ಬೆಂಗಳೂರು: ದೇಶದಲ್ಲಿ ನಿರುದ್ಯೋಗಿಗಳ ಸಂಖ್ಯೆ ಜಾಸ್ತಿಯಾಗುತ್ತಿದೆ. ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಸರಿಯಾದ ಸಮಯಕ್ಕೆ ನೇಮಕಾತಿ ಮಾಡಿಕೊಳ್ಳುವುದಿಲ್ಲ. ಮತ್ತೊಂದೆಡೆ, ಖಾಸಗಿ ಕಂಪನಿಗಳಲ್ಲೂ ಉದ್ಯೋಗದ ಅನಿಶ್ಚಿತತೆ ಜಾಸ್ತಿಯಾಗಿದೆ. ಜಾಗತಿಕ ಕಂಪನಿಗಳೇ ಸಾವಿರಾರು ಉದ್ಯೋಗಿಗಳನ್ನು ವಜಾಗೊಳಿಸುತ್ತಿವೆ. ಇಂತಹ ಪರಿಸ್ಥಿತಿಯ ಮಧ್ಯೆಯೇ, ನಿರುದ್ಯೋಗಿಗಳಿಗೆ ಸಿಹಿ ಸುದ್ದಿಯೊಂದು ಲಭಿಸಿದೆ.
ಹೌದು, ಸ್ಟಾಫಿಂಗ್ ಕಂಪನಿಯಾಗಿರುವ ಟೀಮ್ ಲೀಸ್ ಈಗ 2026ರಲ್ಲಿ ಭಾರತದ ಜಾಬ್ ಟ್ರೆಂಡ್ ಬಗ್ಗೆ ವರದಿ ಪ್ರಕಟಿಸಿದೆ. ವರದಿಯ ಅನ್ವಯ, 2026ರಲ್ಲಿ ಭಾರತದಲ್ಲಿರುವ ಕಂಪನಿಗಳು ಸುಮಾರು 1.2 ಕೋಟಿ ಜನರನ್ನು ನೇಮಕಾತಿ ಮಾಡಿಕೊಳ್ಳಲಿವೆ ಎಂದು ತಿಳಿಸಿದೆ. 2025ರಲ್ಲಿ ಕಂಪನಿಗಳು 80 ಲಕ್ಷದಿಂದ 1 ಕೋಟಿ ಜನರನ್ನು ನೇಮಕಾತಿ ಮಾಡಿಕೊಂಡಿದ್ದು, 2026ರಲ್ಲಿ ಇದರ ಸಂಖ್ಯೆ 1.2 ಕೋಟಿಗೆ ಏರಿಕೆಯಾಗಲಿದೆ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ.
ಟಾಟಾ ಮೋಟರ್ಸ್, ಗೋದ್ರೆಜ್, ಮೋತಿಲಾಲ್ ಓಸ್ವಾಲ್ ಫೈನಾನ್ಶಿಯಲ್ ಸರ್ವಿಸಸ್, ಇವೈ ಇಂಡಿಯಾ ಸೇರಿ ದೇಶದ ಪ್ರಮುಖ ಕಂಪನಿಗಳು ಸಾವಿರಾರು ಉದ್ಯೋಗಿಗಳನ್ನು ನೇಮಕಾತಿ ಮಾಡಿಕೊಳ್ಳಲಿವೆ. ಫ್ರೆಶರ್ ಗಳಿಗೆ, ಅದರಲ್ಲೂ ಕೃತಕ ಬುದ್ಧಿಮತ್ತೆ ತಂತ್ರಜ್ಞಾನ ಸೇರಿ ಹಲವು ಕೌಶಲ ಇದ್ದವರಿಗೆ ಇಂತಹ ಕಂಪನಿಗಳು ಆದ್ಯತೆ ನೀಡಲಿವೆ ಎಂದು ವರದಿ ತಿಳಿಸಿದೆ. ಹಾಗಾಗಿ, ಈಗಷ್ಟೇ ಕೋರ್ಸ್ ಮುಗಿಸಿದವರಿಗೆ, ಮುಗಿಸುವವರಿಗೆ ಇದು ಗುಡ್ ನ್ಯೂಸ್ ಎನಿಸಿದೆ.
ಭಾರತದ ತಂತ್ರಜ್ಞಾನ, ಹಣಕಾಸು, ಎಂಎಸ್ಎಂಇ, ಆಟೋಮೊಬೈಲ್, ಎಲೆಕ್ಟ್ರಾನಿಕ್ಸ್ ಸೇರಿ ಹಲವು ವಲಯಗಳಲ್ಲಿ ಭರ್ಜರಿ ನೇಮಕಾತಿ ನಡೆಯಲಿದೆ ಎಂದು ಹೇಳಲಾಗಿದೆ. ಕೃತಕ ಬುದ್ಧಿಮತ್ತೆ ತಂತ್ರಜ್ಞಾನದಿಂದ ಜನ ಉದ್ಯೋಗ ಕಳೆದುಕೊಳ್ಳುವ ಭೀತಿಯಲ್ಲಿರುವ ಮಧ್ಯೆಯೇ ಭಾರತದಲ್ಲಿ ಕೋಟ್ಯಂತರ ಜನರಿಗೆ ಉದ್ಯೋಗ ಲಭಿಸುವ ನಿರೀಕ್ಷೆ ಇರುವುದು ಸಂತಸದ ಸುದ್ದಿಯಾಗಿದೆ.
ಇದನ್ನೂ ಓದಿ: ಐಐಟಿ ಹೈದರಾಬಾದ್‌ನಲ್ಲಿ ಹೊಸ ಇತಿಹಾಸ | 21ರ ಹರೆಯದ ವಿದ್ಯಾರ್ಥಿಗೆ 2.5 ಕೋಟಿ ರೂಪಾಯಿ ಬಂಪರ್ ಆಫರ್!



















