ಬೆಂಗಳೂರು: ನಗರದ ಕುಮಾರಕೃಪಾ ರಸ್ತೆಯಲ್ಲಿನ ಚಿತ್ರಕಲಾ ಪರಿಷತ್ನಲ್ಲಿ ಆಯೋಜಿಸಿರುವ ಪ್ರತಿಷ್ಟಿತ 23ನೇ ಚಿತ್ರಸಂತೆಯನ್ನು ಕ್ವಾನ್ವಸ್ ಮೇಲೆ ಬರೆಯುವ ಮೂಲಕ ಸಿಎಂ ಸಿದ್ದರಾಮಯ್ಯ ಇಂದು ಉದ್ಘಾಟಿಸಿದ್ದಾರೆ.
ಬಳಿಕ ಮಾತನಾಡಿದ ಸಿಎಂ, “ಅತ್ಯಂತ ಸಂತೋಷದಿದ 23ನೇ ಚಿತ್ರಸಂತೆ ಉದ್ಘಾಟಿಸಿದ್ದೇನೆ. ಇದು ನಾನು 8ನೇ ಬಾರಿ ಚಿತ್ರಸಂತೆಯಲ್ಲಿ ಭಾಗವಹಿಸುತ್ತಿರುವುದು. ಕಲಾವಿದರನ್ನು ಪ್ರೋತ್ಸಾಹಿಸಲು ಚಿತ್ರ ಪ್ರದರ್ಶನ ಹಾಗೂ ಮಾರಾಟದ ವೇದಿಕೆಯನ್ನು ಚಿತ್ರಕಲಾ ಪರಿಷತ್ ಅನೇಕ ವರ್ಷದಿಂದ ಮಾಡುತ್ತಿದೆ. 2003ರಲ್ಲಿ ಆರಂಭವಾಗಿದ್ದ ಚಿತ್ರಸಂತೆ ಇದೀಗ 23ನೇ ಚಿತ್ರಸಂತೆಯಾಗಿದೆ. 22 ರಾಜ್ಯ ಹಾಗೂ 4 ಕೇಂದ್ರಾಡಳಿತ ಪ್ರದೇಶದ ಕಲಾವಿದರು ಭಾಗಿಯಾಗಿದ್ದಾರೆ. ಕಲಾವಿದರು, ಜನರು ಸೇರಲು ಒಂದು ವೇದಿಕೆ ಬೇಕಾಗುತ್ತದೆ. ಅದನ್ನು ಚಿತ್ರಕಲಾ ಪರಿಷತ್ ಮಾಡುತ್ತಿದೆ. ನಾವು ಅದಕ್ಕೆ ಸಹಾಯ ಮಾಡುತ್ತಾ ಬಂದಿದ್ದೇವೆ. ಮುಂದೆಯೂ ಸಹಾಯ ಮಾಡುತ್ತೇವೆ” ಎಂದು ಕಾರ್ಯಕ್ರವನ್ನು ಉದ್ದೇಶಿಸಿ ಮಾತನಾಡಿದ್ದಾರೆ.

“ಕಲೆ ರಾಜ್ಯದ ಸಂಸ್ಕೃತಿಯ ಕೈಗನ್ನಡಿ ಎಂದು ರವಿವರ್ಮಾ ಹೇಳಿದ್ದರು. ಚಿತ್ರಕಲಾ ಪರಿಷತ್ ಅಧ್ಯಕ್ಷ ಬಿ.ಎಲ್.ಶಂಕರ್ ಅವರು, ಮ್ಯೂಸಿಯಂ ಮಾಡಬೇಕು ಎಂದು ಹೇಳಿದ್ದಾರೆ. ಅದನ್ನು ನಾವು ಸ್ವಾಗತಿಸುತ್ತೇವೆ. ಈ ವರ್ಷದ ಚಿತ್ರಸಂತೆಯನ್ನು ಪರಿಸರಕ್ಕೆ ಸಮರ್ಪಿಸಲಾಗಿದೆ. ನಾವು ಪರಿಸರ ರಕ್ಷಣೆ ಮಾಡಿದರೆ, ಪರಿಸರ ನಮ್ಮ ರಕ್ಷಣೆ ಮಾಡುತ್ತದೆ. ಬೆಂಗಳೂರಲ್ಲಿ ವಾಯುಮಾಲಿನ್ಯ ಜಾಸ್ತಿ ಆಗುತ್ತಿದೆ. ದೆಹಲಿಯಲ್ಲಿ ಬದುಕಲು ಸಾಧ್ಯವಾಗದ ಪರಿಸ್ಥಿತಿ ನಿರ್ಮಾಣವಾಗಿದೆ. ಹೀಗಾಗಿ ನಾವೆಲ್ಲರೂ ಪರಿಸರ ರಕ್ಷಣೆ ಮಾಡಬೇಕು” ಎಂದು ಕರೆ ನೀಡಿದರು.
ಸಿಎಂಗೆ ಚಿತ್ರ ಗಿಫ್ಟ್
ಚಿತ್ರಸಂತೆಯಲ್ಲಿ ಸಿಎಂ ಸಿದ್ದರಾಮಯ್ಯರಿಗೆ ಅವರದೇ ಚಿತ್ರವನ್ನು ಗಿಫ್ಟ್ ನೀಡಲಾಯಿತು. ಹಾನಗಲ್‌ನಿಂದ ಬಂದಿರುವ ರಾಣಿ ಎಂಬ ಕಲಾವಿದೆ ಚಿತ್ರ ಬಿಡಿಸಿದ್ದಾರೆ. ಸುಮಾರು ಎರಡು ದಿನಗಳಲ್ಲಿ ಈ ಚಿತ್ರ ಬಿಡಿಸಿದ್ದರು. ತಮ್ಮ ಚಿತ್ರವನ್ನು ಸಿದ್ದರಾಮಯ್ಯ ಖುಷಿಯಿಂದ ಸ್ವೀಕರಿಸಿದರು.

ಪ್ರತಿ ಜಿಲ್ಲೆಯಲ್ಲಿ ಸಾಧಕರ ಮ್ಯೂಸಿಯಂ ತೆರೆಯಲು ಮನವಿ: ಪ್ರತಿ ಜಿಲ್ಲೆಗಳಲ್ಲಿ ಸಾಧಕರ ಮ್ಯೂಸಿಯಂ ತೆರೆಯುವಂತೆ, ಕನಿಷ್ಠ ಎರಡು ಕಲಾ ಗ್ಯಾಲರಿ ಶುರು ಮಾಡುವಂತೆ ಚಿತ್ರಕಲಾ ಪರಿಷತ್ ಅಧ್ಯಕ್ಷ ಬಿ.ಎಲ್.ಶಂಕರ್ ಮನವಿ ಮಾಡಿದರು. ಈ ಬಾರಿ ಪರಿಸರಕ್ಕೆ ಚಿತ್ರಸಂತೆಯನ್ನು ಸಮರ್ಪಿಸಿದ್ದೇವೆ ಎಂದರು.
ಇದನ್ನೂ ಓದಿ: ಬಳ್ಳಾರಿ ಜನರ ಆಶೀರ್ವಾದ ಪಡೆದ ಕಾಂಗ್ರೆಸ್, ಈಗ ಬಳ್ಳಾರಿಯನ್ನೇ ಮುಗಿಸಲು ಸಂಚು ಹಾಕ್ತಿದೆ | ಸಚಿವ ವಿ.ಸೋಮಣ್ಣ ಕಿಡಿ



















