ಬೆಂಗಳೂರು: ರಾಜ್ಯ ಸರ್ಕಾರ, ರಾಜಧಾನಿ ಬೆಂಗಳೂರಿನ ನಂತರ ಇದೀಗ ರಾಜ್ಯಾದ್ಯಂತ ಆಸ್ತಿ ಮಾಲೀಕರಿಗೆ ಸಿಹಿ ಸುದ್ದಿ ಕೊಟ್ಟಿದೆ. ನಗರ ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯಲ್ಲೂ ಬಿ ಖಾತಾಗೆ ಎ ಖಾತಾ ಮಾನ್ಯತೆ ನೀಡಲು ಸಚಿವ ಸಂಪುಟ ಸಭೆ ತೀರ್ಮಾನಿಸಿದೆ.
ಇಂದು ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದಲ್ಲಿ ನಡೆದ ಸಚಿವ ಸಂಪುಟ ಸಭೆಯ ನಂತರ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿದ ಸಚಿವ ಎಚ್.ಕೆ. ಪಾಟೀಲ್ ಅವರು, ರಾಜ್ಯದ ಮಹಾನಗರ ಪಾಲಿಕೆಗಳು, ನಗರಸಭೆ ವ್ಯಾಪ್ತಿಯ ಅಕ್ರಮ ಬಡಾವಣೆಗಳಲ್ಲಿರುವ ಬಿ-ಖಾತಾ ಆಸ್ತಿಗಳಿಗೆ ಎ-ಖಾತಾ ನೀಡಲು ಸಂಪುಟ ಸಭೆ ಅನುಮೋದನೆ ನೀಡಿದೆ ಎಂದಿದ್ದಾರೆ.
ಗ್ರೇಟರ್ ಬೆಂಗಳೂರು ಅಥಾರಿಟಿ ಮಾದರಿಯಲ್ಲೇ ನಿಯಮ ರೂಪಿಸಿ ರಾಜ್ಯದಾದ್ಯಂತ ಬಿ ಖಾತಾ ಆಸ್ತಿಗಳಿಗೆ ಎ ಖಾತಾ ನೀಡಲಾಗುತ್ತೆ. ರಾಜ್ಯದ ನಗರ ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯಲ್ಲಿ ಸಕ್ಷಮ ಪ್ರಾಧಿಕಾರದ ಅನುಮೋದನೆ ಪಡೆಯದೆ ರಚಿಸಿರುವ ಬಡಾವಣೆಗಳಲ್ಲಿನ ‘ಬಿ-ಖಾತಾ’ ನಿವೇಶನ/ಕಟ್ಟಡ/ ಅಪಾರ್ಟ್ ಮೆಂಟ್/ ಫ್ಲಾಟ್ ಗಳಿಗೆ ಎ-ಖಾತಾ” ನೀಡಲು ಸಂಪುಟ ಒಪ್ಪಿಗೆ ನೀಡಿದೆ ಎಂದರು.
ಜಿಬಿಎ ಮಾದರಿಯಲ್ಲೆ ನಿಯಮ ರೂಪಿಸಿ ಎ ಖಾತಾ ನೀಡಲು ನಿರ್ಧಾರ ಕೈಗೊಳ್ಳಲಾಗಿದೆ. ಇದರಿಂದ ಬೆಂಗಳೂರು ಹೊರತುಪಡಿಸಿ ರಾಜ್ಯದ ಎಲ್ಲ ಜಿಲ್ಲೆಗಳಲ್ಲಿರುವ ಪುರಸಭೆ, ಪಟ್ಟಣ ಪಂಚಾಯಿತಿ, ನಗರಸಭೆ, ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿನ ಬಿ ಖಾತಾ ಆಸ್ತಿಗಳನ್ನು ಎ ಖಾತಾ ಆಸ್ತಿಗಳಾಗಿ ಪರಿವರ್ತಿಸಿಕೊಳ್ಳಲು ಅವಕಾಶ ಸಿಗಲಿದೆ ಎಂದು ಸಚಿವರು ತಿಳಿಸಿದರು.
ಇದನ್ನೂ ಓದಿ : BPL ಕಾರ್ಡ್ ಅನರ್ಹ ಆದ್ರೆ ಗೃಹಲಕ್ಷ್ಮಿ ಹಣ ಬರೋದಿಲ್ಲ | ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಸ್ಪಷ್ಟನೆ!



















