ಮಧುರೈ: ತಮಿಳುನಾಡಿನಲ್ಲಿ ಇತ್ತೀಚೆಗೆ ವಿವಾದದ ಕೇಂದ್ರಬಿಂದುವಾಗಿದ್ದ ಪ್ರಸಿದ್ಧ ಧಾರ್ಮಿಕ ಕೇಂದ್ರ ತಿರುಪರಂಕುಂದ್ರಂ ಬೆಟ್ಟದ ಮೇಲಿನ ಕಾರ್ತಿಕ ದೀಪ ವಿವಾದದಲ್ಲಿ ಇದೀಗ ತಮಿಳುನಾಡಿನ ಡಿಎಂಕೆ ಸರ್ಕಾರಕ್ಕೆ ಹೈಕೋರ್ಟ್‌ನಲ್ಲಿ ತೀವ್ರ ಮುಖಭಂಗವಾಗಿದೆ.
ಬೆಟ್ಟದ ಮೇಲಿನ ಕಲ್ಲಿನ ಸ್ತಂಭದ ಮೇಲೆ ಕಾರ್ತಿಕ ದೀಪವನ್ನು ಬೆಳಗುವಂತೆ ಈ ಹಿಂದೆ ನೀಡಲಾಗಿದ್ದ ಆದೇಶವನ್ನು ಮಧುರೈ ಹೈಕೋರ್ಟ್ ಎತ್ತಿಹಿಡಿದಿದೆ. ಕೋರ್ಟಿನ ಈ ಆದೇಶದಿಂದ ಬಿಜೆಪಿ ಹಾಗೂ ಹಿಂದೂ ಸಂಘಟನೆಗಳಿಗೆ ಗೆಲುವು ಸಿಕ್ಕಂತಾಗಿದೆ.

ನ್ಯಾಯಪೀಠ ಹೇಳಿದ್ದೇನು?
ಬೆಟ್ಟದ ಮೇಲೆ ಕಾರ್ತಿಕ ದೀಪ ಬೆಳಗುವ ವಿಷಯಕ್ಕೆ ಅನಗತ್ಯವಾಗಿ ರಾಜಕೀಯ ಬಣ್ಣ ನೀಡಲಾಗಿದೆ ಎಂದು ನ್ಯಾ. ಜಿ. ಜಯಚಂದ್ರನ್ ಮತ್ತು ನ್ಯಾ.ಕೆ.ಕೆ. ರಾಮಕೃಷ್ಣನ್ ಅವರನ್ನೊಳಗೊಂಡ ವಿಭಾಗೀಯ ಪೀಠ ಅಭಿಪ್ರಾಯಪಟ್ಟಿದೆ. ಜಿಲ್ಲಾಡಳಿತವು ಈ ವಿಚಾರವನ್ನು ಎರಡು ಸಮುದಾಯಗಳ ನಡುವಿನ ಅಂತರವನ್ನು ಕಡಿಮೆ ಮಾಡಲು ಒಂದು ಅವಕಾಶವಾಗಿ ಬಳಸಿಕೊಳ್ಳಬೇಕಿತ್ತು ಮತ್ತು ಸಂಧಾನದ ಮೂಲಕ ಬಗೆಹರಿಸಬೇಕಿತ್ತು ಎಂದು ಕೋರ್ಟ್ ಹೇಳಿದೆ.
ಬೆಟ್ಟವು ಸಂರಕ್ಷಿತ ಪ್ರದೇಶವಾಗಿರುವುದರಿಂದ, ಅಲ್ಲಿ ನಡೆಯುವ ಚಟುವಟಿಕೆಗಳು ಪುರಾತತ್ವ ಇಲಾಖೆಯ ನಿಯಮಗಳಿಗೆ ಒಳಪಟ್ಟಿರಬೇಕು ಎಂದೂ ನ್ಯಾಯಪೀಠ ಹೇಳಿದೆ. ದೀಪ ಬೆಳಗಲು ಅನುಮತಿ ನೀಡಲಾಗಿದ್ದರೂ, ಅಲ್ಲಿಗೆ ಸಾರ್ವಜನಿಕರ ಪ್ರವೇಶವನ್ನು ನಿರ್ಬಂಧಿಸಲಾಗಿದೆ.
