ಬೆಂಗಳೂರು: ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರವು 2016ರ ನವೆಂಬರ್ 8ರಂದು ದೇಶಾದ್ಯಂತ 500 ಹಾಗೂ 1,000 ಮುಖಬೆಲೆಯ ನೋಟುಗಳನ್ನು ರದ್ದುಗೊಳಿಸಿತು. ಇದಾದ ಬಳಿಕ, 2 ಸಾವಿರ ರೂಪಾಯಿ ಮುಖಬೆಲೆಯ ನೋಟುಗಳ ಚಲಾವಣೆಯನ್ನೂ ನಿಲ್ಲಿಸಿತು. ಈಗ 500 ರೂಪಾಯಿ ನೋಟುಗಳನ್ನು ಕೂಡ 2026ರ ಮಾರ್ಚ್ ನಿಂದ ನಿಷೇಧಿಸಲಾಗುತ್ತಿದೆ ಎಂಬ ಮಾತುಗಳು ಕೇಳಿಬಂದಿವೆ.
ಹೌದು, 500 ರೂಪಾಯಿ ನೋಟುಗಳನ್ನು ಮಾರ್ಚ್ ನಲ್ಲಿ ನಿಷೇಧಿಸಲಾಗುತ್ತದೆ. ಇನ್ನುಮುಂದೆ ಎಟಿಎಂಗಳಲ್ಲಿ 500 ರೂಪಾಯಿ ನೋಟುಗಳೇ ಲಭ್ಯವಿರುವುದಿಲ್ಲ. ಆ ಮೂಲಕ ದೇಶದಲ್ಲಿ 100 ರೂಪಾಯಿ ಹಾಗೂ 200 ರೂಪಾಯಿ ಮುಖಬೆಲೆಯ ನೋಟುಗಳು ಮಾತ್ರ ಚಲಾವಣೆಯಲ್ಲಿ ಇರುತ್ತವೆ ಎಂಬ ಪೋಸ್ಟ್ ಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿವೆ. ಇದು ಭಾರಿ ಚರ್ಚೆಗೂ ಕಾರಣವಾಗಿದೆ.
ನಿಜವಾಗಿಯೂ ನಿಷೇಧ ಖಚಿತ?
500 ರೂಪಾಯಿ ನೋಟುಗಳ ನಿಷೇಧ, ಎಟಿಎಂಗಳಲ್ಲಿ ಸಿಗುವುದಿಲ್ಲ ಎಂಬ ಪೋಸ್ಟ್ ಗಳ ಕುರಿತು ಕೇಂದ್ರ ಸರ್ಕಾರದ ಫ್ಯಾಕ್ಟ್ ಚೆಕ್ ಘಟಕವಾದ ಪಿಐಬಿಯೂ ಇದರ ಕುರಿತು ಸ್ಪಷ್ಟನೆ ನೀಡಿದೆ. “2026ರ ಮಾರ್ಚ್ ನಿಂದ ಎಟಿಎಂಗಳಲ್ಲಿ 500 ರೂಪಾಯಿ ನೋಟುಗಳು ಸಿಗುವುದಿಲ್ಲ ಎಂಬ ಪೋಸ್ಟ್ ಗಳು ಸತ್ಯಕ್ಕೆ ದೂರವಾಗಿವೆ. ಎಂದಿನಂತೆ 500 ರೂಪಾಯಿ ನೋಟುಗಳು ಚಲಾವಣೆಯಲ್ಲಿ ಇರಲಿವೆ. ಯಾರೂ ವದಂತಿಗಳಿಗೆ ಕಿವಿ ಕೊಡಬಾರದು” ಎಂದು ಸ್ಪಷ್ಟನೆ ನೀಡಿದೆ.
ಇದರೊಂದಿಗೆ 500 ರೂಪಾಯಿ ನೋಟುಗಳು ರದ್ದಾಗುತ್ತವೆ ಎಂಬ ಪೋಸ್ಟ್ ಗಳು ಸುಳ್ಳು ಎಂಬುದು ಸಾಬೀತಾದಂತೆ ಆಗಿದೆ. ಆದಾಗ್ಯೂ, ನೋಟುಗಳ ಅಮಾನ್ಯದ ಕುರಿತು ಇದುವರೆಗೆ ಕೇಂದ್ರ ಸರ್ಕಾರವಾಗಲಿ, ಆರ್ ಬಿಐ ಆಗಲಿ ಯಾವುದೇ ಆದೇಶ ಹೊರಡಿಸಿಲ್ಲ.
ಇದನ್ನೂ ಓದಿ: ಕ್ರೀಡಾ ಲೋಕದ ಮಹಾಕುಂಭಕ್ಕೆ ಭಾರತ ಸಜ್ಜು | 2036ರ ಒಲಿಂಪಿಕ್ಸ್ ಆಯೋಜನೆಗೆ ಪ್ರಧಾನಿ ಮೋದಿ ಘೋಷಣೆ



















