೂ ರೇಸಿಂಗ್ ಅನುಭವ ನೀಡುವ ಉದ್ದೇಶದಿಂದ ಈ ಬೈಕ್ ಅನ್ನು ವಿನ್ಯಾಸಗೊಳಿಸಲಾಗಿದೆ ಎಂದು ಕಂಪನಿ ತಿಳಿಸಿದೆ.
ಎಂಜಿನ್ ಸಾಮರ್ಥ್ಯ ಮತ್ತು ವೇಗ
ಹೊಸ ಆರ್‌ಸಿ 160 ಬೈಕ್‌ನಲ್ಲಿ 164.2 ಸಿಸಿ ಲಿಕ್ವಿಡ್ ಕೂಲ್ಡ್ SOHC ಎಂಜಿನ್ ಅಳವಡಿಸಲಾಗಿದೆ. ಇದು 9,500 ಆರ್‌ಪಿಎಂನಲ್ಲಿ 19 ಬಿಎಚ್‌ಪಿ (bhp) ಶಕ್ತಿ ಮತ್ತು 7,500 ಆರ್‌ಪಿಎಂನಲ್ಲಿ 15.5 ಎನ್‌ಎಂ ಟಾರ್ಕ್ ಉತ್ಪಾದಿಸುತ್ತದೆ. 6-ಸ್ಪೀಡ್ ಗೇರ್‌ಬಾಕ್ಸ್ ಹೊಂದಿರುವ ಈ ಬೈಕ್, ಅಸಿಸ್ಟ್ ಮತ್ತು ಸ್ಲಿಪ್ಪರ್ ಕ್ಲಚ್ ಸೌಲಭ್ಯವನ್ನೂ ಒಳಗೊಂಡಿದೆ. ಗಂಟೆಗೆ 118 ಕಿ.ಮೀ. ಗರಿಷ್ಠ ವೇಗದಲ್ಲಿ ಚಲಿಸಬಲ್ಲ ಈ ಬೈಕ್, 10,200 ಆರ್‌ಪಿಎಂ ವರೆಗೆ ರೆವ್ ಆಗುವ ಸಾಮರ್ಥ್ಯ ಹೊಂದಿದೆ.
ವಿನ್ಯಾಸ ಮತ್ತು ವೈಶಿಷ್ಟ್ಯಗಳು
ಕೆಟಿಎಂನ ಟ್ರೇಡ್‌ಮಾರ್ಕ್ ಆಗಿರುವ ಟ್ರೆಲ್ಲಿಸ್ ಫ್ರೇಮ್ ಮತ್ತು ಫುಲ್-ಫೇರಿಂಗ್ ಬಾಡಿವರ್ಕ್ ಅನ್ನು ಈ ಬೈಕ್ ಹೊಂದಿದೆ. 13.75 ಲೀಟರ್ ಸಾಮರ್ಥ್ಯದ ಮೆಟಲ್ ಇಂಧನ ಟ್ಯಾಂಕ್, ಎಲ್‌ಇಡಿ ಲೈಟಿಂಗ್, ಸ್ಪೋರ್ಟಿ ಸ್ಪ್ಲಿಟ್ ಹ್ಯಾಂಡಲ್‌ಬಾರ್ ಮತ್ತು ಎಲ್‌ಸಿಡಿ ಇನ್‌ಸ್ಟ್ರುಮೆಂಟ್ ಕ್ಲಸ್ಟರ್ ಇದರಲ್ಲಿದೆ. ಸುರಕ್ಷತೆಗಾಗಿ ಡ್ಯುಯಲ್ ಚಾನೆಲ್ ಎಬಿಎಸ್ (ABS) ಮತ್ತು ಸೂಪರ್ ಮೋಟೋ ಮೋಡ್ ನೀಡಲಾಗಿದೆ. ಮುಂಭಾಗದಲ್ಲಿ 320 ಎಂಎಂ ಡಿಸ್ಕ್ ಮತ್ತು ಹಿಂಭಾಗದಲ್ಲಿ 230 ಎಂಎಂ ಡಿಸ್ಕ್ ಬ್ರೇಕ್ ಅಳವಡಿಸಲಾಗಿದೆ.
ಬಜಾಜ್ ಆಟೋ ಹೇಳಿದ್ದೇನು?
ಬಿಡುಗಡೆ ಕುರಿತು ಮಾತನಾಡಿದ ಬಜಾಜ್ ಆಟೋ ಲಿಮಿಟೆಡ್‌ನ ಪ್ರೊಬೈಕಿಂಗ್ ಅಧ್ಯಕ್ಷ ಮಾಣಿಕ್ ನಂಗಿಯಾ, “ಹೊಸ ಆರ್‌ಸಿ 160 ಮೂಲಕ ನಾವು ಟ್ರ್ಯಾಕ್ ರೇಸಿಂಗ್ ಅನುಭವವನ್ನು ಹೆಚ್ಚಿನ ಗ್ರಾಹಕರಿಗೆ ತಲುಪಿಸುತ್ತಿದ್ದೇವೆ. ವೇಗ ಮತ್ತು ನಿಯಂತ್ರಣವನ್ನು ಬಯಸುವ ಪ್ರತಿಯೊಬ್ಬ ಯುವ ಸವಾರನಿಗೂ ಈ ಬೈಕ್ ಸೂಕ್ತವಾಗಿದೆ. ಇದು ಕೇವಲ ಎಂಟ್ರಿ ಲೆವೆಲ್ ಬೈಕ್ ಅಲ್ಲ, ಬದಲಿಗೆ ಕೆಟಿಎಂ ಪರ್ಫಾರ್ಮೆನ್ಸ್ ಜಗತ್ತಿಗೆ ನೀಡುವ ಮೊದಲ ಹೆಜ್ಜೆ,” ಎಂದು ಬಣ್ಣಿಸಿದ್ದಾರೆ.
ಇದನ್ನೂ ಓದಿ : ಬಹುನಿರೀಕ್ಷಿತ ಟಾಟಾ ಹ್ಯಾರಿಯರ್ ಮತ್ತು ಸಫಾರಿ ಪೆಟ್ರೋಲ್ ಆವೃತ್ತಿಗಳು ಬಿಡುಗಡೆ : ಬೆಲೆ, ಮೈಲೇಜ್ ಮತ್ತು ವಿಶೇಷತೆಗಳ ಮಾಹಿತಿ ಇಲ್ಲಿದೆ



