ಏನಿದು ವಿವಾದ?
ಹಿಂದೂ ತಮಿಳು ಪಕ್ಷದ ನಾಯಕ ರಾಮ ರವಿಕುಮಾರ್ ಅವರು ಬೆಟ್ಟದ ಮೇಲೆ ದೀಪ ಬೆಳಗಲು ಅನುಮತಿ ಕೋರಿ ಅರ್ಜಿ ಸಲ್ಲಿಸಿದ್ದರು. ಕಳೆದ ವರ್ಷ ಡಿಸೆಂಬರ್ 1 ರಂದು ಏಕಸದಸ್ಯ ಪೀಠವು ಇದಕ್ಕೆ ಅನುಮತಿ ನೀಡಿತ್ತು. ಆದರೆ, ಕಾನೂನು ಮತ್ತು ಸುವ್ಯವಸ್ಥೆಯ ಕಾರಣ ನೀಡಿ ಸರ್ಕಾರ ಈ ಆದೇಶವನ್ನು ಜಾರಿಗೆ ತಂದಿರಲಿಲ್ಲ.
ದೇವಾಲಯದ ಆಡಳಿತ ಮಂಡಳಿಯು ಕಳೆದ 100 ವರ್ಷಗಳಿಂದಲೂ ಈ ಸಂಪ್ರದಾಯ ನಡೆದುಕೊಂಡು ಬರುತ್ತಿದೆ ಎಂದು ವಾದಿಸಿತ್ತು. ಆದರೆ, ಬೆಟ್ಟದ ಮೇಲೆ ದರ್ಗಾ ಇರುವುದರಿಂದ ಮತ್ತು ಅಲ್ಲಿ ದೀಪದ ಕಂಬ ಇರುವ ಬಗ್ಗೆ ಪುರಾವೆಗಳಿಲ್ಲ ಎಂಬ ಕಾರಣ ಹೇಳಿ ಸರ್ಕಾರ ಇದನ್ನು ವಿರೋಧಿಸಿತ್ತು. ಈ ವಿವಾದದ ನಡುವೆಯೇ ವ್ಯಕ್ತಿಯೊಬ್ಬರು ಆತ್ಮಹತ್ಯೆ ಮಾಡಿಕೊಂಡಿದ್ದು ಪ್ರತಿಭಟನೆಗೆ ಕಾರಣವಾಗಿತ್ತು.
ರಾಜಕೀಯ ಪ್ರತಿಕ್ರಿಯೆ:
ಹೈಕೋರ್ಟ್‌ನ ಈ ತೀರ್ಪನ್ನು ಬಿಜೆಪಿ ಸ್ವಾಗತಿಸಿದೆ. ಇದು “ಹಿಂದೂ ನಂಬಿಕೆಗೆ ಸಂದ ಜಯ” ಎಂದು ಬಿಜೆಪಿ ವಕ್ತಾರ ಶೆಹಜಾದ್ ಪೂನವಾಲಾ ಬಣ್ಣಿಸಿದ್ದು, ಆಡಳಿತಾರೂಢ ಡಿಎಂಕೆ ಸರ್ಕಾರಕ್ಕೆ ಈ ತೀರ್ಪು ತೀವ್ರ ಹಿನ್ನಡೆ ಉಂಟುಮಾಡಿದೆ ಎಂದು ಟೀಕಿಸಿದ್ದಾರೆ.
ಇದನ್ನೂ ಓದಿ:ಮತ್ತೆ ಬಣ್ಣ ಹಚ್ಚಿದ ಸಂಸದೆ ಕಂಗನಾ | ‘ಭಾರತ್ ಭಾಗ್ಯ ವಿಧಾತಾ’ ಶೂಟಿಂಗ್ ಆರಂಭ



















